ಮದ್ಯ ಅಕ್ರಮ ಮಾರಾಟ ಸ್ಥಗಿತಗೊಳಿಸಿ

MDG visit
ಮೂಡಿಗೆರೆ ಅಬಕಾರಿ ಕಚೇರಿ ಎದುರು ಜಿ.ಹೊಸಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗ್ರಾಪಂ ಸದಸ್ಯ ಆನಂದ, ಜ್ಯೋತಿ ವಿಠಲ್, ಎಚ್.ಎ.ವಿಠಲ್, ಎಸ್.ಶೇಖರ್, ಗಿರಿಜಾ, ಹೂವಮ್ಮ, ಆಶಾ ಇತರರಿದ್ದರು.
Published on

ಮೂಡಿಗೆರೆ: ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದ್ದರೂ ಅಬಕಾರಿ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸೋಮವಾರ ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಮುಖಂಡರು ಹಾಗೂ ಜಿ.ಹೊಸಳ್ಳಿ ಮಹಿಳೆಯರು ಪಟ್ಟಣದ ಅಬಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗೋಣಿಬೀಡು ಗ್ರಾಪಂ ಸದಸ್ಯ ಆನಂದ ಮಾತನಾಡಿ, ಗ್ರಾಮೀಣ ಭಾಗದ ಬಹುತೇಕ ದಿನಸಿ ಅಂಗಡಿ ಸೇರಿದಂತೆ ಇತರ ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಜಿ.ಹೊಸಹಳ್ಳಿಯಲ್ಲಿ ಅನೇಕ ಮಂದಿ ಕುಡಿತಕ್ಕೆ ಬಲಿಯಾಗಿದ್ದಾರೆ. ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಿಸದೆ ಸ್ಥಳೀಯ ಅಂಗಡಿಗಳಲ್ಲಿ ಸಿಗುವ ಮದ್ಯ ಕುಡಿದು ಹಣವನ್ನೆಲ್ಲ ಸಂಪೂರ್ಣ ಕುಡಿತಕ್ಕೆ ಖರ್ಚುಮಾಡುತ್ತಿದ್ದಾರೆ. ಮಹಿಳೆಯರು ಕೂಲಿ ಮಾಡಿದ ಹಣವನ್ನೂ ಕಿತ್ತುಕೊಂಡು ಮದ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಬಕಾರಿ ಅಧಿಕಾರಿಗಳು ಅಂಥ ಅಂಗಡಿಗಳ ಮೇಲೆ ದಾಳಿ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ನಾಯಕಿ ಜ್ಯೋತಿ ವಿಠಲ್‌ಮಾತನಾಡಿ, ಗೋಣಿಬೀಡು ವ್ಯಾಪ್ತಿಯಲ್ಲಿ ಅನೇಕ ದಿನಸಿ ಅಂಗಡಿಗಳಲ್ಲಿ ದುಪ್ಪಟ್ಟು ದರದಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಶಾಸಕರಿಗೆ ನಿಜವಾಗಿಯೂ ಮಹಿಳೆಯರ ಮೇಲೆ ಕಾಳಜಿ ಇದ್ದರೆ ಅಕ್ರಮ ಮದ್ಯ ಮಾರಾಟದಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.

ಅಕ್ರಮ ಮದ್ಯ ಮಾರಾಟ ಮಾಡುವವರ ಬಗ್ಗೆ ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಜನರ ಅಹವಾಲು ಆಲಿಸಿದ ಅಬಕಾರಿ ನಿರೀಕ್ಷಕ ಲೋಕೇಶ್ ಮಾತನಾಡಿ, ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ, ಗಾಂಜಾ, ಡ್ರಗ್ಸ್ ಹಾವಳಿ ಬಗ್ಗೆ ಇಲಾಖೆಯಿಂದ ಕಡಿವಾಣ ಹಾಕುತ್ತಿದ್ದೇವೆ. ಜನರು ಮಾಹಿತಿ ನೀಡದಿದ್ದರೂ ನಮ್ಮ ತಂಡ ದಾಳಿ ನಡೆಸಿ ತಿಂಗಳಿಗೆ 3ರಿಂದ 4 ನಾಲ್ಕು ಪ್ರಕರಣ ದಾಖಲು ಮಾಡಲಾಗುತ್ತಿದೆ. ಈಗ ಸಿಕ್ಕಿರುವ ಮಾಹಿ ಪರಿಶೀಲಿಸಿ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಮುಖಂಡರಾದ ಎಚ್.ಎ.ವಿಠಲ್, ಎಸ್.ಶೇಖರ್, ಗ್ರಾಮಸ್ಥರಾದ ಗಿರಿಜಾ, ಹೂವಮ್ಮ, ಆಶಾ, ಪುಷ್ಪಾ, ಚೆಲುವಿ, ಸುನಂದಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net