

ಮುದ್ದೇಬಿಹಾಳ: ತಾಲೂಕಿನ ಕೃಷ್ಣಾ ನದಿ ತೀರದಲ್ಲಿರುವ ಬಂಗಾರಗುಂಡ, ಕಪನೂರ ಗ್ರಾಮಗಳಲ್ಲಿರುವ ಕೆಲವು ಹೋಟೆಲ್, ಕಿರಾಣಿ ಅಂಗಡಿ, ಪಾನ್‌ಶಾಪ್ ಮತ್ತು ಮನೆಗಳಲ್ಲಿ ಮತ್ತೆ ಅಕ್ರಮ ಮದ್ಯ ಮಾರಾಟ ತಡೆಯಬೇಕು ಎಂದು ಎರಡೂ ಗ್ರಾಮಗಳ ಗ್ರಾಮಸ್ಥರು ರಕ್ಕಸಗಿ ಗ್ರಾಪಂ ಪಿಡಿಒ ಪಿ.ಎಸ್.ನಾಯ್ಕೋಡಿ ಹಾಗೂ ಗ್ರಾಪಂಗೆ ಭೇಟಿ ನೀಡಿದ್ದ ತಾಪಂ ಸಹಾಯಕ ನಿರ್ದೇಶಕ ಖೂಬಾಸಿಂಗ್ ಜಾಧವ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಎರಡೂ ಗ್ರಾಮಗಳಿಂದ ಕಾಲ್ನಡಿಗೆಯಲ್ಲೇ ಗ್ರಾಪಂ ಕಚೇರಿಗೆ ಆಗಮಿಸಿದ್ದ ಗ್ರಾಮಸ್ಥರು ಮಾತನಾಡಿ, ಈ ಹಿಂದೆ ಒಂದು ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ಜಿಲ್ಲಾಧಿಕಾರಿ ಅವರ ಗಮನಕ್ಕೆ ಬಂದಾಗ ಅವರು ಜಿಲ್ಲಾ ಅಬಕಾರಿ ಅಧೀಕ್ಷಕರನ್ನು ಗ್ರಾಮಕ್ಕೆ ಕಳಿಸಿದ್ದರು. ಅದರ ಸುಳಿವು ಸಿಕ್ಕ ಅಂಗಡಿಕಾರರು ಮದ್ಯವನ್ನು ನಾಪತ್ತೆ ಮಾಡಿ ಏನೂ ನಡೆಯುತ್ತಿಲ್ಲ ಎಂದು ವಾದಿಸಿದ್ದರು. ಆದರೂ ಜಿಲ್ಲಾ ಅಬಕಾರಿ ಅಧೀಕ್ಷಕರು ಅಕ್ರಮ ಮಾರಾಟ ತಡೆಗೆ ಆಗಲೇ ಸೂಚಿಸಿದ್ದರು. ಇದರಲ್ಲಿ ಗ್ರಾಪಂನವರ ಜವಾಬ್ಧಾರಿ ಬಹಳಷ್ಟಿದೆ ಅನ್ನೋ ಮಾತನ್ನು ಅವರು ಹೇಳಿದ್ದರು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಯಾವ್ಯಾವ ಅಂಗಡಿ, ಹೋಟೆಲ್, ಪಾನ್‌ಶಾಪ್, ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಅನ್ನೋ ಮಾಹಿತಿ ಸಂಗ್ರಹಿಸಿ ಅಂಥವರ ವಿರುದ್ಧ ಪಂಚಾಯಿತಿಯಿಂದಲೇ ಜಿಪಂ ಸಿಇಒ, ತಹಸೀಲ್ದಾರ್‌ಗೆ ವರದಿ ಸಲ್ಲಿಸಬೇಕು. ಅಕ್ರಮ ಮದ್ಯ ಮಾರಾಟ ಶಾಶ್ವತವಾಗಿ ತಡೆಯಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮಹಾದೇವಿ ಮುದೂರ, ದ್ಯಾಮವ್ವ ತಳವಾರ, ಹಣಮಂತ ಗೌಡ್ರ, ನಾಗವ್ವ ನಾಡಗೌಡ್ರ, ಸಂಗವ್ವ ಕುರಿ, ಯಮನವ್ವ ಸಾಲಿಮಠ, ಶರಣಮ್ಮ ಮುದೂರ, ಶೇಖವ್ವ ಬಿರಾದಾರ, ಗಂಗಮ್ಮ ಬಿರಾದಾರ, ಯಲ್ಲವ್ವ ಗುರಿಕಾರ, ರುದ್ರಮ್ಮ ಮದರಿ, ಶಾಂತವ್ವ ಚಲವಾದಿ, ರೇಣುಕಾ ಚಲವಾದಿ, ಶೇಕಮ್ಮ ಹಿರೇಮಠ, ಬೋರಮ್ಮ ಹಿರೇಮಠ, ಸಂಗಮ್ಮ ಹೆರೂರಮಠ ಸೇರಿ 50ಕ್ಕೂ ಹೆಚ್ಚು ಗ್ರಾಮಸ್ಥರು ಇದ್ದರು.
ವಿಜಯವಾಣಿ ವರದಿಯಿಂದ ಅಕ್ರಮ ಬಂದಾಗಿತ್ತು
‘ಬಂಗಾರಗುಂಡದಲ್ಲಿ ಗುಂಡಿನ ಘಮುಟು ಜೋರು’ ಶಿರೋನಾಮೆಯಡಿ ಅಕ್ರಮ ಮದ್ಯ ಮಾರಾಟ ಕುರಿತು ವಿಜಯವಾಣಿಯಲ್ಲಿ ೆ.13ರಂದು ಫೋಟೋ ಸಮೇತ ವರದಿ ಪ್ರಕಟಗೊಂಡಿತ್ತು. ಎಚ್ಚೆತ್ತುಕೊಂಡಿದ್ದ ಪೊಲೀಸರು, ಅಬಕಾರಿ ಇಲಾಖೆಯವರು ಅಕ್ರಮ ಮಾರಾಟ ತಡೆಯಲು ಕ್ರಮ ಕೈಗೊಂಡಿದ್ದರು. ಎರಡು ತಿಂಗಳವರೆಗೂ ಬಂದ್ ಆಗಿದ್ದ ದಂಧೆ ಏಪ್ರಿಲ್ ಎರಡನೇ ವಾರದಿಂದ ಮತ್ತೆ ಶುರುವಾಗಿದೆ. ಮದ್ಯದ ಅಮಲಿನಲ್ಲಿ ಆತ್ಮಹತ್ಯೆಯಂಥ ಘಟನೆಗಳೂ ಹಿಂದೆ ಗ್ರಾಮದಲ್ಲಿ ನಡೆದಿವೆ. ಮದ್ಯದ ಸಹವಾಸದಿಂದ ಹಲವರು ತಮ್ಮ ಕುಟುಂಬವನ್ನು ಬೀದಿಗೆ ತಂದಿದ್ದಾರೆ. ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಅಕ್ಕಪಕ್ಕದ ಹೋಟೆಲ್, ಮನೆಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಯಥೇಚ್ಛವಾಗಿ ನಡೆಯುತ್ತಿರುವುದು ಮಕ್ಕಳ ಮೇಲೆ ಪರಿಣಾಮ ಬೀರುವಂತಾಗುತ್ತಿದೆ ಎನ್ನುವ ಮಾತುಗಳು ಬಂಗಾರಗುಂಡ ಗ್ರಾಮಸ್ಥರಿಂದ ಕೇಳಿಬರುತ್ತಿದೆ.