ಕೋಲಾರ
ನಗರ ಹೊರವಲಯದ ಟಮಕದಲ್ಲಿನ ಕೋಳಿ ಮಾಂಸ ಹಾಗೂ ಮೊಟ್ಟೆ ಅಂಗಡಿ ಮೇಲೆ ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮದ್ಯ ಮತ್ತು ಬಿಯರ್‌ನ್ನು ಜಫ್ತಿ ಮಾಡಿ ಓರ್ವನನ್ನು ಬಂಧಿಸಿದ್ದಾರೆ.
ಟಮಕದಲ್ಲಿನ ಎನ್.ಎಸ್.ಆರ್ ಚಿಕನ್ ಮತ್ತು ಎಗ್ ಸೆಂಟರ್ ಮಾಲೀಕ ನಾರಾಯಣಪ್ಪ ಬಂಧಿತರು. ಅಕ್ರಮ ದಾಸ್ತಾನು ಮಾಡಿದ್ದ ೫.೭೬೦ ಲೀಟರ್ ಮದ್ಯ ಮತ್ತು ೧೫.೬೦೦ ಬಿಯರ್‌ನ್ನು ವಶಕ್ಕೆ ಪಡೆಯಲಾಗಿದ್ದು, ಕೇಸು ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಾಜ್ಞೆ ಜಾರಿಯಲ್ಲಿದೆ. ಎನ್.ಎಸ್.ಆರ್ ಚಿಕನ್ ಮತ್ತು ಎಗ್ ಸೆಂಟರ್‌ನಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿರುವ ಬಗ್ಗೆ ಮಾಹಿತಿ ಆಧರಿಸಿ ಅಬಕಾರಿ ಉಪ ಆಯುಕ್ತ ರವಿಶಂಕರ್ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕ ನಟರಾಜ್, ಅಬಕಾರಿ ನಿರೀಕ್ಷಕಿ ಎಂ. ರಮಾಮಣಿ , ಉಪ ನಿರೀಕ್ಷಕಿ ಸುವರ್ಣ ವಿ. ಕೋಟಿ ದಾಳಿ ನಡೆಸಿದ್ದಾರೆ.