

ಮದ್ದೂರು: ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮನ್‌ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ. ಸ್ವಾಮಿ ಅವರ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ಮಾಡಲಾಯಿತು.
ಪಟ್ಟಣದ ಮದ್ದೂರು-ಮಳ್ಳವಳ್ಳಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು, ಸಿಎಂ ಇಬ್ರಾಹಿಂ ಅವರು ಯೋಗಿ ಆದಿತ್ಯನಾಥ್ ಅವರನ್ನು ಕೂಡ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಹೆದ್ದಾರಿಯಲ್ಲಲಿ ವಾಹನಗಳ ಸಂಚಾರ ತಡೆದಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.\
ಬಿಜೆಪಿ ಮುಖಂಡ ಎಸ್.ಪಿ. ಸ್ವಾಮಿ ಮಾತನಾಡಿ, ಸಿ.ಎಂ. ಇಬ್ರಾಹಿಂ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಲಘುವಾಗಿ ಮಾತನಾಡುವ ಮೂಲಕ ಹಿಂದು ಧರ್ಮದ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂತಹ ಅವಹೇಳನಕಾರಿ ಹೇಳಿಕೆ ನೀಡಿ ಸಮಾಜದಲ್ಲಿ ಶಾಂತಿ ಕದಡುವ ಇಬ್ರಾಹಿಂ ಅವರನ್ನು ಕೂಡಲೇ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಪಂ ಮಾಜಿ ಸದಸ್ಯ ಬೋರಯ್ಯ, ತಾಪಂ ಮಾಜಿ ಸದಸ್ಯ ಚಿಕ್ಕ ಮರಿಯಪ್ಪ, ಗ್ರಾಪಂ ಅಧ್ಯಕ್ಷ ಶಂಕರೇಗೌಡ, ಮುಖಂಡರಾದ ಹನುಂಮತ, ಡಾಬಾ ಕೆಟ್ಟಿ, ಶಿವರಾಮ, ಸತೀಶ, ರವಿಕುಮಾರ, ಹಾಗಲಹಳ್ಳಿ ರಘು, ಮಧು, ಶಿವು, ಸುಧಾಕರ ಇದ್ದರು.