ಮದ್ದೂರು- ಕೊಪ್ಪ ಮಾರ್ಗದ   ಸಂಚಾರಕ್ಕೆ ಅಡಚಣೆ

oppo_2
oppo_2
Published on

ಮದ್ದೂರು: ತಾಲೂಕಿನ ಮದ್ದೂರಿನಿಂದ ಕೊಪ್ಪಕ್ಕೆ ಹೋಗುವ ಮಾರ್ಗದಲ್ಲಿ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿ ಬಿದ್ದಿರುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ.

ಮದ್ದೂರಿನಿಂದ ಸಾಗಿದರೆ ಹೊಸಕೊಪ್ಪ ಸರ್ಕಲ್, ರೈಲ್ವೆ ಮೇಲ್ಸೇತುವೆ, ಚಾಮನಹಳ್ಳಿ, ದೇಶಹಳ್ಳಿ ಗೇಟ್, ಚಾಪುರದೊಡ್ಡಿ, ಶಂಕರಪುರ ಗ್ರಾಮದ ಸೇತುವೆ, ಮರಳಿಗ ಗೇಟ್, ಕುಂಟನಹಳ್ಳಿ ಗೇಟ್, ಅರೆಕಲ್ ದೊಡ್ಡಿ ಗೇಟ್, ಗೊಲ್ಲರದೊಡ್ಡಿ ಸೇರಿದಂತೆ ಹಲವು ಗ್ರಾಮಗಳ ಬಳಿ ರಸ್ತೆ ತೀರಾ ಹದಗೆಟ್ಟಿದೆ. ದೊಡ್ಡದಾಗಿ ಗುಂಡಿ ಬಿದ್ದು ಹಲವು ವರ್ಷಗಳು ಕಳೆದಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ವಹಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮದ್ದೂರಿನಿಂದ ಹಾಗೂ ಇತರೆ ಭಾಗಗಳಿಂದ ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ಲಾರಿಗಳು, ಟ್ರಾಕ್ಟರ್‌ಗಳು ಹಾಗೂ ಮಕ್ಕಳನ್ನು ಕರೆದುಕೊಂಡು ಹೋಗುವ ಶಾಲಾ ವಾಹನಗಳು, ಬಸ್ಸುಗಳು, ಎತ್ತಿನ ಗಾಡಿಗಳು, ಬೈಕ್ ಸವಾರರು ಸೇರಿದಂತೆ ಸಾವಿರಾರು ಸಂಖ್ಯೆಯ ವಾಹನಗಳು ಪ್ರತಿನಿತ್ಯ ಇದೇ ಮಾರ್ಗದಲ್ಲಿ ಸಂಚಾರ ಮಾಡುತ್ತವೆ. ಆದರೆ, ರಸ್ತೆಗಳು ಗುಂಡಿ ಬಿದ್ದಿರುವುದನ್ನು ನೋಡಿದರೆ ಇವುಗಳು ನರ ಬಲಿಗಾಗಿ ಕಾದಂತೆ ಭಾಸವಾಗುತ್ತಿದೆ.

ರೈತರಿಗೆ ನಷ್ಟವಾಗುತ್ತಿದೆ:

ರಸ್ತೆಗಳು ಸರಿಯಿಲ್ಲದ ಕಾರಣ ಕಬ್ಬು ತುಂಬಿದ ಲಾರಿಗಳು, ಟ್ರಾಕ್ಟರ್‌ಗಳು ಹಾಗೂ ಎತ್ತಿನಗಾಡಿ ಹೋಗುವ ಸಂದರ್ಭದಲ್ಲಿ ಕಬ್ಬಿನ ಕಂತೆಗಳು ರಸ್ತೆಗೆ ಬಿದ್ದು ರೈತರಿಗೆ ನಷ್ಟವಾಗುತ್ತಿದೆ. ಕಬ್ಬಿನ ವಾಹನದ ಹಿಂದೆ ಬರುವ ಇತರ ವಾಹನ ಸವಾರರಿಗೂ ಇದರಿಂದ ತೊಂದರೆಯಾಗುತ್ತಿದೆ. ರಾತ್ರಿಯ ವೇಳೆಯಲ್ಲಿ ಈ ಮಾರ್ಗದಲ್ಲಿ ಸಮರ್ಪಕವಾಗಿ ವಿದ್ಯುತ್ ದೀಪಗಳು ಇಲ್ಲ. ಪರಿಣಾಮ ವಾಹನ ಸವಾರರು ಹಾಗೂ ಬೈಕ್ ಸವಾರರು ಕತ್ತಲೆಯಲ್ಲಿ ವಾಹನ ಸಂಚಾರ ಮಾಡುವುದು ಒಂದು ರೀತಿಯ ಸವಾಲಾಗಿದೆ. ಚಾಲನೆ ಸಂದರ್ಭ ಒಂದು ವೇಳೆ ಯಮಾರಿದರೆ ಅಪಘಾತವಾಗಿ ಸಾವು ನೋವುಗಳು ಸಂಭವಿಸುವುದು ಖಚಿತ.

ಮಳೆ ಬಂದರೆ ಯಥಾಸ್ಥಿತಿ: ಮಳೆ ಬಂದರಂತೂ ಈ ಮಾರ್ಗದಲ್ಲಿರುವ ಗುಂಡಿಗಳಲ್ಲಿ ನೀರು ತುಂಬಿಕೊಂಡು ರಸ್ತೆ ಯಾವುದು, ಗುಂಡಿಯಾವುದು ಎಂದು ಗೊತ್ತಾಗದ ಸ್ಥಿತಿ ನಿರ್ಮಾಣವಾಗುತ್ತದೆ. ಈ ಸಂದರ್ಭ ಹಲವಾರು ಅಪಘಾತಗಳಾದ ಉದಾಹರಣೆಯೂ ಇದೆ. ತೀವ್ರವಾಗಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದಾರೆ. ಕೆಲವರು ಅಂಗವಿಕಲರಾದದ್ದೂ ಇದೆ.

ಮರದ ಕೊಂಬೆಗಳ ಅಡಚಣೆ : ಈ ಮಾರ್ಗದ ಇಕ್ಕೆಲಗಳಲ್ಲಿ ಕೆಲವು ಕಡೆಗಳಲ್ಲಿ ಮರದ ಕೊಂಬೆಗಳು ರಸ್ತೆಗೆ ಇಳಿಬಿದ್ದಿವೆ. ಇದರಿಂದಲೂವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಮುಂದಾದರೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಗುಂಡಿ ಬಿದ್ದಿರುವ ರಸ್ತೆಗಳನ್ನು ಸರಿಪಡಿಸುವುದು, ರಸ್ತೆಗೆ ಅಡ್ಡಲಾಗಿ ಜೋತುಬಿದ್ದ ಮರದ ಕೊಂಬೆಗಳನ್ನು ಕತ್ತರಿಸುವುದು- ಈ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ನಮ್ಮ ಕರ್ತವ್ಯ ಎಂದು ಸಂಬಂಧಪಟ್ಟ ಇಲಾಖೆಗಳು ಗಮನ ಹರಿಸಬೇಕಿದೆ ಎಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತೇಪೆ ಹಾಕುವ ಕೆಲಸ ಬೇಡ: ಗುಂಡಿ ಬಿದ್ದಿರುವ ರಸ್ತೆಗಳನ್ನು ಜಲ್ಲಿ ಕಲ್ಲು, ಎಂಸ್ಯಾಂಡ್ ಹಾಕಿ ತಾತ್ಕಾಲಿಕವಾಗಿ ಸರಿಪಡಿಸಿದರೆ ಮಳೆ ಬಂದಾಗ ಯಥಾ ಸ್ಥಿತಿಗೆ ಬರುತ್ತವೆ. ಇದರಿಂದ ಸರ್ಕಾರದ ಹಣ ವ್ಯರ್ಥವಾಗಿ ಪೋಲಾಗುತ್ತದೆ. ಆದರ ಬದಲು ಡಾಂಬರೀ ಕರಣ ಮಾಡಿದರೆ ಕೆಲವು ವರ್ಷಗಳಾದರೂ ರಸ್ತೆ ಚೆನ್ನಾಗಿರುತ್ತದೆ ಎಂಬುವುದು ಸಾರ್ವಜನಿಕರ ಸಲಹೆ. ಹಾಗಾಗಿ ತಾತ್ಕಾಲಿಕವಾಗಿ ತೇಪೆ ಹಾಕುವ ಕೆಲಸ ಬೇಡ ಎಂದು ಜನ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net