

ಮದ್ದೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಚಿತ್ರನಟ ಮುಖ್ಯಮಂತ್ರಿ ಚಂದ್ರು ಅವರು ಅಂಗವಿಕಲರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಸರ್ವೋದಯ ವಿಕಲಚೇತನರ ಸಂಘದ ವತಿಯಿಂದ ತಾಲೂಕು ಆಡಳಿತ ಸೌಧದ ಎದುರು ಗುರುವಾರ ಪ್ರತಿಭಟನೆ ನಡೆಯಿತು.
ಮುಖ್ಯಮಂತ್ರಿ ಚಂದ್ರು ಅವರ ವಿರುದ್ಧ ಘೋಷಣೆಗಳನ್ನು ಕೂಗಿದ ಅಂಗವಿಕಲರು ಕೂಡಲೇ ಅವರ ವಿರುದ್ಧ ಸರ್ಕಾರ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಂಘದ ಗೌರವಾಧ್ಯಕ್ಷ ಮಾದೇಗೌಡ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಚಲನ ಚಿತ್ರ ನಟ ಮುಖ್ಯಮಂತ್ರಿ ಚಂದ್ರು ಅವರು ರಾಜಕೀಯ ವ್ಯಕ್ತಿಗಳನ್ನು ಟೀಕಿಸುವ ಭರದಲ್ಲಿ ಅಂಗವಿಕಲ ಸಮೂಹವನ್ನು ನಿಂದನೆ, ಅಪಮಾನ ಮಾಡಿದ್ದಾರೆ. ಆ ಕಾರ್ಯಕ್ರಮದಲ್ಲಿ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿ ಕುಂಟನೇ, ಕುರುಡನೇ, ಹೆಳವನೇ, ಹುಚ್ಚನೇ, ಹಾಗೂ ಭ್ರಷ್ಟಚಾರಿಯೇ ಹಾಗೂ ಕ್ರಿಮಿನಲ್ ಹಿನ್ನೆಲೆವುಳ್ಳವನೇ ಎಂಬ ಹಗುರ ಪದಗಳಿಂದ ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಗವಿಕಲರು ಅಪ್ರಯೋಜಕರು, ಅಪ್ರಬುದ್ಧರು, ಕೆಲಸಕ್ಕೆ ಬಾರದವರು, ಸಮಾಜಕ್ಕೆ ಹೊರೆಯಾದವರು ಮತ್ತು ಸಮಾಜಕ್ಕೆ ಕಂಟಕರು, ಕಳಂಕಿತರು ಎಂದು ಬಿಂಬಿಸಿದ್ದಾರೆ.ಈ ಮೂಲಕ ಗೌರವಕ್ಕೆ ಚ್ಯುತಿ ತಂದಿದ್ದಾರೆ. ಸಮಾಜದಲ್ಲಿ ಸಮಾನತೆಯ ಬದುಕನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಚಂದ್ರು ಮಾತನಾಡಿರುವುದು ಅಕ್ಷಮ್ಯ ಅಪರಾಧ. ಇಂತಹ ವ್ಯಕ್ತಿಗಳನ್ನು ರಕ್ಷಣೆ ಮಾಡದೆ ಸರ್ಕಾರ ಬಂಧಿಸಬೇಕು. ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಕ್ಷಮೆ ಕೊರಬೇಕು ಎಂದು ಆಗ್ರಹಿಸಿದರು.
ಶಿರಸ್ತೆದಾರ್ ಚಂದ್ರಶೇಖರ್ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಎಸ್.ಸಿ. ರಮೇಶ, ಪದಾಧಿಕಾರಿಗಳಾದ ಸಿ.ಕೆ.ಕೃಷ್ಣ, ಬಿ.ಬೋರೇಗೌಡ, ಪೂರ್ಣಿಮಾ, ಲತಾ, ಜ್ಯೋತಿ, ಪುಟ್ಟಸ್ವಾಮಿ, ಕಾಳಪ್ಪ, ಪ್ರದೀಪ್, ರಾಮ, ಮಂಜು, ಮಂಜುನಾಥ್, ರಾಮಣ್ಣ, ಕೆಂಪಯ್ಯ, ಸುರೇಶ, ಸೋಮಶೇಖರ ಇದ್ದರು.