ಮದ್ದೂರು: ಕ್ಷೇತ್ರದ ಎಲ್ಲ ಧರ್ಮ, ಜಾತಿ ಹಾಗೂ ಜನಾಂಗದವರು ನನ್ನನ್ನು ಚುನಾವಣೆಯಲ್ಲಿ ಪಕ್ಷಾತೀತವಾಗಿ ಬೆಂಬಲಿಸಿದ್ದು, ಈ ಗೆಲುವು ಕ್ಷೇತ್ರದ ಜನರ ಗೆಲುವಾಗಿದೆ. ನಿಮ್ಮ ಋಣವನ್ನು ನನ್ನ ಕೊನೆ ಉಸಿರಿರುವವರೆಗೆ ಮರೆಯಲ್ಲ ಎಂದು ಶಾಸಕ ಕೆ.ಎಂ.ಉದಯ್ ಭಾವುಕರಾದರು. ತಾಲೂಕಿನ ಸೋಮನಹಳ್ಳಿಯ ತಿಮ್ಮದಾಸ್ ಹೋಟೆಲ್ ಬಳಿ ಭಾನುವಾರ ಕಾಂಗ್ರೆಸ್ ಮುಖಂಡ ಸಿ.ಟಿ.ಶಂಕರ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶಾಸಕ ಕೆ.ಎಂ.ಉದಯ್ ಅವರ ಹುಟ್ಟುಹಬ್ಬ ಆಚರಣೆ, ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಭೆ, ಉದಯ್ ಅವರಿಗೆ ಬೆಳ್ಳಿ ಕಿರೀಟ ಧಾರಣೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಮೂರ್ನಾಲ್ಕು ವರ್ಷಗಳ ಹಿಂದೆ ಕೋವಿಡ್‌ನಂತ ಸಂದಿಗ್ಧ ಪರಿಸ್ಥಿತಿಯಲ್ಲಿ ಕ್ಷೇತ್ರದಲ್ಲಿ ನನ್ನ ಕೈಲಾದ ಮಟ್ಟಿಗೆ ಸಮಾಜಸೇವೆ ಮಾಡಬೇಕೆಂದು ಹೆಜ್ಜೆ ಇಟ್ಟಾಗ ನೀವೆಲ್ಲ ನನ್ನ ಸಮಾಜಮುಖಿ ಸೇವೆಗೆ ಬೆನ್ನೆಲುಬಾಗಿ ನಿಂತು ಬೆಂಬಲ ನೀಡಿದ್ದೀರಿ. ಬಳಿಕ ಸಮಾಜಸೇವೆ ಜತೆಗೆ ರಾಜಕೀಯದಲ್ಲೂ ಸ್ಥಾನ ಸಿಕ್ಕರೆ ಮತ್ತಷ್ಟು ಅಭಿವೃದ್ಧಿ ಮಾಡಬಹುದು ಎಂಬ ದೃಷ್ಟಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನ್ನ ಮೇಲೆ ಒತ್ತಡ ತಂದು ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವುದಕ್ಕೂ ಕಾರಣಕರ್ತರಾಗಿದ್ದಿರಿ. ನೀವು ನನ್ನ ಮೇಲೆ ವಿಶ್ವಾಸವಿಟ್ಟು ದೊಡ್ಡ ಜವಾಬ್ದಾರಿಯನ್ನು ನೀಡಿದ್ದೀರಿ ಆ ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರು ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 6 ಸಾಧಕರನ್ನು ಸನ್ಮಾನಿಸಲಾಯಿತು. ಗಾಯಕರಾದ ಹೇಮಂತ್ ಕುಮಾರ್, ಇಂದುನಾಗರಾಜ್, ಅನುರಾಧ ಭಟ್, ನವೀನ್ ಸಜ್ಜು, ಪುರುಷೋತ್ತಮ್, ಕಂಬದ ರಂಗಯ್ಯ, ಮಿಮಿಕ್ರಿ ಗೋಪಿ ಹಾಗೂ ಮತ್ತಿತರರು ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮ ಸಾವಿರಾರು ಜನರ ಕಣ್ಮನ ಸೆಳೆಯಿತು. ವಿನುತಾ ಕೆ.ಎಂ.ಉದಯ್, ಕಾಂಗ್ರೆಸ್ ಮುಖಂಡ ಸಿ.ಟಿ.ಶಂಕರ್, ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್, ಗ್ರಾಪಂ ಸದಸ್ಯ ತಿಮ್ಮೇಗೌಡ, ತಾಪಂ ಮಾಜಿ ಸದಸ್ಯ ಚಲುವರಾಜು, ಮುಖಂಡರಾದ ತೈಲೂರು ರಘು, ಗೊರವನಹಳ್ಳಿ ಮಧು, ದಿನೇಶ್‌ಬಾಬು, ಹರೀಶ್ ಇದ್ದರು.