ಮದ್ದು ಸ್ಫೋಟಗೊಂಡು ಹೋರಿಗೆ ಗಾಯ

0403Klb17
Published on

ಕಲಬುರಗಿ: ಹುಮನಾಬಾದ್ ರಸ್ತೆ ಬೇಲೂರ ಕ್ರಾಸ್ ಹತ್ತಿರ ಬುಧವಾರ ಸಂಜೆ ಸಣ್ಣ ಪ್ರಮಾಣದ ಮದ್ದು ಸ್ಫೋಟಗೊಂಡು ಹೋರಿಯೊಂದು ಗಂಭೀರ ಗಾಯಗೊಂಡಿದೆ. ನಗರದಲ್ಲಿ ಸ್ಫೋಟಕ ಪತ್ತೆಯಾಗಿದ್ದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಪತ್ತೆಯಾಗಿರುವ ಸ್ಫೋಟಕ ಬಾಂಬ್ ಇರಬಹುದೇ ಎಂಬ ವದಂತಿ ಆತಂಕ ಇಮ್ಮಡಿಗೊಳಿಸಿತು. ವಿಧ್ವಂಸಕರು ದುಷ್ಕೃತ್ಯ ನಡೆಸಲು ಸಂಚು ನಡೆಸಿರುವಂತಿದೆಯೇ ಎಂಬೆಲ್ಲ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.
ಸಫಾರಿ ಧಾಬಾ ಬಳಿಯಲ್ಲಿ ಮೇಯಲು ಹೋಗಿದ್ದ ಹೋರಿ, ಹಂದಿಗಳ ಹಾವಳಿ ನಿಯಂತ್ರಿಸಲು ಇಟ್ಟಿದ್ದ ಆಹಾರ ಲೇಪಿತ ಸಿಡಿಮದ್ದಿನ ಉಂಡೆ ಕಚ್ಚುತ್ತಲೇ ಸ್ಫೋಟಗೊಂಡಿದ್ದು, ಬಾಯಿ ಛಿದ್ರಗೊಂಡಿದೆ. ಜನರು ತಕ್ಷಣವೇ ಪಶು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರು.
ಈ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ಅಲೆಮಾರಿ ಜನಾಂಗದವರು ತಂಗಿದ್ದರು. ಅವರು ಹಂದಿಗಳು ತಮ್ಮ ಗುಡಿಸಲಿಗೆ ತೊಂದರೆ ಕೊಡಬಾರದು ಎಂದು ಮದ್ದು ಕಟ್ಟಿಡುತ್ತಿದ್ದರು. ಸ್ಥಳೀಯರೊಂದಿಗೆ ಕಿರಿಕಿರಿ ಆಗಿದ್ದರಿಂದ ಅವರು ಬೇರೆಡೆ ಹೋಗಿದ್ದಾರೆ. ಅವರಲ್ಲಿದ್ದ ಮದ್ದಿನ ಉಂಡೆಗಳು ಅಲ್ಲೇ ಬಿದ್ದಿದ್ದವು. ಅದರಲ್ಲಿ ಒಂದನ್ನು ಹೋರಿ ತಿನ್ನಲು ಹೋದಾಗ ಸಿಡಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದ ಶಬ್ದ ಕೇಳಿಸುತ್ತಲೇ ಸುತ್ತಲಿನ ಜನರು ಜಮಾಯಿಸಿ ಬಾಂಬ್ ಎಂದು ಸಂಶಯ ವ್ಯಕ್ತಪಡಿಸಿದರು. ಇನ್ನಿಲ್ಲದ ಗರ್ಮಾಗರಮ್ ಚರ್ಚೆಗಳು ಶುರುವಾದವು. ಸುದ್ದಿ ಅರಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಸ್ಫೋಟಕ ತಜ್ಞರನ್ನು ಕರೆಸಿ ತಪಾಸಣೆ ನಡೆಸಿದಾಗ ಹಂದಿ ಇಲ್ಲವೇ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಹೊಲದಲ್ಲಿಡುವ ಮದ್ದಿನ ಉಂಡೆ ಎಂಬುದು ದೃಢಪಟ್ಟಿತು.
ಡಿಸಿಪಿ ಕಿಶೋರಬಾಬು, ಎಸಿಪಿ ಎಸ್.ಎಚ್. ಸುಬೇದಾರ, ಇನ್ಸ್ಪೆಕ್ಟರ್ ಸೋಮಲಿಂಗ ಕಿರದಳ್ಳಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಘಟನೆಯನ್ನು ನಿರ್ಲಕ್ಷಿಸುವಂತಿಲ್ಲ. ತನಿಖೆ ನಡೆಸಿ ಇನ್ನಷ್ಟು ಮಾಹಿತಿ ಕಲೆ ಹಾಕುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net