

ತೆಲಸಂಗ: ಮಹಾಮಾರಿ ಕರೊನಾ ವೈರಸ್ ಸೃಷ್ಟಿಸಿದ ಆತಂಕ ಅಷ್ಟಿಷ್ಟಲ್ಲ. ಇಂದು ಎಲ್ಲ ಕ್ಷೇತ್ರಗಳು ಇದರಿಂದ ನಲುಗಿ ಹೋಗಿವೆ. ಆದರೆ, ಕರೊನಾ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಒಂದಿಷ್ಟು ದುಂದುವೆಚ್ಚಕ್ಕೆ ಕಡಿವಾಣವಂತೂ ಬಿದ್ದಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರದ ಷರತ್ತುಬದ್ಧ ಮಾರ್ಗಸೂಚಿಗಳ ಅಡಿ ಜರಗುತ್ತಿರುವ ವಿವಾಹಗಳು, ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ವರದಾನವಾಗಿ ಪರಿಣಮಿಸಿವೆ.
‘ಯಾದಿ ಮೇ ಶಾದಿ’: ಉತ್ತರ ಕರ್ನಾಟಕದಲ್ಲಿ ‘ಯಾದಿ ಮೇ ಶಾದಿ’ ವಿವಾಹ ಪದ್ಧತಿ ಈ ಹಿಂದಿನಿಂದಲೂ ಆಚರಣೆಯಲ್ಲಿದೆ. ವಧು ಅಥವಾ ವರನನ್ನು ನೋಡಲು ಹೋದಾಗ, ಎರಡೂ ಕುಟುಂಬಸ್ಥರಿಗೆ ಒಪ್ಪಿಗೆಯಾದರೆ ಅಲ್ಲಿಯೇ ಮಾತುಕತೆ ಮುಗಿಸಲಾಗುತ್ತದೆ. ಕೆಲವೇ ಗಂಟೆಗಳಲ್ಲಿ ಸರಳವಾಗಿ ವಿವಾಹ ಮಾಡಲಾಗುತ್ತದೆ. ವಧು-ವರನ ಮನೆ ಮುಂದೆ ಶಾಮಿಯಾನ ಹಾಕುವುದಿಲ್ಲ. ಹೆಚ್ಚಿನ ಜನರು ಮತ್ತು ಸಂಬಂಧಿಕರೂ ಸೇರುವುದಿಲ್ಲ. ಇತ್ತೀಚಿನ ದುಬಾರಿ ದಿನಗಳಲ್ಲಂತೂ ‘ಯಾದಿ ಮೇ ಶಾದಿ’ ಬಡವರಿಗೆ ವರದಾನವಾಗಿತ್ತು.
ಈಗ ಕೋವಿಡ್ ಸಂಕಷ್ಟ ಕಾಲದಲ್ಲೂ ದುಂದು ವೆಚ್ಚಕ್ಕೆ ಕಡಿವಾಣ ಬಿದ್ದಿದ್ದು, 20 ಜನರ ಸಮ್ಮುಖದಲ್ಲೇ ವಿವಾಹಗಳು ಸರಳವಾಗಿ ನೆರವೇರುತ್ತಿವೆ. ಇಂತಹ ವಿವಾಹಗಳು ಬಡವರು ಸಾಲ ಮಾಡುವುದನ್ನು ತಪ್ಪಿಸಿ, ಆರ್ಥಿಕ ಶಕ್ತಿ ನೀಡುತ್ತಿವೆ. ಬಡವರು, ಸಿರಿವಂತರು ಎನ್ನದೆ, ಎಲ್ಲರ ವಿವಾಹಗಳು ಸರಳವಾಗಿ ನಡೆಯುತ್ತಿವೆ. ಮದುವೆ ವಿಚಾರವಾಗಿ ‘ಕರೊನಾ ಲಾಕ್‌ಡೌನ್’ ಬಡ ಜನರ ಸಂತಸಕ್ಕೆ ಕಾರಣವಾಗಿದೆ.
ಬಂಧು-ಬಳಗದವರನ್ನು ಸೇರಿಸಲಿಲ್ಲ ಎನ್ನುವ ಕೊರಗಿದ್ದರೂ, ಇಂತಹ ಮದುವೆಗಳಲ್ಲೂ ಒಂದು ರೀತಿ ಸಂತೋಷವಿದೆ. ಬಡ ಕುಟುಂಬಗಳು ಸಾಲ ಮಾಡಿ ಮದುವೆ ಮಾಡುವುದು ತಪ್ಪುತ್ತದೆ. ಆದರೆ, ವಿವಾಹ ಸಂದರ್ಭದಲ್ಲಿ ಕಡ್ಡಾಯವಾಗಿ ಕರೊನಾ ನಿಯಂತ್ರಣ ಮಾರ್ಗಸೂಚಿ ಪಾಲಿಸಬೇಕು.| ಧರು ಮಾಳಿ ಸರಳವಾಗಿ ವಿವಾಹ ಮಾಡಿಕೊಂಡ ಯುವಕ, ತೆಲಸಂಗ
| ಜಗದೀಶ ಖೊಬ್ರಿ