ಮದುವೆಗೆ ಅಡ್ಡಿಯಾದ ಯುವತಿ ತಂದೆ ಹತ್ಯೆ, ಪ್ರೇಮಿಸಿದ ಯುವತಿಯನ್ನು ವಿವಾಹ ಮಾಡಿಕೊಡಲು ನಿರಾಕರಣೆ

24 Nela Ph 03 SP Visit
Published on

ನೆಲಮಂಗಲ: ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆ ಮಾಡಿಕೊಡಲು ನಿರಾಕರಿಸಿದ ಯುವತಿಯ ತಂದೆಯನ್ನು ಪ್ರೇಮಿಯೇ ಹತ್ಯೆ ಮಾಡಿದ್ದಾನೆ. ನೆಲಮಂಗಲದ ಕುವೆಂಪುನಗರದ ನಾಗಪ್ಪ (49) ಹತ್ಯೆ ಆದವರು. ಅದೇ ಬಡಾವಣೆ ನಿವಾಸಿ ನರೇಶ್ (28) ಆರೋಪಿ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಡಿಗೆ ಗ್ರಾಮದ ನಾಗಪ್ಪ 30 ವರ್ಷಗಳಿಂದ ಕುಟುಂಬದೊಂದಿಗೆ ನೆಲಮಂಗಲದಲ್ಲಿ ನೆಲೆಸಿದ್ದರು. ದಂಪತಿಯ ಇಬ್ಬರು ಮಕ್ಕಳ ಪೈಕಿ, ಮೊದಲ ಮಗಳು ಬೆಂಗಳೂರಿನ ಮಲ್ಲೇಶ್ವರ ಬಳಿಯ ಖಾಸಗಿ ಡಿಪ್ಲೊಮಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.

2 ವರ್ಷಗಳಿಂದ ಪ್ರೀತಿ: ಕುವೆಂಪುನಗರದಲ್ಲಿರುವ ನಾಗಪ್ಪ ಅವರ ಮನೆಯ ಪಕ್ಕದಲ್ಲೇ ಆರೋಪಿ ನರೇಶ್ ವಾಸವಾಗಿದ್ದ. ಕಳೆದೆರಡು ವರ್ಷಗಳಿಂದ ಯುವತಿ ಹಾಗೂ ನರೇಶ್ ಪ್ರೀತಿಸುತ್ತಿದ್ದರು. ಆದರೆ, ನಾಲ್ಕೈದು ದಿನಗಳಿಂದ ಯುವತಿ ನರೇಶ್‌ಗೆ ಕರೆ ಮಾಡಿರಲಿಲ್ಲ. ಇದರಿಂದ ಕುಪಿತನಾದ ಯುವಕ ಆ.23ರಂದು ಪಾನಮತ್ತನಾಗಿ ಯುವತಿಯ ಕಾಲೇಜು ಬಳಿ ತೆರಳಿ ಆಕೆಯೊಂದಿಗೆ ಜಗಳವಾಡಿ, ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡಿದ್ದ ಎನ್ನಲಾಗಿದೆ.

ಅಂದೇ ರಾತ್ರಿ 8 ಗಂಟೆಗೆ ನೆಲಮಂಗಲಕ್ಕೆ ಮರಳಿ, ಸ್ನೇಹಿತನ ಜತೆ ನಾಗಪ್ಪ ಅವರ ಮನೆಗೆ ಬಂದಿದ್ದ. 2 ವರ್ಷದಿಂದ ಪ್ರೀತಿಸುತ್ತಿದ್ದು, ಮದುವೆ ಮಾಡಿಕೊಡುವಂತೆ ಒತ್ತಾಯಿಸಿದ್ದ. ಆದರೆ, ಇದಕ್ಕೆ ನಿರಾಕರಿಸಿದ್ದ ನಾಗಪ್ಪ, ಆಕೆ ಓದುತ್ತಿದ್ದಾಳೆ. ಅಲ್ಲದೆ, ಸಂಬಂಧಿಕರ ಮಗನಿಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ.

ಕೆಲಸಕ್ಕೆ ತೆರಳುವ ವೇಳೆ ಹಲ್ಲೆ: ಮದುವೆ ಮಾಡಿಕೊಡಲು ನಿರಾಕರಿಸಿದ್ದರಿಂದ ನಾಗಪ್ಪ ವಿರುದ್ಧ ಕೋಪಗೊಂಡಿದ್ದ ನರೇಶ್ ಮಂಗಳವಾರ (ಆ.24) ಬೆಳಗ್ಗೆ 5 ಗಂಟೆ ವೇಳೆಯಲ್ಲಿ ದ್ವಿಚಕ್ರವಾಹನದಲ್ಲಿ ಮಗನ ಜತೆ ಕೆಲಸಕ್ಕೆ ತೆರಳುತ್ತಿದ್ದ ನಾಗಪ್ಪ ಅವರನ್ನು ಅಡ್ಡಗಟ್ಟಿ ಕಬ್ಬಿಣದ ರಾಡ್‌ನಿಂದ ತಲೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಕೃತ್ಯಕ್ಕೆ ಸ್ನೇಹಿತನ ನೆರವು ಪಡೆದುಕೊಂಡಿದ್ದ ಎನ್ನಲಾಗಿದೆ.

ಹಲ್ಲೆಯಿಂದ ನಾಗಪ್ಪ ಅವರ ತಲೆಗೆ ಗಂಭೀರ ಗಾಯವಾಗಿ ರಕ್ತ ಹರಿಯಲಾರಂಭಿಸಿತು. ಸಂಬಂಧಿ ಸುರೇಶ್ ನೆರವಿನೊಂದಿಗೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಅಸುನೀಗಿದ್ದಾರೆ.

ಯುವತಿಗೆ ಧಮ್ಕಿ:ಪ್ರೀತಿಗೆ ಅಡ್ಡಬರುತ್ತಿರುವ ಹಿನ್ನೆಲೆಯಲ್ಲಿ ನಾಗಪ್ಪನಿಗೆ ಗತಿಕಾಣಿಸುವುದಾಗಿ ನರೇಶ್ ೆನ್ ಮೂಲಕ ಯುವತಿಗೆ ಧಮ್ಕಿ ಹಾಕಿದ್ದ ಎನ್ನಲಾಗಿದೆ.

ಸ್ಥಳಕ್ಕೆ ಎಸ್‌ಪಿ ಭೇಟಿ: ಹತ್ಯೆ ನಡೆದ ಸ್ಥಳಕ್ಕೆ ಎಸ್‌ಪಿ ಡಾ. ಕೆ. ಕೋನ ವಂಶಿಕೃಷ್ಣ ಭೇಟಿ ನೀಡಿ ಪರಿಶೀಲಿಸಿದರು. ಘಟನೆಯ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net