ಮದುವೆ ಮುಂದೂಡಿದ್ದಕ್ಕೆ ಯುವಕ ಆತ್ಮಹತ್ಯೆ!

carona logo
Published on

ಹುಬ್ಬಳ್ಳಿ: ಲಾಕ್​ಡೌನ್ ಹಿನ್ನೆಲೆಯಲ್ಲಿ ಮದುವೆ ದಿನಾಂಕ ಮುಂದೂಡಿದ್ದಕ್ಕೆ ಮನನೊಂದು ಯುವಕನೊಬ್ಬ ಇಲ್ಲಿನ ಸಂತೋಷ ನಗರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ. ದೇವಾಂಗಪೇಟೆ ನಿವಾಸಿ ಶರಣಪ್ಪ ಫಕೀರಪ್ಪ ಹಡಪದ (30) ಆತ್ಮಹತ್ಯೆ ಮಾಡಿಕೊಂಡವ. ಶರಣಪ್ಪ ನಿಶ್ಚಿತಾರ್ಥ ಆಗಿತ್ತು. ಲಾಕ್​ಡೌನ್ ಹಿನ್ನೆಲೆಯಲ್ಲಿ ಪಾಲಕರು ಮದುವೆ ದಿನಾಂಕ ಮುಂದೂಡಿದ್ದರು. ಇದೇ ವಿಚಾರಕ್ಕೆ ಶರಣಪ್ಪ ಮಾನಸಿಕ ಖಿನ್ನತೆಗೆ ಒಳಗಾಗಿ ಶನಿವಾರ ಮನೆಯಿಂದ ಯಾರಿಗೂ ಹೇಳದೆ ನಾಪತ್ತೆಯಾಗಿದ್ದ. ಭಾನುವಾರ ಕೆರೆಯಲ್ಲಿ ಶವ ಪತ್ತೆಯಾಗಿದೆ ಎಂದು ಅಶೋಕನಗರ ಠಾಣೆ ಇನ್ಸ್​ಪೆಕ್ಟರ್ ರವಿಚಂದ್ರ ಬಡೆಫಕೀರಪ್ಪನವರ ತಿಳಿಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹ ಹೊರಗೆ ತೆಗೆದಿದ್ದು, ಶವ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಮಹಡಿಯಿಂದ ಜಿಗಿದು ಯುವತಿ ಆತ್ಮಹತ್ಯೆ: ತಾಯಿ ಪ್ರವಾಸಕ್ಕೆ ಕರೆದುಕೊಂಡು ಹೋಗಲಿಲ್ಲ ಎಂದು ಮನನೊಂದು ಯುವತಿಯೊಬ್ಬಳು ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಎಲಿಪೇಟ ಹೂಗಾರ ಓಣಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಲವಿಶಾ ರಾಜೇಶ ಬೋಹಾರಾ (19) ಆತ್ಮಹತ್ಯೆ ಮಾಡಿಕೊಂಡವಳು. ನಗರದ ಖಾಸಗಿ ಕಾಲೇಜೊಂದರಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಲವಿಶಾ ಪ್ರವಾಸಕ್ಕೆ ಹೋಗೋಣ ಎಂದು ಹಠ ಹಿಡಿದಿದ್ದಳು. ಲಾಕ್​ಡೌನ್ ಇರುವ ಕಾರಣ ಪ್ರವಾಸ ಸಾಧ್ಯವಿಲ್ಲ. ನಂತರ ಹೋಗೋಣ ಎಂದು ಸಮಾಧಾನ ಮಾಡಿದ್ದೆವು. ಆದರೆ, ಲಾಕ್​ಡೌನ್ ಸಡಿಲಿಕೆ ಬಳಿಕ ಆಕೆ ಮತ್ತೆ ಹಠ ಮಾಡಿದ್ದಳು. ಸದ್ಯ ಬೇಡ ಎಂದಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಲವಿಶಾ ತಾಯಿ ಹೇಮಲತಾ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net