

ಬೀದರ್: ಮದುವೆ ಮಾಡಿಕೊಳ್ಳುವುದಾಗಿ ಫುಸಲಾಯಿಸಿ ಅತ್ಯಾಚಾರ ಮಾಡಿದ್ದಲ್ಲದೆ, ಮದುವೆಗೂ ನಿರಾಕರಿಸಿ ದೋಖಾ ಮಾಡಿದ ಆರೋಪಿಗೆ ಹತ್ತು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ಹೇರಿ ಇಲ್ಲಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎಚ್.ಆರ್. ರಾಧಾ ಮಹತ್ವದ ತೀರ್ಪು ನೀಡಿದ್ದಾರೆ. ಭಾಲ್ಕಿ ತಾಲೂಕಿನ ಕಣಜಿ ಗ್ರಾಮದ ನಾಗೇಶ ಕಮಲಾಪುರೆ ಶಿಕ್ಷೆಗೊಳಾದ ಆರೋಪಿ. 2014 ಜೂನ್ನಲ್ಲಿ ನಡೆದ ಪ್ರಕರಣ ಇದಾಗಿದೆ. ಭಾಲ್ಕಿ ಗ್ರಾಮೀಣ ಸಿಪಿಐ ಎನ್.ಬಿ.ಮಠಪತಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಕಲಂ 376 ಅಡಿ ಆರೋಪಿಗೆ 7 ವರ್ಷ ಶಿಕ್ಷೆ ಹಾಗೂ 75000 ದಂಡ, ಕಲಂ 420 ಅಡಿಯಲ್ಲಿ 3 ವರ್ಷ ಸಜೆ ಹಾಗೂ 25000 ದಂಡ ವಿಧಿಸಿದ್ದಾರೆ. ದಂಡದಲ್ಲಿ ವಸೂಲಾದ ಹಣದಲ್ಲಿ 75000 ಸಂತ್ರಸ್ತೆಗೆ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಶರಣಗೌಡ ಅವರು ವಾದಿಸಿದ್ದರು.