

ಹಾಸನ: ಮದುವೆ ಒಪ್ಪಲಿಲ್ಲ ಎಂಬ ಕಾರಣ ಯುವತಿಯನ್ನು ಸಂಬಂಧಿಯೇ ಸಿನಿಮೀಯ ರೀತಿಯಲ್ಲಿ ಅಪಹರಿಸಿರುವ ಘಟನೆ ಗುರುವಾರ ಬೆಳಗ್ಗೆ ಬಿಟ್ಟಗೌಡನಹಳ್ಳಿಯಲ್ಲಿ ನಡೆದಿದೆ.
ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಅರ್ಪಿತಾ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈಕೆ ಗುರುವಾರ ಬಿಟ್ಟಗೌಡನಹಳ್ಳಿ ಬಳಿ ಬೆಳಗ್ಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ಸಂಬಂಧಿಯಾದ ರಾಮು ಹಾಗೂ ಆತನ ಸಹಚರರು ಯುವತಿಯನ್ನು ಕಾರಿನೊಳಗೆ ಬಲವಂತವಾಗಿ ಕೂರಿಸಿಕೊಂಡು ಪರಾರಿಯಾಗಿದ್ದಾರೆ. ಈ ಘಟನೆಯ ದೃಶ್ಯಾವಳಿಗಳು ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶಿಕ್ಷಕಿ ನಡೆದು ಬರುವಾಗ ಆಕೆಯ ಚಲನವಲನಗಳನ್ನು ಗಮನಿಸುತ್ತಲೇ ಬಂದು ಮನೆಯೊಂದರ ಮುಂದೆ ಮೂರು ಜನರು ಎದುರಾಗಿದ್ದಾರೆ. ಏಕಾಏಕಿ ಇವರನ್ನು ಕಂಡು ಗಾಬರಿಯಾದ ಯುವತಿ ಚೀರಿಕೊಂಡು ಕೆಳಗೆ ಕುಳಿತುಕೊಂಡಿದ್ದಾಳೆ. ಆಗ ಮೂವರೂ ಆಕೆಯನ್ನು ಎತ್ತಿಕೊಂಡು ಕಾರಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ.
ಕಳೆದ 15 ದಿನಗಳ ಹಿಂದೆ ರಾಮು ಮತ್ತು ಆತನ ಪೋಷಕರು ಮದುವೆ ಪ್ರಸ್ತಾಪದೊಂದಿಗೆ ಶಿಕ್ಷಕಿ ಮನೆಗೆ ಬಂದಿದ್ದರು. ಈ ವೇಳೆ ಮದುವೆ ಪ್ರಸ್ತಾಪಕ್ಕೆ ಯುವತಿ ಹಾಗೂ ಯುವತಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಕಿ ಮದುವೆಗೆ ಒಪ್ಪಿಲ್ಲವೆಂದು ಆಕೆಯನ್ನು ಅಪಹರಣ ಮಾಡಿದ್ದಾರೆ ಎಂದು ಶಿಕ್ಷಕಿಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಅವರು ಭೇಟಿ ಪರಿಶೀಲನೆ ನಡೆಸಿದರು.
ಮಡಿಕೇರಿಗೆ ಹೋಗಿರುವ ಶಂಕೆ:
ಸದ್ಯದ ಮಾಹಿತಿ ಪ್ರಕಾರ ಯುವತಿಯನ್ನು ಅಪಹರಿಸಿ ಮಡಿಕೇರಿ ಕಡೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ಕೊಡ್ಲಿಪೇಟೆ, ಶನಿವಾರಸಂತೆ ಮೂಲಕ ಕೊಡಗಿಗೆ ಹೋಗಿರಬಹುದು ಎಂದು ಮೊಬೈಲ್ ನೆಟ್ವರ್ಕ್ ಆಧರಿಸಿ ಪತ್ತೆಗಾಗಿ ರಚನೆಯಾಗಿರುವ ಮೂರು ತನಿಖಾ ತಂಡಗಳು ಅಪಹರಣಕಾರರನ್ನು ಬೆನ್ನಟ್ಟಿವೆ. ಕೊಡಗು ಪೊಲೀಸರ ಸಹಕಾರದೊಂದಿಗೆ ಯುವತಿ ಅಪಹರಣ ಮಾಡಿರುವ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಈ ನಡುವೆ ನಾನು ಅರ್ಪಿತಾಳನ್ನು ಮದುವೆಯಾಗಿದ್ದೇನೆ. ಆಕೆಯೊಂದಿಗೆ ಠಾಣೆಗೆ ಬರುತ್ತೇನೆ ಎಂದು ರಾಮು ಫೋನ್ ಮಾಡಿದ್ದಾನೆ ಎನ್ನಲಾಗಿದ್ದು, ಮಗಳು ಸುರಕ್ಷಿತವಾಗಿ ಬಂದರೆ ಸಾಕು ಎಂದು ಹೆತ್ತವರು ಕಣ್ಣೀರಿಡುತ್ತಾ ನಗರ ಠಾಣೆಯಲ್ಲಿ ಕಾಯುತ್ತಿದ್ದಾರೆ.
ಸಂಬಂಧದಲ್ಲಿ ಮಾವ ಆಗಬೇಕು:
ಯುವತಿ ಬಿಟ್ಟಗೌಡನಹಳ್ಳಿಯ ಆರಾಧನಾ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಗುರುವಾರ ರಜೆ ಇತ್ತು. ಆದರೂ ಹೊರಗೆ ಏಕೆ ಬಂದಿದ್ದರು. ಶಾಲೆಯಲ್ಲಿ ಏನಾದರೂ ಕಾರ್ಯಕ್ರಮ ಇತ್ತಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪತ್ತೆಗಾಗಿ 3 ತಂಡ ರಚಿಸಲಾಗಿದೆ. ಸಂಬಂಧದಲ್ಲಿ ಅರ್ಪಿತಾಗೆ ರಾಮು ಮಾವ ಆಗಬೇಕು. ಈ ಹಿಂದೆ ಮದುವೆ ಪ್ರಸ್ತಾಪ ಸಹ ನಡೆದಿತ್ತು ಎಂಬ ಮಾಹಿತಿ ಇದೆ. ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಮೊಹಮದ್ ಸುಜಿತಾ ತಿಳಿಸಿದ್ದಾರೆ.