

ಆಳಂದ: ಸಮಾಜದಲ್ಲಿ ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ಸಾಗಿದಾಗ ಮಾತ್ರ ಮಂದಿರ ನಿರ್ಮಾಣ, ಲಿಂಗ ಪ್ರತಿಷ್ಠಾಪನೆಗೆ ಅರ್ಥ ಬರುತ್ತದೆ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರೂ ಆದ ಶಾಸಕ ಬಿ.ಆರ್.ಪಾಟೀಲ್ ಹೇಳಿದರು.
ಪಡಸಾವಳಿ ಗ್ರಾಮದಲ್ಲಿ ಡಾ.ಶ್ರೀ ಶಂಭುಲಿಂಗ ಶಿವಾಚಾರ್ಯರ ೩೫ನೇ ಪಟ್ಟಾಭಿಷೇಕ ಮಹೋತ್ಸವ, ಶಿವಶರಣೆ ಗುಡ್ಡಾಪುರದ ದಾನಮ್ಮ ದೇವಿ ಪುರಾಣ ಮಂಗಲ ಹಾಗೂ ಸಾಮೂಹಿಕ ವಿವಾಹದ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿ, ಸತತ ೧೯ ದಿನಗಳಿಂದ ಡಾ.ಶಂಭುಲಿಂಗ ಶ್ರೀಗಳ ಅಧ್ಯಕ್ಷತೆಯಲ್ಲಿ ಪುರಾಣ ನಡೆಯುತ್ತಿದ್ದು, ಧರ್ಮ ಕಾರ್ಯದೊಂದಿಗೆ ಭಕ್ತರನ್ನು ಉದ್ಧರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶ್ಲಾಘಿಸಿದರು.
ಗ್ರಾಮೀಣ ಭಾಗದಲ್ಲಿ ಮಠ- ಮಂದಿರಗಳು ನಿರ್ಮಾಣವಾಗಬೇಕಾದರೆ ಮಠಾಧೀಶರು ಮತ್ತು ಭಕ್ತರ ಮಧ್ಯೆ ಉತ್ತಮ ಬಾಂಧವ್ಯ ಇರಬೇಕು. ಡಾ.ಶಂಭುಲಿಂಗ ಶ್ರೀಗಳು ಈ ಕಾರ್ಯವನ್ನು ಉತ್ತಮವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿಯೇ ಅಪಾರ ಭಕ್ತರನ್ನು ಹೊಂದಿದ್ದಾರೆ. ವಿವಾಹ ಕೇವಲ ರಾಜಿ, ಒಪ್ಪಂದವಲ್ಲ. ಜೀವತಾವಧಿ ಉಳಿಯುವ ಪವಿತ್ರ ಬಂಧನವಾಗಿದೆ. ಸತಿ, ಪತಿಗಳು ಸಹಬಾಳ್ವೆಯಿಂದ ಬದುಕು ನಡೆಸಬೇಕು ಎಂದು ಹೇಳಿದರು.
ಅಚಲೇರಿ ವಿರಕ್ತ ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಗುಳೇದಗುಡ್ಡದ ಶ್ರೀ ಕಾಶಿನಾಥ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಅದ್ದೂರಿ ವಿವಾಹಗಳಿಂದ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತವೆ. ಅನಗತ್ಯ ವೆಚ್ಚಗಳಿಗೆ ಸಾಮೂಹಿಕ ವಿವಾಹದಿಂದ ಬ್ರೇಕ್ ಬೀಳಲಿದ್ದು, ಬಡವರಿಗೆ ವರದಾನವಾಗಲಿವೆ ಎಂದರು.
ಪೀಠಾಧಿಪತಿ ಶ್ರೀ ಡಾ.ಶಂಭುಲಿಂಗ ಶಿವಾಚಾರ್ಯರಿಗೆ ಭಕ್ತರು ಬೆಳ್ಳಿ ಕಿರೀಟ ಧಾರಣೆ ಮಾಡಿದರು. ನಾಲ್ಕು ಜೋಡಿಗಳು ಸಪ್ತಪದಿ ತುಳಿದವು. ಶ್ರೀ ಮಠದಿಂದ ನವ ಜೋಡಿಗಳಿಗೆ ಕಾಲುಂಗುರ, ತಾಳಿ, ಬಟ್ಟೆ ನೀಡಲಾಯಿತು.
ಚವದಾಪುರಿ ಮಠದ ಶ್ರೀ ಡಾ.ರಾಜಶೇಖರ ಶಿವಾಚಾರ್ಯ, ಬಿಲಗುಂದಿಯ ಶ್ರೀ ಚಿದಾನಂದ ಶಿವಾಚಾರ್ಯ, ಚಾಂಬಾಳದ ಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯ, ಸ್ಟೇಷನ್ ಬಬಲಾದ್‌ನ ಶ್ರೀ ಶಿವಮೂರ್ತಿ ಶಿವಾಚಾರ್ಯ, ಕಿಟ್ಟಾದ ಶ್ರೀ ನಿಜಲಿಂಗ ಶಿವಾಚಾರ್ಯ, ಹಣೇಗಾಂವ್‌ನ ಶ್ರೀ ಶಂಕರಲಿಂಗ ಶಿವಾಚಾರ್ಯ, ಹಲಬರ್ಗಾದ ಶ್ರೀ ಹಾವಗಿಲಿಂಗ ಶಿವಾಚಾರ್ಯ, ಜವಳಿಯ ಶ್ರೀ ಗಂಗಾಧರ ಸ್ವಾಮೀಜಿ, ರಟಕಲ್‌ನ ಶ್ರೀ ರೇವಣಸಿದ್ಧ ಶಿವಾಚಾರ್ಯ, ಶ್ರೀ ಬಸವಲಿಂಗ ಸ್ವಾಮೀಜಿ ಇತರರಿದ್ದರು.