ಮದಲಾಪುರ ಸರ್ಕಾರಿ ಶಾಲೆಗೆ ವಜ್ರ ಮಹೋತ್ಸವ ಸಂಭ್ರಮ

7ark1
Published on

ಅರಕಲಗೂಡು: ತಾಲೂಕಿನ ಮದಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 75 ವರ್ಷ ಪೂರೈಸಿದ ಸಂಭ್ರಮದಲ್ಲಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಾ. 8 ಮತ್ತು 9ರಂದು ವಜ್ರ ಮಹೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮ ಆಚರಿಸಲು ಸಕಲ ಸಿದ್ಧತೆ ಕೈಗೊಂಡಿದ್ದಾರೆ.

ಗ್ರಾಮದಲ್ಲಿ 1949- 50ರಲ್ಲಿ ಪ್ರಾರಂಭವಾದ ಶಾಲೆಯಲ್ಲಿ ಆರಂಭದಲ್ಲಿ 36 ವಿದ್ಯಾರ್ಥಿಗಳಿದ್ದರು. ಇದೀಗ ಶಾಲೆಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳು ವಜ್ರ ಮಹೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮ ಆಚರಿಸಲು ತೀರ್ಮಾಸಿದ್ದು, ಶಾಲಾಭಿವೃದ್ಧಿ ಸಮಿತಿಯೂ ಇದಕ್ಕೆ ಕೈಜೋಡಿಸಿದೆ. ವಜ್ರ ಮಹೋತ್ಸವ ಅಂಗವಾಗಿ ಮಾ. 8ರಂದು ಗ್ರಾಮಸ್ಥರಿಗೆ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

ಮಾ. 9ರಂದು ಶಾಸಕ ಎ. ಮಂಜು ಅಧ್ಯಕ್ಷತೆಯಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಉದ್ಘಾಟಿಸಲಿದ್ದಾರೆ. ವಿಧಾನಪರಿಷತ್ ಸದಸ್ಯರಾದ ಸೂರಜ್ ರೇವಣ್ಣ, ಮಧು ಜಿ. ಮಾದೇಗೌಡ, ವಿವೇಕಾನಂದ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮುಂತಾದ ಗಣ್ಯರು ಭಾಗವಹಿಸುವರು.

ಸಂಜೆ ನಡೆಯುವ ಸಮಾರೋಪ ಸಮಾರಂಭವನ್ನು ಸಂಸದ ಶ್ರೇಯಸ್ ಪಟೇಲ್ ಉದ್ಘಾಟಿಸಲಿದ್ದು, ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಅಧ್ಯಕ್ಷತೆ ವಹಿಸುವರು. ಮುಖಂಡರಾದ ಎಂ.ಟಿ. ಕೃಷ್ಣೇಗೌಡ, ಎಚ್.ಪಿ. ಶ್ರೀಧರ್‌ಗೌಡ, ಸುರೇಶ್ ಸಿಂಗನಕುಪ್ಪೆ, ಕೆಇಬಿ ಗುತ್ತಿಗೆದಾರ ರಂಗೇಗೌಡ, ಡಾ. ಸಿ.ಕೆ. ಮೂರ್ತಿ, ಅಣ್ಣೇಗೌಡ, ಎಂ.ಆರ್. ಮಂಜುನಾಥ್, ಡಾ. ವಿಶ್ವನಾಥ್, ಕೇಶವಮೂರ್ತಿ, ಪ್ರಸನ್ನಕುಮಾರ್, ಎನ್. ರವಿಕುಮಾರ್ ಇತರರು ಭಾಗವಹಿಸುವರು.

ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ವಿವಿಧ ಗಾಯನ ಸ್ಪರ್ಧೆ, ನೃತ್ಯ ಪ್ರದರ್ಶನ ಹಾಗೂ ಗಿಚ್ಚಿ ಗಿಲಿಗಿಲಿ ಮತ್ತು ಕಾಮಿಡಿ ಕಿಲಾಡಿಗಳ ಹೆಸರಾಂತ ಕಲಾವಿದರಾದ ಚಂದ್ರಪ್ರಭ, ವಿನೋದ್ ಗೊಬ್ಬರಗಾಲ, ಸಾಗರ್ ತುರುವೇಕೆರೆ ಅವರ ನಗೆಹಬ್ಬ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net