

ಹಾಸನ: ಕರ್ನಾಟಕ ಸಂಭ್ರಮ-50ರ ಅಭಿಯಾನದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಮಹಿಳಾ ಮತ್ತು 50 ಪುರುಷ ಸಾಧಕರಿಗೆ ರಾಜ್ಯ ಸರ್ಕಾರ ಸುವರ್ಣ ಮಹೋತ್ಸವ ಪ್ರಶಸ್ತಿ ಪ್ರಕಟಿಸಿದ್ದು, ಹಾಸನ ಜಿಲ್ಲೆಯ ಮಾಧ್ಯಮ ಕ್ಷೇತ್ರದಲ್ಲಿ ಎಚ್.ಬಿ. ಮದನ್‌ಗೌಡ ಅವರು ಹಾಗೂ ಮಹಿಳೆಯರ ವಿಭಾಗದಲ್ಲಿ ಸಾಹಿತಿ ಬಾನು ಮುಷ್ತಾಕ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಾಸನ ಜಿಲ್ಲೆಯಿಂದ ಮಾಧ್ಯಮ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತರು ಹಾಗೂ ಜನಮಿತ್ರ ಪ್ರಾದೇಶಿಕ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಎಚ್.ಬಿ.ಮದನಗೌಡ ಅವರು 1965ರ ಜು.9ರಂದು ಸಕಲೇಶಪುರ ತಾಲೂಕು ಹೆತ್ತೂರು ಗ್ರಾಮದಲ್ಲಿ ಜನಿಸಿದರು. ಕರ್ನಾಟಕದ ಪ್ರಾದೇಶಿಕ ದಿನಪತ್ರಿಕೆಗಳ ವಲಯದಲ್ಲಿ, ಮುಖ್ಯವಾಹಿನಿ ವೃತ್ತಿಪರ ಪತ್ರಿಕೋದ್ಯಮದಲ್ಲಿ ಹಾಗೂ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಾರ್ಯನಿರತ ಪತ್ರಕರ್ತರ ಸಂಘಟನೆಯಲ್ಲಿ ಎಚ್.ಬಿ. ಮದನಗೌಡ ಅವರದ್ದು ಪ್ರಮುಖ ಹೆಸರು. ವಿದ್ಯಾರ್ಥಿ ಜೀವನದಲ್ಲಿಯೇ ಸ್ಥಳೀಯ ಪತ್ರಿಕೆಗಳಿಗೆ ಕಥೆ, ಕವನಗಳನ್ನು ಬರೆಯುತ್ತಿದ್ದರು. ಈ ಹವ್ಯಾಸವೇ ಅವರನ್ನು ಪತ್ರಿಕೋದ್ಯಮ ಕ್ಷೇತ್ರಕ್ಕೆ ಎಳೆದು ತಂದಿತು.
1986 ರಲ್ಲಿ ಸಕಲೇಶಪುರದಲ್ಲಿ ಮಾರ್ಗಪ್ರಭ ದಿನಪತ್ರಿಕೆ ವರದಿಗಾರರಾಗಿ ವೃತ್ತಿ ಜೀವನ ಆರಂಭಿಸಿದ ಎಚ್.ಬಿ. ಮದನಗೌಡರು ನಂತರ ಹಾಸನ ಮಾಧ್ಯಮ, ಮುಂಜಾವು ಮತು ್ತ ಜ್ಞಾನದೀಪ ದಿನಪತ್ರಿಕೆಗಳ ವರದಿಗಾರರಾಗಿಯೂ ಸೇವೆ ಸಲ್ಲಿಸಿದರು. ತದನಂತರ ತಾವು ವರದಿಗಾರರಾಗಿ ಕೆಲಸ ಮಾಡುತ್ತಿದ್ದ ಜ್ಞಾನದೀಪ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿ ಬಡ್ತಿ ಪಡೆದು ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿ ನಿರ್ವಹಿಸಿದರು. ಈ ವೇಳೆ ಹಲವಾರು ಯುವ ಪ್ರತಿಭಾವಂತ ಪತ್ರಕರ್ತರನ್ನು ಪ್ರೋತ್ಸಾಹಿಸಿ ಬೆಳೆಸಿದ್ದಲ್ಲದೆ, ಯವ ಕವಿಗಳು ಮತು ್ತ ಕಥೆಗಾರರಿಗೂ ವೇದಿಕೆ ಕಲ್ಪಿಸಿಕೊಟ್ಟರು. ನಂತರ ವಿಶಾಲ ಮಾಧ್ಯಮ ದಿನಪತ್ರಿಕೆ ಆರಂಭಿಸಿದರು. 1990ರಲ್ಲಿ ಇಡೀ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಹಾಸನದಲ್ಲಿ ಕೇಬಲ್ ಟಿವಿ, ಸ್ಥಳೀಯ ಸುದ್ದಿ ವಾಹಿನಿ ಆರಂಭಿಸಿದ ಕೀರ್ತಿ ಎಚ್.ಬಿ. ಮದನಗೌಡರಿಗೆ ಸಲ್ಲುತ್ತದೆ.
ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರಸರಣ ಹೊಂದಿದ್ದ ಜನಮಿತ್ರ ಪತ್ರಿಕೆಯ ಮಾಲೀಕತ್ವ ಪಡೆದುಕೊಂಡ ಮದನಗೌಡರು ಹಾಸನದಲ್ಲಿ ಪ್ರಪ್ರಥಮ ಬಾರಿಗೆ ಬಹುವರ್ಣ ಮುದ್ರಣ ಯಂತ್ರ ಸಾ ್ಥಪಿಸಿದ್ದಲ್ಲದೆ, ಎರಡು ಜಿಲ್ಲೆಗಳಲ್ಲಿ ಪ್ರಸರಣ ಹೊಂದಿದ್ದ ಜನಮಿತ್ರ ಪತ್ರಿಕೆಯನ್ನು ಹತ್ತು ಜಿಲ್ಲೆಗಳಿಗೆ ವಿಸ್ತರಿಸಿ, ಬಹುದೊಡ್ಡ ಪ್ರಾದೇಶಿಕ ಪತ್ರಿಕೆಯಾಗಿ ಕಟ್ಟಿ ಬೆಳೆಸಿದರು. ಪತ್ರಿಕೆಯ ಸಿಬ್ಬಂದಿಗೆ ಇಎಸ್‌ಐ ಮತ್ತು ಪಿಎಫ್ ಸೌಲಭ್ಯದೊಂದಿಗೆ ಉತ್ತಮ ವೇತನ ನೀಡಲಾಗುತ್ತಿದೆ. ಜನಮಿತ್ರ ಪತ್ರಿಕೆಯು ಕೇಂದ್ರ ಸರ್ಕಾರದ ಡಿಎವಿಪಿ ಮಾನ್ಯತೆಯನ್ನೂ ಪಡೆದುಕೊಂಡಿದ್ದು, ಕೇಂದ್ರ ಸರ್ಕಾರದ ಜಾಹೀರಾತುಗಳನ್ನು ಪಡೆಯುತ್ತಿದೆ.
ಎರಡು ಮಹಾಮಸ್ತಕಾಭಿಷೇಕಗಳ ಯಶಸ್ವಿ ನಿರ್ವಹಣೆ:
ಶ್ರವಣಬೆಳಗೊಳದಲ್ಲಿ 2006 ಮತ್ತು 2018ರಲ್ಲಿ ನಡೆದ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಬೃಹತ್ ಮಹೋತ್ಸವಗಳ ಸಂದರ್ಭದಲ್ಲಿ ಮಾಧ್ಯಮ ಸಂಯೋಜಕರಾಗಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಾಧ್ಯಮ ಪ್ರತಿನಿಧಿಗಳಿಗೆ ಸೂಕ್ತ ಮಾಹಿತಿ, ಮಾರ್ಗದರ್ಶನ ಮತ್ತು ಸೌಲಭ್ಯ ಒದಗಿಸುವ ಯಶಸ್ವಿ ನಿರ್ವಹಣೆ ಮಾಡಿದ್ದಾರೆ. ಶ್ರೀಯುತರಿಗೆ ಸರ್ಕಾರ ಹಾಗೂ ಹಲವು ಸಂಘ-ಸಂಸ್ಥೆಗಳಿಂದ ಹತ್ತಾರು ಪ್ರಶಸ್ತಿಗಳ ಗೌರವಕ್ಕೆ ಭಾಜನರಾಗಿದ್ದಾರೆ.
ಬಾನು ಮುಷ್ತಾಕ್
ಹಾಸನ ನಗರದಲ್ಲಿ 1954 ಏಪ್ರಿಲ್ 3 ರಂದು ಜನಿಸಿದ ಬಾನು ಮುಷ್ತಾಕ್ ಅವರು ಲೇಖಕಿಯಾಗಿ, ಪತ್ರಕರ್ತೆಯಾಗಿ, ನ್ಯಾಯವಾದಿಯಾಗಿ ಕ್ರಿಯಾಶೀಲರಾಗಿದ್ದಾರೆ. ಐದು ಕಥಾ ಸಂಕಲನ ಮತ್ತು ಒಂದು ಪ್ರಬಂಧ ಸಂಕಲನ ಪ್ರಕಟಿಸಿರುವ ಅವರು ಕೌಟುಂಬಿಕ ತಡೆ ಕಾಯ್ದೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಅನೇಕ ಕತೆಗಳು ಹಿಂದಿ, ಇಂಗ್ಲಿಷ್, ಉರ್ದು, ಮಲಯಾಳಂ, ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ.
ಬಾನು ಮುಷ್ತಾಕ್ ಬರೆದ ‘ಬೆಂಕಿಮಳೆ’ ಕತೆಯನ್ನು ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ‘ಹಸೀನ’ ಚಲನಚಿತ್ರವಾಗಿದೆ. ಈ ಚಿತ್ರ 3 ರಾಷ್ಟ್ರ ಪ್ರಶಸ್ತಿ ಗಳಿಸಿದೆ. ಹೆಜ್ಜೆ ಮೂಡಿದ ಹಾದಿ, ಬೆಂಕಿಮಳೆ, ಎದೆಯ ಹಣತೆ ಕಥಾಸಂಕಲನ ಹೊರತಂದಿದ್ದು, ಅವರ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಬಿ.ಸರೋಜದೇವಿ ಸಾಹಿತ್ಯ ಪ್ರಶಸ್ತಿ, ಇಂಟರ್ ನ್ಯಾಷನಲ್ ವುಮನ್ ಫಾರ್ ರೇಡಿಯೋ ಆ್ಯಂಡ್ ಟೆಲಿವಿಷನ್ ಬಹುಮಾನ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಬಹುಮಾನ ಹಾಗೂ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಪ್ರಶಸ್ತಿ, ಸುಧಾಮೂರ್ತಿ ಪ್ರಶಸ್ತಿಗಳು ಬಾನು ಮುಷ್ತಾಕ್ ಅವರನ್ನು ಅರಸಿ ಬಂದಿವೆ.
ಸಾಧಕರಿಗೆ ಸುವರ್ಣ ಮಹೋತ್ಸವ ಆಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ಗೀತಾಬಾಯಿ ತಿಳಿಸಿದ್ದಾರೆ.
-------------