

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಭಾನುವಾರ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶಾಸಕ ಎಸ್.ಎ. ರಾಮದಾಸ್ ಅವರನ್ನು ಮತ್ತೊಮ್ಮೆ ಬೆನ್ನುತಟ್ಟಿ, ಹಸ್ತಲಾಘವ ನೀಡಿ ಉಭಯ ಕುಶಲೋಪರಿ ವಿಚಾರಿಸಿದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟಿಸುವ ಸಲುವಾಗಿ ಪ್ರಧಾನಿ ವಿಮಾನದ ಮೂಲಕ ಮಂಡಕಳ್ಳಿಗೆ ಆಗಮಿಸಿದ್ದರು. ಈ ಸಂದರ್ಭ ಅವರನ್ನು ಸ್ವಾಗತಿಸಲು ರಾಮದಾಸ್ ತೆರಳಿದ್ದರು. ರಾಮದಾಸ್ ಅವರನ್ನು ಕಂಡ ಮೋದಿ ಬೆನ್ನುತಟ್ಟಿ, ಹಸ್ತಲಾಘವ ನೀಡಿದರು.
ರಾಮದಾಸ್ ಹಾಗೂ ಅವರ ಸಹೋದರನ ಕುಟುಂಬದವರ ಆರೋಗ್ಯವನ್ನು ಮೋದಿ ವಿಚಾರಿಸಿದರು. ಈ ಹಿಂದೆ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮದಾಸ್ ಅವರ ಬೆನ್ನು ತಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.