ಮತ್ತೊಂದು ನವೋದಯ ಶಾಲೆಗೆ ಸಂಸದ ಸುನೀಲ್ ಬೋಸ್ ಮನವಿ

IMG-20241218-WA0036
Published on

ಚಾಮರಾಜನಗರ: ಜಿಲ್ಲೆಗೆ ಮತ್ತೊಂದು ನವೋದಯ ವಿದ್ಯಾಲಯ ಮಂಜೂರು ಮಾಡಬೇಕು ಹಾಗೂ ಜಿಲ್ಲೆಯ ಹೊಂಡರಬಾಳುವಿನಲ್ಲಿರುವ ನವೋದಯ ಶಾಲೆಗೆ ಮತ್ತಷ್ಟು ಮೂಲಸೌಕರ್ಯ ಕಲ್ಪಿಸುವಂತೆ ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ಕೇಂದ್ರ ಶಿಕ್ಷಣ ಸಚಿವರಿಗೆ ಮನವಿ ಮಾಡಿದರು.

ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ಶಿಕ್ಷಣ ಸಚಿವರಾದ ಧಮೇಂದ್ರ ಪ್ರಧಾನ್ ಅವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಸದರಾದ ಸುನೀಲ್ ಬೋಸ್ ಅವರು ಗಡಿ ಜಿಲ್ಲೆಯಲ್ಲಿ ಆದ್ಯತೆಯ ಮೇರೆಗೆ ಮತ್ತೊಂದು ನವೋದಯ ಶಾಲೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಚಾಮರಾಜನಗರ ಜಿಲ್ಲೆ ಪ್ರಸ್ತುತ ಶೈಕ್ಷಣಿಕ ವಿಷಯದಲ್ಲಿ ಗೋಚರ ಪ್ರಗತಿಯನ್ನು ತೋರುತ್ತಿದೆ. ಸಾಮಾಜಿಕವಾಗಿ ಜಿಲ್ಲೆ ಹಿಂದುಳಿದಿದ್ದು, ಇತರ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿದ್ದು ರಾಜ್ಯದ ಗಡಿಯ ಕೊನೆಯಲ್ಲಿದೆ. ಇಡೀ ಜಿಲ್ಲೆಗೆ ಒಂದು ನವೋದಯ ಶಾಲೆ ಇದ್ದು, ಇದು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾಲಯದ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಪ್ರತಿವರ್ಷ ಹೆಚ್ಚಳವಾಗಿದೆ. ಪ್ರತೀ ವರ್ಷವೂ ಸಹ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಗ್ರಾಮೀಣ ಭಾಗದ ಮಕ್ಕಳ ಅಗತ್ಯಗಳನ್ನು ಪೂರೈಸಲು ಹಾಗೂ ಅವರನ್ನು ಉತ್ತೇಜಿಸಲು ಜಿಲ್ಲೆಯ ಶೈಕ್ಷಣಿಕ ಪ್ರಗತಿಗಾಗಿ ಮತ್ತೊಂದು ನವೋದಯ ವಿದ್ಯಾಲಯದ ಅಗತ್ಯವನ್ನು ಗುರುತಿಸಲಾಗಿದೆ. ಹಾಗಾಗಿ ಇನ್ನೊಂದು ನವೋದಯ ಶಾಲೆಯನ್ನು ಮಂಜೂರು ಮಾಡಿ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಬೇಕು ಎಂದು ಲೋಕಸಭಾ ಸದಸ್ಯರು ಮನವಿ ಮಾಡಿದರು.

ಅಲ್ಲದೇ ಜಿಲ್ಲೆಯ ಹೊಂಡರಬಾಳಿನಲ್ಲಿ ಇರುವ ಜವಾಹರ್ ನವೋದಯ ವಿದ್ಯಾಲಯ ವಸತಿ ಶಾಲೆಯಲ್ಲಿ 460 ವಿದ್ಯಾರ್ಥಿಗಳು ಮತ್ತು 60 ಸಿಬ್ಬಂದಿ ಮತ್ತು ಅವರ ಕುಟುಂಬದ ಸದಸ್ಯರು ಉಳಿದುಕೊಂಡಿದ್ದಾರೆ. ಸಂಸ್ಥೆಗೆ ಕೆಲ ಸೌಲಭ್ಯಗಳ ಅಗತ್ಯವಿದ್ದು, ಇದಕ್ಕಾಗಿ ಶಾಲಾ ಮಟ್ಟದಲ್ಲಿ ವ್ಯವಸ್ಥೆ ಮಾಡಲು ಅನುದಾನದ ಕೊರತೆಯಿದೆ. ಹಾಗಾಗಿ ತಾವು ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ವಿದ್ಯಾಲಯದ ವಸತಿನಿಲಯಗಳ ಡಾರ್ಮೆಟರಿ ಮತ್ತು ಶೈಕ್ಷಣಿಕ ಬ್ಲಾಕ್‍ಗಳಲ್ಲಿ ಬಿಸಿ ನೀರು ಸೌಲಭ್ಯವುಳ್ಳ 10 ವಾಟರ್ ಪ್ಯೂರಿಫೈಯರ್ ವ್ಯವಸ್ಥೆ, ಶಾಲೆಯ ಆಂತರಿಕ ರಸ್ತೆಗಳ ಸುಧಾರಣೆ, 80 ಡ್ಯುಯಲ್ ಡೆಸ್ಕ್‍ಗಳೊಂದಿಗೆ ಹೆಚ್ಚುವರಿಯಾಗಿ 2 ತರಗತಿ ಕೊಠಡಿಗಳ ನಿರ್ಮಾಣ, ಕೌಶಲ ಪ್ರಯೋಗಾಲಯಗಳಿಗಾಗಿ ಎರಡು ಕೊಠಡಿಗಳನ್ನು ನಿರ್ಮಾಣ ಮಾಡಿಕೊಡಬೇಕು. ಈ ಎಲ್ಲಾ ಸೌಲಭ್ಯಗಳನ್ನು ಆದ್ಯತೆ ಮೇರೆಗೆ ಒದಗಿಸಿಕೊಡುವಂತೆ ಲೋಕಸಭಾ ಸದಸ್ಯರಾದ ಸುನೀಲ್ ಬೋಸ್ ಅವರು ಕೇಂದ್ರ ಶಿಕ್ಷಣ ಸಚಿವರಿಗೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net