

ಬೀದರ್: ಒಂದು ವಾರದ ವಿರಾಮ ಬಳಿಕ ನಗರ ಸೇರಿದಂತೆ ಜಿಲ್ಲಾದ್ಯಂತ ಮತ್ತೆ ವರುಣ ಆರ್ಭಟಿಸಿದ್ದು, ಪ್ರವಾಹದ ಆತಂಕ ಎದುರಾಗಿದೆ. ಶುಕ್ರವಾರ ಬೆಳಗ್ಗಿನ ಜಾವ ಹಾಗೂ ಮಧ್ಯಾಹ್ನ ಜಿಲ್ಲೆಯ ಬಹುತೇಕ ಕಡೆ ಮಳೆಯಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 25 ಮಿ.ಮೀ. ಮಳೆ ಬಿದ್ದಿದೆ. ಬೀದರ್ ಮತ್ತು ಔರಾದ್ ತಾಲೂಕಿನಲ್ಲಿ ಮಳೆ ಪ್ರಮಾಣ ಹೆಚ್ಚಿದೆ.
ಔರಾದ್ ತಾಲೂಕಿನ ನಾಗೂರ (ಎಂ)ದಲ್ಲಿ ಶುಕ್ರವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದ ಕಾಶೆಂಪುರ (ಬಿ) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸೇತುವೆ ಮೇಲಿಂದ ನೀರು ಹರಿಯಿತು. ಇದರಿಂದ ಅರ್ಧ ಗಂಟೆಗೂ ಹೆಚ್ಚಿನ ಕಾಲ ಸಂಚಾರ ಸ್ಥಗಿತವಾಗಿತ್ತು. ಸಂತಪುರ ಪಿಎಸ್ಐ ಸಿದ್ದಣ್ಣ ಗಿರಿಗೌಡರ್ ಸ್ಥಳಕ್ಕೆ ಭೇಟಿ ನೀಡಿ ನೀರಿನ ರಭಸ ಕಡಿಮೆಯಾಗುವ ತನಕ ಸೇತುವೆ ಮೇಲೆ ಯಾರೂ ಸಂಚರಿಸಬಾರದು ಎಂದು ತಿಳಿಹೇಳಿದರು. ಕಾನ್ಸ್ಟೆಬಲ್ ಮಹೇಶ ಮೇತ್ರೆ, ವೆಂಕಟ್ ಇತರರಿದ್ದರು.
ಈ ತಿಂಗಳ ಎರಡನೇ ವಾರ ಸತತ ವ್ಯಾಪಕ ಮಳೆಯಾಗಿತ್ತು. ಒಂದು ವಾರ ವಿರಾಮ ಪಡೆದ ನಂತರ ಬೆಳಗ್ಗೆಯಿಂದ ಜಿಲ್ಲಾದ್ಯಂತ ವಾತಾವರಣ ಬದಲಾಗಿ ಮತ್ತೆ ಮಳೆ ಶುರುವಾಗಿದೆ. ಈಗಾಗಲೇ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಹಳ್ಳ, ಕೊಳ್ಳ ತುಂಬಿ ಹರಿದಿವೆ. ಇದೀಗ ಮತ್ತೆ ಜೋರಾಗಿ ಬರುತ್ತಿರುವುದರಿಂದ ಪ್ರವಾಹದ ಜತೆಗೆ ಇನ್ನಷ್ಟು ಬೆಳೆ, ಆಸ್ತಿಪಾಸ್ತಿ ಹಾನಿಗೀಡಾಗುವ ಅಪಾಯ ಎದುರಾಗಿದೆ.
ಶುಕ್ರವಾರ ಮಧ್ಯಾಹ್ನ 1ರಿಂದ ಬೀದರ್ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಮಳೆ ಬಂದಿದೆ. ಇನ್ನೂ ಎಲ್ಲೆಡೆ ಕಾಮರ್ೋಡ ಕವಿದ ಕಾರಣ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ. ನಗರದಲ್ಲಿ ಸಾಮಾನ್ಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಅನೇಕ ಮನೆ, ಅಂಗಡಿಗಳಿಗೆ ನೀರು ನುಗ್ಗಿ ಜನರಿಗೆ ಪರಿತಾಪ ತಂದಿದೆ. ನಗರದ ವಿವಿಧ ರಸ್ತೆಗಳು ಕೆರೆಯಂತಾಗಿವೆ. ಎಲ್ಲೆಡೆ ಸಂಚಾರಕ್ಕೆ ಅಡಚಣೆಯಾಗಿತ್ತು.
ಈಗಾಗಲೇ ಮಳೆಯಿಂದ ಬೆಳೆಗಳು ಜಲಾವೃತಗೊಂಡಿವೆ. ಮತ್ತೆ ಮಳೆಯಾಗುತ್ತಿರುವುರಿಂದ ರೈತರು ಆತಂಕಗೊಂಡಿದ್ದಾರೆ. ಕಾರಂಜಾ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು, 7.69 ಟಿಎಂಸಿ ಸಾಮಥ್ರ್ಯದಲ್ಲಿ 5.23 ಟಿಎಂಸಿ ನೀರು ಬಂದಿದೆ. ಜಿಲ್ಲೆಯ 125 ಕೆರೆಗಳ ಪೈಕಿ ಶೇ.40 ಬಹುತೇಕ ತುಂಬಿವೆ. ಇನ್ನಷ್ಟು ಮಳೆ ಬಂದರೆ ಕೆರೆಗಳು ಅಪಾಯದ ಮಟ್ಟ ತಲುಪುವ ಸಾಧ್ಯತೆಗಳಿವೆ.
1247 ಮನೆ ಕುಸಿತ: ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯಲ್ಲಿ 20 ದಿನಗಳಲ್ಲಿ 1247 ಮನೆಗಳು ಕುಸಿದಿವೆ. ಔರಾದ್ ತಾಲೂಕಿನಲ್ಲಿ 440, ಬಸವಕಲ್ಯಾಣ 275, ಬೀದರ್ 198, ಭಾಲ್ಕಿ 119, ಕಮಲನಗರ 101, ಹುಮನಾಬಾದ್ 48, ಚಿಟಗುಪ್ಪ 43 ಹಾಗೂ ಹುಲಸೂರು ತಾಲೂಕಿನಲ್ಲಿ 23 ಮನೆಗಳು ಕುಸಿದಿವೆ.