ಮತ್ತೆ ವಕ್ಕರಿಸಿದ ವೈರಿ ವೈರಾಣು

carona logo
Published on

ಧಾರವಾಡ: ಜಿಲ್ಲೆಯಲ್ಲಿ ಗುರುವಾರ ಮತ್ತೆ 5 ಕರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

ಐವರಲ್ಲಿ ಇಬ್ಬರು ಪಿ- 1505 (6 ವರ್ಷದ ಬಾಲಕಿ) ಹಾಗೂ ಪಿ- 1506 (29 ವರ್ಷದ ಮಹಿಳೆ) ತೆಲಂಗಾಣದ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. ಪಿ- 1507 (9 ವರ್ಷದ ಬಾಲಕಿ), ಪಿ-1508 (24 ವರ್ಷದ ಮಹಿಳೆ), ಪಿ- 1509 (35 ವರ್ಷದ ಪುರುಷ) ಮುಂಬೈ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.

31 ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಈಗಾಗಲೇ 9 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಸೋಂಕಿತರ ಪ್ರಯಾಣ ಮಾಹಿತಿ:

ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ್ದ ಐವರಲ್ಲಿ ಗುರುವಾರ ಕರೊನಾ ಸೋಂಕು ದೃಢಪಟ್ಟಿದ್ದು, ಅವರ ಪ್ರಯಾಣದ ವಿವರವನ್ನು ಸಾರ್ವಜನಿಕ ಮಾಹಿತಿಗಾಗಿ ಜಿಲ್ಲಾಡಳಿತ ಪ್ರಕಟಿಸಿದೆ.

ಪಿ- 1505 ಹಾಗೂ ಪಿ - 1506 ಹಳೇಹುಬ್ಬಳ್ಳಿಯ ನಿವಾಸಿಗಳು. ಇವರು ಮಾ. 18ರಂದು ಹುಬ್ಬಳ್ಳಿಯಿಂದ ವಿಜಯವಾಡ ರೈಲು ಮೂಲಕ ಕರ್ನಲ್​ನಲ್ಲಿಯ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು. ಲಾಕ್​ಡೌನ್ ಘೊಷಣೆಯಾದ ಮೇಲೆ ಮೇ 17ರವರೆಗೆ ವಾಸವಾಗಿದ್ದರು. 17ರಂದು ಸಂಜೆ ಈ ಕುಟುಂಬದ ನಾಲ್ವರು, ಸಂಬಂಧಿಕರ ಮನೆಯಿಂದ ಹೊರಟು ಆಟೋದಲ್ಲಿ ಅಲ್ಲಪುರಂ ತಲುಪಿ ಅಲ್ಲಿಂದ ಬಾಡಿಗೆ ಕಾರ್ ಮೂಲಕ ರಾಯಚೂರು, ಮಾನ್ವಿ, ಗಂಗಾವತಿ ಮಾರ್ಗವಾಗಿ ಬಂದಿದ್ದಾರೆ. ರಾಯಚೂರಿನ ಶಕ್ತಿನಗರ ಮತ್ತು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಚೆಕ್​ಪೋಸ್ಟ್ ದಾಟಿ ಮೇ 18ರಂದು ಬೆಳಗ್ಗೆ 8 ಗಂಟೆಗೆ ಹುಬ್ಬಳ್ಳಿ, 9 ಗಂಟೆಗೆ ಧಾರವಾಡ ತಲುಪಿದ್ದಾರೆ. ಅದೇ ದಿನ ನಾಲ್ವರ ಗಂಟಲ ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್​ನಲ್ಲಿರಿಸಲಾಗಿತ್ತು. 20ರಂದು ಪಿ-1505 ಹಾಗೂ ಪಿ- 1506 ಕೋವಿಡ್​19 ಸೋಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂಬೈ ವಾಸಿಗಳು:

ಪಿ- 1507, ಪಿ- 1508 ಹಾಗೂ ಪಿ- 1509 ಸಂಖ್ಯೆಯ ರೋಗಿಗಳು ಮೂಲತಃ ಧಾರವಾಡ ತಾಲೂಕಿನ ಹಳ್ಳಿಯೊಂದರ ನಿವಾಸಿಗಳು. ಅಂದಾಜು 40 ವರ್ಷದಿಂದ ಈ ಕುಟುಂಬದವರು ಮುಂಬೈನಲ್ಲಿ ಉದ್ಯೋಗ ಮಾಡಿಕೊಂಡಿದ್ದಾರೆ. ಅಲ್ಲಿಯ ಶಿವಾಜಿ ನಗರದ ಕಾಯಂ ನಿವಾಸಿಗಳು. ಮಹಾರಾಷ್ಟ್ರದಲ್ಲಿ ಕರೊನಾ ಬಹಳ ವೇಗವಾಗಿ ವ್ಯಾಪಿಸುತ್ತಿರುವುದರಿಂದ ಮತ್ತು ಶಾಲೆಗಳಿಗೆ ರಜೆ ಇರುವುದರಿಂದ ಮೂಲ ಮನೆಯಲ್ಲಿ ಒಂದಿಷ್ಟು ದಿನ ನೆಮ್ಮದಿಯಿಂದ ಇರೋಣ ಎಂದು ಬಂದಿದ್ದಾರೆ.

ಮೇ 16ರಂದು ರಾತ್ರಿ 11.30ಕ್ಕೆ ಬಾಡಿಗೆ ಇನ್ನೋವಾ ವಾಹನ ಸಂಖ್ಯೆ: ಎಂಎಚ್ 04- ಇಡಿ-5367 ಮೂಲಕ ಕುಟುಂಬದ 11 ಸದಸ್ಯರು ಮುಂಬೈಯಿಂದ ಹೊರಟು ಮರುದಿನ ರಾತ್ರಿ 8 ಗಂಟೆಗೆ ಕೊಲ್ಲಾಪುರ ಚೆಕ್​ಪೊಸ್ಟ್ ಹತ್ತಿರ ಊಟ ಮಾಡಿದ್ದಾರೆ. ಸ್ವಲ್ಪ ವಿಶ್ರಾಂತಿ ಪಡೆದು ರಾತ್ರಿ 11.30ಕ್ಕೆ ಕೊಲ್ಲಾಪುರದಿಂದ ಹೊರಟು 18ರಂದು ಬೆಳಗ್ಗೆ 5 ಗಂಟೆಗೆ ಧಾರವಾಡ ತಲುಪಿದ್ದಾರೆ.

ಅಂದೇ ಎಲ್ಲ 11 ಜನರ ಗಂಟಲ ದ್ರವ ಮಾದರಿ ಸಂಗ್ರಹಿಸಿ, ಅವರನ್ನು ಕ್ವಾರಂಟೈನ್​ನಲ್ಲಿರಿಸಲಾಗಿತ್ತು. 20ರಂದು ಮೂವರಲ್ಲಿ ಕೋವಿಡ್- 19 ಸೋಂಕು ದೃಢಪಟ್ಟಿದ್ದರಿಂದ ಕಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿದೆ

ಈ ಐವರು ವ್ಯಕ್ತಿಗಳನ್ನು ಸಂರ್ಪಸಿದ ಸಾರ್ವಜನಿಕರಿಗೆ ಕರೊನಾ ಸೋಂಕು ತಗಲುವ ಸಾಧ್ಯತೆ ಇದೆ. ಅಂಥವರು ಕೂಡಲೆ ಕರೊನಾ ಸಹಾಯವಾಣಿ 1077ಗೆ ಕರೆ ಮಾಡಿ ತಮ್ಮ ವಿವರ ನೀಡಬೇಕು. ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಪ್ರಕಟಣೆ ತಿಳಿಸಿದೆ.

1,269 ವರದಿ ಬಾಕಿ

ಧಾರವಾಡ: ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಗುರುವಾರ ಐವರಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಇನ್ನೂ 1,269 ಜನರ ಗಂಟಲ ದ್ರವ ಪರೀಕ್ಷಾ ವರದಿ ಬರುವುದು ಬಾಕಿ ಇದೆ.

ಜಿಲ್ಲೆಯಲ್ಲಿ ಇದುವರೆಗೆ 11,745 ಜನರ ಮೇಲೆ ನಿಗಾ ವಹಿಸಲಾಗಿದೆ. 11,086 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪೈಕಿ 9,795 ಜನರ ವರದಿ ನೆಗೆಟಿವ್ ಬಂದಿವೆ. 31 ಪ್ರಕರಣದಲ್ಲಿ ಪಾಸಿಟಿವ್ ಬಂದಿದ್ದು, 22 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 9 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net