

ಶಹಾಪುರ: ನಗರ ಸೇರಿ ತಾಲೂಕಿನ ವಿವಿಧೆಡೆ ಮಂಗಳವಾರ ಸುರಿದ ಭಾರಿ ಮಳೆಯಿಂದ ಅಪಾರ ಪ್ರಮಾಣದ ಹಾನಿಯಾದ ವರದಿಯಾಗಿದ್ದು, ಹೊಲ-ಗದ್ದೆಗೆ ಮತ್ತು ಮನೆಗಳಿಗೆ ನೀರು ನುಗ್ಗಿ ದೊಡ್ಡ ಆವಾಂತರವೆ ಸೃಷ್ಟಿಸಿದೆ.
ಮಳೆ ಬಂದರೂ ಕಷ್ಟ, ಬಾರದಿದ್ದರೂ ಕಷ್ಟ. ಇದು ರೈತರ ಸದ್ಯದ ಪರಿಸ್ಥಿತಿಯಾಗಿದೆ. ಮಳೆಯನ್ನೇ ನಂಬಿದ ರೈತರು ಬೆಲೆ ಬಾಳುವ ಬೀಜ ಮತ್ತು ರಸಗೊಬ್ಬರ ತಂದು ಬಿತ್ತನೆ ಮಾಡಿದ್ದಾರೆ. ಬೆಳೆ ಕೂಡ ಚನ್ನಾಗಿದ್ದು, ಈ ಮಳೆಯಿಂದಾಗಿ ಸಂಪೂರ್ಣ ಹಾನಿಗೊಳಗಾಗುವಂತಾಗಿದೆ.
ತಾಲೂಕಿನ ವಿಭೂತಿಹಳ್ಳಿ, ತಿಪ್ಪನಹಳ್ಳಿ, ಹೈಯಾಳ, ಬೇವಿನಹಳ್ಳಿ, ಗೋಗಿ, ದಿಗ್ಗಿ, ಸೈದಾಪುರ, ದೋರನಹಳ್ಳಿ, ಸಗರ, ಮುನಮುಟಗಿ, ಬೆನಕನಹಳ್ಳಿ, ಮಡ್ನಾಳ, ಇಂಗಳಗಿ ಸೇರಿ ಕೆಲ ಗ್ರಾಮಗಳಲ್ಲಿ ಹತ್ತಿ, ಮೆಣಸಿನ ಕಾಯಿ ಮತ್ತು ತೊಗರಿ ಹೊಲಗಳಿಗೆ ನೀರು ನುಗ್ಗಿದ್ದರಿಂದ ಬಿತ್ತನೆ ಮಾಡಿದ ನೂರಾರು ಎಕರೆ ಪ್ರದೇಶ ಬೆಳೆ ಹಾನಿಗೊಳಗಾಗಿದ್ದು, ಇನ್ನೂ ಕೆಲವು ಕಡೆ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಹಾನಿಗೊಳಗಾದ ಪ್ರದೇಶಕ್ಕೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ಒದಗಿಸುವ ಕಾರ್ಯ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಶಹಾಪುರ-೧೨೨.೦೪ ಬೀ.ಗುಡಿ-೯೪.೮, ಹತ್ತಿಗೂಡೂರು-೬, ದೋರನಹಳ್ಳಿ-೯೫, ಗೋಗಿ-೯೬.೦೪, ಹೈಯ್ಯಾಳ-೨ ಹಾಗೂ ವಡಗೇರಾ-೧೦೫ ಮಿಮೀ ಮಳೆಯಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಸುನೀಲಕುಮಾರ ತಿಳಿಸಿದ್ದಾರೆ.