ಮತ್ತೆ ರೆಡ್ ಜೋನ್​ಗೆ ತಿರುಗಿದ ಭಟ್ಕಳ

8KWR3
Published on

ಕಾರವಾರ/ಭಟ್ಕಳ: ಉತ್ತರ ಕನ್ನಡ ಕರೊನಾ ಸೋಂಕಿತರ ಮೀಟರ್ ಒಮ್ಮೆಲೇ ಸೊನ್ನೆಯಿಂದ 24 ಏರಿಬಿಟ್ಟಿದೆ. ಭಟ್ಕಳ ರೆಡ್ ಜೋನ್​ನತ್ತ ಹೆಜ್ಜೆಯಿಟ್ಟಿದೆ. ಸೋಂಕು ಸಾರ್ವಜನಿಕವಾಗಿ ಹರಡುವುದನ್ನು ತಪ್ಪಿಸಲು ಇಡೀ ಪಟ್ಟಣವನ್ನು ಸಂಪೂರ್ಣವಾಗಿ ಸೀಲ್​ಡೌನ್ ಮಾಡಲಾಗಿದೆ.

ಭಟ್ಕಳದ 12 ಜನರಲ್ಲಿ ಕೋವಿಡ್-19 ಸೋಂಕು ಇರುವುದು ಶುಕ್ರವಾರ ಖಚಿತವಾಗಿದ್ದು, ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಇನ್ನೂ 52 ಜನರ ಗಂಟಲ ದ್ರವದ ಮಾದರಿ ಪಡೆದು ಬೆಂಗಳೂರು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಒಂದೆರಡು ದಿನಗಳಲ್ಲಿ ವರದಿ ಬರುವ ನಿರೀಕ್ಷೆ ಇದೆ. ಈ ಎಲ್ಲರನ್ನೂ ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಐದು ತಿಂಗಳ ಮಗುವಿಗೂ ಸೋಂಕು: ಕರೊನಾದಲ್ಲಿ ಅತಿ ಅಪಾಯಕರ ಎಂದು ಗುರುತಿಸಲಾದ ವೃದ್ಧರು ಮತ್ತು ಮಕ್ಕಳಿಗೂ ಈ ಹಂತದಲ್ಲಿ ಸೋಂಕು ಹರಡಿರುವುದು ಈ ಬಾರಿಯ ಆತಂಕ ಹೆಚ್ಚಲು ಕಾರಣವಾಗಿದೆ.

ಮೇ 5ರಂದು ಕರೊನಾ ಖಚಿತವಾದ ಭಟ್ಕಳದ 18 ವರ್ಷದ ಯುವತಿ (ಪಿ-659) ಸಂಪರ್ಕಕ್ಕೆ ಬಂದ 20ರಲ್ಲಿ 12 ಜನರಿಗೆ ಸೋಂಕಿರುವುದು ಖಚಿತವಾಗಿದೆ. 10 ಜನ ಅದೇ ಯುವತಿಯ ಮನೆಯವರಾಗಿದ್ದು, ಆಕೆಯ ಆಪ್ತ ಸ್ನೇಹಿತೆ ಹಾಗೂ ಪಕ್ಕದ ಮನೆಯ ಒಬ್ಬ ವ್ಯಕ್ತಿಗೂ ರೋಗ ಹರಡಿದೆ.

ಸೋಂಕಿತ 12 ಜನರಲ್ಲಿ ಅಪಸ್ಮಾರ ಕಾಯಿಲೆ ಇರುವ 5 ತಿಂಗಳ ಹೆಣ್ಣು ಮಗು (ಪಿ-747), 83 ವರ್ಷದ ವೃದ್ಧ (ಪಿ-746) ಕೂಡ ಇರುವುದು ಆತಂಕ ಹೆಚ್ಚಲು ಕಾರಣವಾಗಿದೆ.

ಅಲ್ಲದೆ, 3 ವರ್ಷ (ಪಿ- 748), 11 ವರ್ಷ(ಪಿ.741), 12 ವರ್ಷ (ಪಿ - 745) ವಯಸ್ಸಿನ ಮೂವರು ಬಾಲಕಿಯರು; 75 ವರ್ಷದ ಒಬ್ಬ ವೃದ್ಧೆ (ಪಿ - 744), 60 ವರ್ಷದ ವೃದ್ಧ (ಪಿ-749), ಇನ್ನೂ ನಾಲ್ವರು ಮಹಿಳೆಯರು (ಪಿ - 739, 740, 742,750), ಒಬ್ಬ ಪುರುಷ (ಪಿ - 743)ಸೇರಿದ್ದಾರೆ.

ಇನ್ನೂ ಎರಡು ಕುಟುಂಬ: ಮೇ 5ರಂದು ಕರೊನಾ ಸೋಂಕು ಖಚಿತವಾದ 18 ವರ್ಷದ ಯುವತಿಯ ಅಕ್ಕ ಹಾಗೂ ಭಾವ ತಮ್ಮ 5 ತಿಂಗಳ ಮಗುವಿನ ಅಪಸ್ಮಾರ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೊ ಆಸ್ಪತ್ರೆಗೆ ಏ. 20ರಂದು ಹೋಗಿ ಬಂದಿದ್ದರು. ಏ. 19ರಂದು ಇದೇ ಆಸ್ಪತ್ರೆಯಲ್ಲಿ ಕರೊನಾದಿಂದ ಮಹಿಳೆಯೊಬ್ಬರ ಸಾವು ಸಂಭವಿಸಿತ್ತು. ಅಲ್ಲಿಂದಲೇ ರೋಗ ಭಟ್ಕಳಕ್ಕೆ ಹಬ್ಬಿದೆ ಎಂಬುದು ಖಚಿತವಾಗಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ಜತೆ ಮಾತನಾಡಿದ ನಂತರ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಏಪ್ರಿಲ್ ನಂತರ ಚಿಕಿತ್ಸೆ ಪಡೆದ ಎಲ್ಲರ ಪಟ್ಟಿಯನ್ನು ಕಳುಹಿಸಿಕೊಡಲಾಗಿದೆ. ಏ. 3ರಂದು ಭಟ್ಕಳದ ಒಂದು ಹಾಗೂ ಏ. 16ರಂದು ಭಟ್ಕಳದ ಇನ್ನೊಂದು ಕುಟುಂಬ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದೆ. ಇದರಿಂದ ಈ ಎರಡೂ ಕುಟುಂಬಗಳ 8 ಜನರನ್ನು ಗುರುತಿಸಿ ಗಂಟಲ ದ್ರವದ ಮಾದರಿಯನ್ನು ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ತಿಳಿಸಿದ್ದಾರೆ.

ಯಥಾಸ್ಥಿತಿಯಲ್ಲಿ ಲಾಕ್​ಡೌನ್: ಭಟ್ಕಳದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಿದ ಮಾತ್ರಕ್ಕೆ ಇಡೀ ಜಿಲ್ಲೆಯನ್ನು ಲಾಕ್​ಡೌನ್ ಮಾಡುವ ಯಾವುದೇ ಯೋಚನೆಯಿಲ್ಲ. ಭಟ್ಕಳ ಬಿಟ್ಟು ಉಳಿದೆಡೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಯಂತೆ ಇನ್ನಷ್ಟು ಉದಾರವಾಗಿ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

7 ಗಂಟೆಯವರೆಗೆ ಅವಕಾಶ: ಕಳೆದ ನಾಲ್ಕು ದಿನಗಳಿಂದ ಬೆಳಗ್ಗೆ 7 ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ಕಾರವಾರ ನಗರದಲ್ಲಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ, ಶುಕ್ರವಾರ ಸಾಯಂಕಾಲ 7 ಗಂಟೆಯವರೆಗೂ ಅಂಗಡಿಗಳನ್ನು ತೆಗೆಯಲು ಅವಕಾಶ ನೀಡಲಾಗಿದೆ. ಇಂದಿನ ಪರಿಸ್ಥಿತಿ ನೋಡಿ ಮುಂದೆ ಎಷ್ಟು ಹೊತ್ತಿನವರೆಗೆ ಅವಕಾಶ ನೀಡಬೇಕು ಎಂಬ ನಿರ್ಣಯವನ್ನು ಹಿರಿಯ ಅಧಿಕಾರಿಗಳ ಜತೆ ರ್ಚಚಿಸಿ ಕೈಗೊಳ್ಳಲಾಗುವುದು ಎಂದು ಸಿಪಿಐ ಸಂತೋಷ ಶೆಟ್ಟಿ ತಿಳಿಸಿದ್ದಾರೆ.

ಆರೋಗ್ಯ ಸಾಮಗ್ರಿ ಕೊರತೆ ಇಲ್ಲ: ಭಟ್ಕಳದ ಎಲ್ಲ ಕೋವಿಡ್-19 ಸೋಂಕಿತರಿಗೆ ಇಲ್ಲಿನ ಮೆಡಿಕಲ್ ಕಾಲೇಜ್​ನ ವಿಶೇಷ ವಾರ್ಡ್​ನಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ಒಬ್ಬ ರೋಗಿಯನ್ನು ಗುರುವಾರವೇ ಸಾಗಿಸಲಾಗಿದ್ದು, ಇನ್ನೂ 12 ಜನರನ್ನು ಶುಕ್ರವಾರ ಕರೆತರಲಾಗಿದೆ. ವಾರ್ಡ್​ನಲ್ಲಿ 200 ಬೆಡ್​ಗಳಿವೆ. ಎಲ್ಲ ಔಷಧ ಹಾಗೂ ಚಿಕಿತ್ಸಾ ಸಾಮಗ್ರಿಗಳ ಸಂಗ್ರಹವಿದೆ. ಯಾವುದೇ ಆತಂಕ ಬೇಡ ಎಂದು ಕೋವಿಡ್-19 ಆರೋಗ್ಯ ವಿಭಾಗದ ನೋಡಲ್ ಅಧಿಕಾರಿ ಜಿಪಂ ಸಿಇಒ ಎಂ.ರೋಶನ್ ಮಾಹಿತಿ ನೀಡಿದ್ದಾರೆ.

ಖಾಸಗಿ ಆಸ್ಪತ್ರೆಗಳು ಬಂದ್: ಭಟ್ಕಳವನ್ನು ಕಂಟೇನ್ಮೆಂಟ್ ವಲಯ ಎಂದು ಈಗಾಗಲೇ ಗುರುತಿಸಲಾಗಿದ್ದು, ಜಿಲ್ಲಾಧಿಕಾರಿ ಮರು ಆದೇಶ ಹೊರಡಿಸಿದ್ದಾರೆ. ಭಟ್ಕಳದ ಪೂರ್ವಕ್ಕೆ ಬೆಳಖಂಡ ರೈಲ್ವೆ ನಿಲ್ದಾಣ ರಸ್ತೆ, ಪಶ್ಚಿಮಕ್ಕೆ ತಲಗೇರಿ ರಸ್ತೆ, ಉತ್ತರಕ್ಕೆ ವೆಂಕಟಾಪುರ ನದಿ, ದಕ್ಷಿಣಕ್ಕೆ ಮುಂಡಳ್ಳಿ ಗ್ರಾಮದ ಗಡಿಯ ಒಳಗಿನ ಪ್ರದೇಶವನ್ನು ಕಂಟೇನ್ಮೆಂಟ್ ಪ್ರದೇಶ ಎಂದು ಪರಿಗಣಿಸಲಾಗಿದೆ. ಇಲ್ಲಿ 10,806 ಜನಸಂಖ್ಯೆ ಇದ್ದು, 2057 ಅಂಗಡಿಗಳು, 65 ಕಚೇರಿಗಳಿವೆ. 51 ಸಾವಿರ ಜನಸಂಖ್ಯೆ ಇದೆ. ಕಂಟೇನ್ಮೆಂಟ್ ವಲಯದ 5 ಕಿಮೀ ಸುತ್ತಲಿನ ಪ್ರದೇಶವನ್ನು ಬಫರ್ ವಲಯ ಎಂದು ಗುರುತಿಸಲಾಗಿದೆ.

ಪೂರ್ವಕ್ಕೆ ಕೋಣಾರ ಗ್ರಾಮ, ಪಶ್ಚಿಮಕ್ಕೆ ಅರಬ್ಬಿ ಸಮುದ್ರ, ಉತ್ತರಕ್ಕೆ ಸಿಎಚ್​ಸಿ-ಶಿರಾಲಿ, ದಕ್ಷಿಣಕ್ಕೆ ಬೆಳಕೆ ಗ್ರಾಪಂ ಕಚೇರಿ ಈ ಪ್ರದೇಶ ಸೇರಿದೆ. ಭಟ್ಕಳ ಉಪವಿಭಾಗಾಧಿಕಾರಿ ಭರತ್ ಅವರು ಅದರ ಮೇಲ್ವಿಚಾರಣೆ ನೋಡುತ್ತಾರೆ. ಪ್ರದೇಶದ ಪೊಲೀಸ್ ಭದ್ರತೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲಾಗುವುದು. ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಲಾಗಿದೆ. ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮಾಹಿತಿ ಮುಚ್ಚಿಟ್ಟರೆ ಕ್ರಮ- ಡಿಸಿ ಎಚ್ಚರಿಕೆ: ಹಿಂದೆ ಜಿಲ್ಲೆಯಲ್ಲಿ ದಾಖಲಾದ ಎಲ್ಲ ಕೋವಿಡ್-19 ಸೋಂಕಿತರನ್ನು ಗರಿಷ್ಠ 36 ಗಂಟೆಗಳಲ್ಲೇ ಕ್ವಾರಂಟೈನ್ ಮಾಡಿದ್ದರಿಂದ ರೋಗ ಹರಡುವ ಪ್ರಮಾಣ ಕಡಿಮೆಯಾಯಿತು. ಎರಡನೇ ಹಂತದಲ್ಲಿ ಸೋಂಕಿತರು ಆಸ್ಪತ್ರೆಗೆ ಹೋಗಿ ಬಂದು 16 ದಿನ ಕಳೆದು ಹೋಗಿದೆ. ಇದರಿಂದ ಇಷ್ಟೊಂದು ಜನರಿಗೆ ಹರಡಲು ಕಾರಣವಾಗಿದೆ. ಸೋಂಕಿನ ಮಾಹಿತಿ ಬೇಗನೇ ತಿಳಿದರೆ ನಾವು ಹರಡುವಿಕೆ ತಡೆಗಟ್ಟಬಹುದು. ಇದರಿಂದ ಜನ ತಮ್ಮ ಹಾಗೂ ಸಮಾಜದ ಆರೋಗ್ಯಕ್ಕಾಗಿ ತಮ್ಮ ಆರೋಗ್ಯದ ಮಾಹಿತಿಯನ್ನು ಸ್ವಯಂಪ್ರೇರಿತವಾಗಿ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಕರೊನಾ ಸೋಂಕಿತ ಪ್ರದೇಶಕ್ಕೆ ಹೋಗಿ ಬಂದಿದ್ದರೆ, ಕೆಂಪು ವಲಯದಿಂದ ಬಂದಿದ್ದರೆ, ಕರೊನಾ ಸೋಂಕಿತ ವ್ಯಕ್ತಿಯ ಮೂರನೇ ಸಂಪರ್ಕಕ್ಕೆ ಬಂದಿದ್ದರೂ ಸ್ವ ಇಚ್ಛೆಯಿಂದ ಆಡಳಿತಕ್ಕೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ. ನಮ್ಮ ಆಶಾ ಕಾರ್ಯಕರ್ತೆಯರು ಮನೆಗೆ ಆಗಮಿಸಿದರೂ ಮಾಹಿತಿ ನೀಡದಿದ್ದರೆ ಮುಂದೆ ಸಮಸ್ಯೆ ಉಂಟಾಗುತ್ತದೆ. ಮಾಹಿತಿ ಮುಚ್ಚಿಟ್ಟಲ್ಲಿ ಮುಂದೆ ಕಾನೂನು ಕ್ರಮ ಕೈಗೊಳ್ಳುವ ಅನಿವಾರ್ಯತೆ ಉಂಟಾಗಲಿದೆ ಎಂದು ಎಚ್ಚರಿಸಿದ್ದಾರೆ.

ಐದು ತಿಂಗಳ ಮಗು 83 ವರ್ಷದ ವೃದ್ಧ ಸೇರಿ ಯಾರೂ ಗಂಭೀರ ಪರಿಸ್ಥಿತಿಯಲ್ಲಿಲ್ಲ. ಇದರಿಂದ ಜಿಲ್ಲೆಯಲ್ಲೇ ಚಿಕಿತ್ಸೆ ನೀಡಲಾಗುವುದು. ರೋಗ ಸಾರ್ವಜನಿಕವಾಗಿ ಹರಡಿಲ್ಲ. ರೋಗಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಗುರುತಿಸಲಾಗಿದೆ. ಜನ ಭಯಪಡುವ ಅವಶ್ಯಕತೆ ಇಲ್ಲ. ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net