

ಚಾಮರಾಜನಗರ: ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು ಆಕ್ಸಿಜನ್ ದುರಂತದ ಬಗ್ಗೆ ತನಿಖೆ ಮಾಡುವಂತೆ ಸೂಚನೆ ನೀಡಿದ್ದು, ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತ ಮತ್ತೆ ಮುನ್ನೆಲೆಗೆ ಬಂದಿದೆ.
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮರು ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಮಾತಿನ ಸಮರವೇ ನಡೆಯುತ್ತಿದೆ. ಕೋವಿಡ್ ಸಂದರ್ಭದಲ್ಲಿ ನಡೆದ ಅಕ್ರಮದ ಬಗ್ಗೆ ರಾಜಕೀಯ ನಾಯಕರು ಪ್ರಸ್ತಾಪಿಸುವ ವೇಳೆ ರಾಜ್ಯ ಸರ್ಕಾರದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ತನಿಖೆ ಮಾಡುವಂತೆ ನ್ಯಾ.ಕುನ್ಹಾ ಕಮಿಟಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ.
ಈ ಮೂಲಕ ಚಾಮರಾಜನಗರದ ಆಕ್ಸಿಜನ್ ದುರಂತ ಮತ್ತೆ ಮುನ್ನೆಲೆಗೆ ಬಂದಂತಾಗಿದೆ. ಈ ಹಿಂದಿನ ವರ್ಷವೂ ಆರೋಗ್ಯ ಸಚಿವರು ಆಕ್ಸಿಜನ್ ದುರಂತದ ಮರುತನಿಖೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು, ಮರು ತನಿಖೆ ಮಾಡುತ್ತೇವೆ ಎಂದು ಪದೇಪದೇ ಹೇಳಿಕೆ ನೀಡಿದ್ದರು. ಆದರೇ ಯಾವುದೇ ಪ್ರಯೋಜನವಾಗಿರಲಿಲ್ಲ. ಆಕ್ಸಿಜನ್ ಸಂತ್ರಸ್ಥರು ಸಾಕಷ್ಟು ಹೋರಾಟಗಳನ್ನು ಮಾಡಿ, ಸೂಕ್ತ ಪರಿಹಾರ ದೊರೆಯದೇ, ಕುಟುಂಬಸ್ಥರಿಗೆ ಸೂಕ್ತ ಉದ್ಯೋಗ ದೊರೆಯದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಕ್ಸಿಜನ್ ದುರಂತದ ಮರುತನಿಖೆ ಕುರಿತು ಸಚಿವರು ನೀಡಿರುವ ಹೇಳಿಕೆ ಚರ್ಚಾಸ್ಪದವಾಗಿದ್ದು, ಆಕ್ಸಿಜನ್ ಸಂತ್ರಸ್ಥರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕೂಡ ದುರಂತವನ್ನು ರಾಜಕೀಯಗೊಳಿಸಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಸಂತ್ರಸ್ಥರಿಗೆ ಖಾಯಂ ನೌಕರಿ ಮತ್ತು ಸೂಕ್ತ ಪರಿಹಾರವನ್ನು ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಏನಿದು ಆಕ್ಸಿಜನ್ ದುರಂತ:
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 2021 ರ ಮೇ.2 ರಂದು ಆಮ್ಲಜನಕ ಕೊರತೆಯಿಂದಾಗಿ 36 ಜನರು ಮೃತಪಟ್ಟಿದ್ದರು. ಕೋವಿಡ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಚಿಕಿತ್ಸೆ ಪಡೆದುಕೊಳ್ಳಲು ಐಸಿಯುನಲ್ಲಿದ್ದ ರೋಗಿಗಳಿಗೆ ಆಕ್ಸಿಜನ್ ಪೂರೈಕೆಯಾಗಬೇಕಿತ್ತು. ಆದರೆ ಮೈಸೂರಿನಿಂದ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗದೇ ರಾತ್ರಿ 10:30ರಿಂದ ಬೆಳಗಿನ ಜಾವ 2:30ರ ವರೆಗೆ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ವೆಂಟಿಲೇಟರ್, ಐಸಿಯು ಹಾಗೂ ಉಸಿರಾಟ ತೊಂದರೆಯಿಂದ ಆಮ್ಲಜನಕದ ನೆರವಿನಲ್ಲಿದ್ದ 36 ಮಂದಿ ರೋಗಿಗಳು ಸಾವನ್ನಪ್ಪಿದ್ದರು. ಈ ದುರಂತದಲ್ಲಿ 24 ಮಂದಿ ಮೃತಪಟ್ಟಿದ್ದಾರೆ ಎಂದು ಅಂದಿನ ಬಿಜೆಪಿ ಸರ್ಕಾರ ಹೇಳಿತ್ತು. ಈ ದುರಂತದ ತನಿಖೆಗಾಗಿ ಹೈಕೋರ್ಟ್ ನೇಮಿಸಿದ್ದ ತನಿಖಾ ಸಮಿತಿ 36 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ಮರು ತನಿಖೆಗೆ ಒತ್ತಾಯಗಳು ಕೇಳಿಬಂದಿತ್ತು.
ಹುಸಿಯಾದ ಭರವಸೆ:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2022 ಸೆಪ್ಟೆಂಬರ್‌ನಲ್ಲಿ ಭಾರತ್ ಜೋಟೋ ಯಾತ್ರೆಗಾಗಿ ಗುಂಡ್ಲುಪೇಟೆಗೆ ಬಂದಾಗ ಆಕ್ಸಿಜನ್ ಸಂತ್ರಸ್ಥರ ಜತೆ ಸಂವಾದ ನಡೆಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರಿ ನೌಕರಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಉದ್ಯೋಗ ವನ್ನು ನೀಡಲಿಲ್ಲ. ಎಸ್ಟಿಪಿಐ ಪಕ್ಷದ ಮುಖಂಡರು ಹಾಗೂ ಸಂತ್ರಸ್ಥರ ನಿರಂತರ ಹೋರಾಟದ ಲವಾಗಿ ಕೆಲವರಿಗೆ ತಾತ್ಕಾಲಿಕ ಉದ್ಯೋಗ ದೊರಕಿತಾದರೂ, ವಿದ್ಯಾರ್ಹತೆಗೆ ತಕ್ಕ ಉದ್ಯೋಗ ನೀಡುವಂತೆ ಕೆಲವರು ಉದ್ಯೋಗವನ್ನು ತಿರಸ್ಕರಿಸಿದ್ದರು. ಹಲವಾರು ಸಂತ್ರಸ್ಥ ಮಹಿಳೆಯರು ಮನೆಯ ಸಂಕಷ್ಟಗಳನ್ನು ಸರಿದೂಗಿಸಲು ಸಿಮ್ಸ್ ಆಸ್ಪತ್ರೆಯಲ್ಲಿ ಡಿ ಗ್ರ್ೂ ನೌಕರಿ ಮಾಡುತ್ತಿದ್ದಾರೆ. ಅಲ್ಲೂ ಸೂಕ್ತ ಸಮಯಕ್ಕೆ ಸಂಬಳವಾಗದೇ ನಿರಂತರವಾಗಿ ನೋವು ಅನುಭವಿಸುತ್ತಿದ್ದಾರೆ. ಈಗಲಾದರೂ ಸರ್ಕಾರ ಮರುತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಸಂತ್ರಸ್ಥರ ಕುಟುಂಬಗಳಿಗೆ ಖಾಯಂ ನೌಕರಿ ಮತ್ತು ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಸಂತ್ರಸ್ಥರು ಆಗ್ರಹಿಸಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಆಕ್ಸಿಜನ್ ದುರಂತದ ಮರು ತನಿಖೆಯನ್ನು ಮಾಡಿಸುತ್ತೇವೆ ಎಂದು ಹೇಳಿ ಈಗಾಗಲೇ ಒಂದು ವರ್ಷ ಕಳೆದಿದೆ. ಅದಾಗ್ಯೂ ಈಗ ತನಿಖೆ ಪ್ರಾರಂಭ ಮಾಡಿ, ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸೂಕ್ತ ನ್ಯಾಯ ಕೊಡಿಸುವುದು ಯಾವಾಗ? ಈ ವಿಚಾರದಲ್ಲಿ ರಾಜಕೀಯ ದೊಂಬರಾಟ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಏನಾದರೂ ಸಂತ್ರಸ್ತ ಕುಟುಂಬದ ಮೇಲೆ ಅನುಕಂಪ ಇರುವುದೇ ಆದರೆ, ಮೊದಲು ಸೂಕ್ತ ಉದ್ಯೋಗ ಕೊಡಿಸಿ, ಆನಂತರ ಒಂದು ನಿರ್ದಿಷ್ಟ ಅವಧಿಯ ಒಳಗೆ ತನಿಖೆಯನ್ನು ಪೂರ್ಣಗೊಳಿಸಿ, ತಪ್ಪಿತಸ್ಥ ಅಧಿಕಾರಿಗಳಿಗೆ ಸೂಕ್ತ ಕಾನೂನು ಕ್ರಮ ಜರುಗಿಸಲಿ.
ಮಹೇಶ್, ಎಸ್ಡಿಪಿಐ ಸದಸ್ಯ, ಚಾಮರಾಜನಗರ
ರಾಜ್ಯ ಸರ್ಕಾರಕ್ಕೆ ಆಕ್ಸಿಜನ್ ಸಂತ್ರಸ್ಥರ ಮೇಲೆ ಚೂರು ಕರುಣೆ ಇದ್ದರೆ, ಭರವಸೆಯಂತೆ ನಮಗೆ ಖಾಯಂ ನೌಕರಿಯನ್ನು ನೀಡಬೇಕು. ಸೂಕ್ತ ಪರಿಹಾರವನ್ನು ವಿತರಣೆ ಮಾಡಬೇಕು. ಆರೋಗ್ಯ ಸಚಿವರು ಹೇಳಿಕೆ ನೀಡಿದಂತೆ ಆದಷ್ಟು ಬೇಗ ಆಕ್ಸಿಜನ್ ದುರಂತ ಮರುತನಿಖೆಯಾಗಿ, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು.
ಸವಿತಾ ಲಕ್ಕೂರು, ಸಂತ್ರಸ್ಥೆ, ಚಾಮರಾಜನಗರ