

ಆಯನೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಡಬಲ್ ಎಂಜಿನ್ ಸರ್ಕಾರ ರಚನೆಯಾಗಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಹೇಳಿದರು.
ಆಯನೂರಿನ ವಿನಾಯಕ ವೃತ್ತದಲ್ಲಿ ಶುಕ್ರವಾರ ಬಿಜೆಪಿ ಪ್ರಗತಿರಥ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದ 224 ಕ್ಷೇತ್ರಗಳಲ್ಲಿ ಯಾತ್ರೆಗೆ ಚಾಲನೆ ನೀಡಲಾಗಿದೆ. ಪ್ರತಿ ಗ್ರಾಮದ ಪ್ರತಿ ಮನೆಗಳಿಗೆ ತಲುಪುವ ಕೆಲಸ ಆಗಲಿದೆ. ಈ ಮೂಲಕ ಪ್ರತಿಯೊಬ್ಬ ಮತದಾರ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿ ರಥಯಾತ್ರೆ ಆಗಲಿದೆ ಎಂದರು.
ಯಾವುದೇ ವಿಷಯ ಜನರಿಗೆ ತಲುಪಿಸುವಲ್ಲಿ ಆಡಿಯೋ ಹಾಗೂ ವಿಡಿಯೋ ಮಾಧ್ಯಮ ಬಹುಮುಖ್ಯ ಪಾತ್ರ ವಹಿಸುತ್ತದೆ. ಆಡಿಯೋ ಹಾಗೂ ವಿಡಿಯೋ ಮಾಧ್ಯಮದ ಮೂಲಕ ಜನರಿಗೆ ವಿಷಯ ತಿಳಿಸಲು ಹೊರಟಾಗ ಶೇ.90 ಜನರ ಮಿದುಳಿಗೆ ತಲುಪುತ್ತದೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳು ಹಾಗೂ ಐತಿಹಾಸಿಕ ನಿರ್ಣಯಗಳು, ತೀರ್ಮಾನಗಳು ಪ್ರತಿ ಗ್ರಾಮದ ಮನೆಗಳಿಗೆ ತಲುಪಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ರಥ ಯಾತ್ರೆಯಲ್ಲಿ ಸಲಹಾ ಪೆಟ್ಟಿಗೆ ಇಡಲಾಗಿದೆ. ಪಕ್ಷದಿಂದ ಪ್ರತಿ 5 ವರ್ಷಕ್ಕೊಮ್ಮೆ ಪ್ರಣಾಳಿಕೆ ಮಾಡುತ್ತೇವೆ. ವಾಸ್ತವವಾಗಿ ಜನರ ಸಮಸ್ಯೆಗಳು ಏನಿವೆ?, ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾಮಟ್ಟದ ಸಮಸ್ಯೆಗಳೇ?, ವಿಧಾನಸಭಾ ಕ್ಷೇತ್ರದ ಮಟ್ಟದ ಸಮಸ್ಯೆಗಳೇ?, ರಾಜ್ಯ ಸರ್ಕಾರದ ಮಟ್ಟದಲ್ಲಿ ನಿರ್ಣಯ ತೆಗೆದುಕೊಳ್ಳಬಹುದಾದ ಸಮಸ್ಯೆಗಳ ಜತೆಗೆ ಕೇಂದ್ರ ಸರ್ಕಾರದಿಂದ ಇದುವರೆಗೂ ಬಗೆಹರಿಯದೆ ಇರುವ ಸಮಸ್ಯೆಗಳು ಇದ್ದರೂ ಜನರು ಅವುಗಳನ್ನು ಬರೆದು ಬಾಕ್ಸ್‍ನಲ್ಲಿ ಹಾಕಬಹುದು. ಇದಕ್ಕಾಗಿ ಒಂದು ಸಮಿತಿ ರಚನೆ ಮಾಡಲಾಗಿದೆ. ಆ ಸಮಿತಿ ಎಲ್ಲವನ್ನು ಕ್ರೋಡೀಕರಿಸುತ್ತದೆ. ಸಮಸ್ಯೆಗಳಿಗೆ ತಕ್ಕಂತೆ ಅದನ್ನು ವರ್ಗೀಕರಿಸಿ ಕೇಂದ್ರ, ರಾಜ್ಯ, ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಕಳುಹಿಸಲಾಗುವುದು ಎಂದರು.