

ಗೋಕಾಕ: ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ ಗೋಕಾಕ ಹಾಗೂ ಚಿಕ್ಕೋಡಿ ಜಿಲ್ಲೆಗಳನ್ನಾಗಿ ಮಾಡಬೇಕೆಂಬ ಕೂಗು ದಶಕಗಳಿಂದಲೂ ಕೇಳಿ ಬರುತ್ತಿದೆ. ಅನೇಕ ಹೋರಾಟಗಳೂ ನಡೆದಿವೆ. ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಯಿಂದ ಜಿಲ್ಲಾ ವಿಭಜನೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ಸಚಿವರು ಹೇಳಿದ್ದೇನು?: ಬೆಳಗಾವಿ ನಗರದಲ್ಲಿ ಆ.15ರಂದು 77ನೇ ಸ್ವಾತಂತ್ರೊೃೀತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ‘ಬೆಳಗಾವಿ ಜಿಲ್ಲಾ ವಿಭಜನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚೆಯಾಗಿದೆ’ ಎಂದು ಹೇಳಿದ್ದೇ ತಡ ಜಿಲ್ಲಾ ವಿಭಜನೆ
ವಿಷಯ ಮತ್ತೆ ಗರಿಗೆದರಿದೆ. ಗೋಕಾಕ ಹಾಗೂ ಚಿಕ್ಕೋಡಿ ನಾಗರಿಕರು, ಹೋರಾಟಗಾರರಿಗೆ ತೀವ್ರ ಖುಷಿ ತಂದಿದೆ.
ಭರವಸೆ ನೀಡಿದ್ದರು ಸತೀಶ: ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸತೀಶ ಜಾರಕಿಹೊಳಿ ಅವರು ಜವಳಿ ಸಚಿವರಿದ್ದಾಗ ಜಿಲ್ಲಾ ರಚನೆ ಹೋರಾಟ ನಡೆದಿತ್ತು. ಅಂದು ಸರ್ಕಾರದ ಒಂದು ಭಾಗವಾಗಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಬೆಂಬಲ ನೀಡುವುದಾಗಿ ಘೋಷಿಸಿದ್ದರು.
ಜಿಲ್ಲಾ ಹೋರಾಟದಲ್ಲಿ ಮೊದಲಿನಿಂದಲೂ ವಿವಿಧ ಪಕ್ಷಗಳ ಮುಖಂಡರು ಸ್ವಪ್ರತಿಷ್ಠೆ ಮರೆತು ಭಾಗವಹಿಸುತ್ತಲೇ ಬಂದಿದ್ದಾರೆ. ಆಗ ಒಬ್ಬ ಮುಖಂಡರು ಸಚಿವ ಸತೀಶರನ್ನು ಪೇಚಿಗೆ ಸಿಲುಕಿಸಲು, ಗೋಕಾಕ ಜಿಲ್ಲೆಯಾಗಿ ಗೆಜೆಟ್ ನೋಟಿಫಿಕೇಷನ್ ಆಗಿ ತಡೆಹಿಡಿಯಲಾಗಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸಿದ್ದರಾಮಯ್ಯನವರ ಸಂಪುಟದಲ್ಲಿ ಪ್ರಭಾವಿಗಳಿದ್ದು, ಅವರು ಮನಸ್ಸು ಮಾಡಿದರೆ ಸಂಜೆಯೊಳಗೆ ಗೋಕಾಕ ಜಿಲ್ಲೆಯಾಗುತ್ತದೆ. ಇಲ್ಲವಾದರೆ ಅವರು ರಾಜೀನಾಮೆಗೆ ಮುಂದಾದರೆ ಸರ್ಕಾರವೇ ತೊಂದರೆಯಲ್ಲಿ ಬರುತ್ತದೆ ಎಂದು ಭಾಷಣ ಬಿಗಿದಿದ್ದರು.
ಜಿಲ್ಲಾ ಹೋರಾಟ ದಾರಿ ತಪ್ಪುತ್ತಿರುವುದನ್ನು ಗ್ರಹಿಸಿದ ಸಚಿವ ಸತೀಶ ತಮ್ಮ ಮಾತಿನ ಚಾಟಿ ಮೂಲಕ ವಿರೋಧಿ ಗುಂಪಿಗೆ ಬಿಸಿ ಮುಟ್ಟಿಸಿದ್ದರು. ಗೋಕಾಕ ಹೆಸರು ದಿಲ್ಲಿಯಲ್ಲಿ ವಿಜಂಭಿಸಬೇಕು. ಜಿಲ್ಲೆಯಿಲ್ಲದೆ ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತಿರುವ ನನಗೆ ಗೋಕಾಕ ಜಿಲ್ಲೆ ಆದರೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ನಡೆದಿದೆ ಎಂದು ಸತೀಶ ಜಾರಕಿಹೊಳಿ ಹೇಳಿದ್ದರು.
ಕಳೆದ ಬಾರಿ ಸಿದ್ದರಾಮಯ್ಯ ಸಂಪುಟದಲ್ಲಿ ಜವಳಿ ಸಚಿವರಾಗಿದ್ದ ಸತೀಶ ಜಾರಕಿಹೊಳಿ, ಈಗ ಮತ್ತೆ ಲೋಕೋಪಯೋಗಿ ಸಚಿವರು, ಜಿಲ್ಲಾ ಉಸ್ತುವಾರಿಗಳಾಗಿದ್ದಾರೆ. ಅಪೂರ್ಣಗಿರುವ ಗೋಕಾಕ ಜಿಲ್ಲಾ ಕನಸು ಜೆ.ಎಚ್.ಪಟೇಲ ಮುಖ್ಯಮಂತ್ರಿಯಾಗಿದ್ದಾಗ ಗೆಜೆಟ್ ಆಗಿ ಸ್ಥಗಿತವಾಗಿತ್ತು. ಈಗ ಸಚಿವ ಸತೀಶ ಅವರ ಆಸಕ್ತಿ ನೋಡಿದರೆ ಜಿಲ್ಲಾ ವಿಭಜನೆ ಆಗಿ ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲೆ ಆಗುವುದು ಪಕ್ಕಾ ಆಗುವಂತೆ ಕಾಣುತ್ತಿದೆ.