ಮತ್ತೆ ಕಮಲ ಅರಳುವ ವಾತಾವರಣ

HDMC edit
Published on

ಹುಬ್ಬಳ್ಳಿ: ಧಾರವಾಡ ಮತ್ತು ಪಶ್ಚಿಮ ವಿಧಾನಸಭೆ ಕ್ಷೇತ್ರಗಳಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಾಲಿಗೆ ವರವಾಗಿ ಪರಿಣಮಿಸಲಿವೆ.

ಧಾರವಾಡ ವಿಧಾನಸಭೆ ಕ್ಷೇತ್ರದ 1ರಿಂದ 9 ವಾರ್ಡ್ ಮತ್ತು ಪಶ್ಚಿಮ ಕ್ಷೇತ್ರದ 10ರಿಂದ 34 ವಾರ್ಡ್​ಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಅದರಲ್ಲೂ, ಕಳೆದ 2 ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೋಟ್ಯಂತರ ರೂ.ಗಳ ಅನುದಾನ ಈ ಎರಡೂ ಕ್ಷೇತ್ರಗಳಿಗೆ ಹರಿದುಬಂದಿದೆ. ಧಾರವಾಡ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುವ ಶಾಸಕ ಅಮೃತ ದೇಸಾಯಿ ಹಾಗೂ ಹುಬ್ಬಳ್ಳಿ- ಧಾರವಾಡ ಪಶ್ಚಿಮ ವಿಧಾನಸಭೆ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ಸಾಕಷ್ಟು ಮುತುವರ್ಜಿ ವಹಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತ ಬಂದಿದ್ದಾರೆ. ಜನರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದಾರೆ. ಈ ಸಂಗತಿಗಳು ಪಾಲಿಕೆ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಾಕಷ್ಟು ಕೊಡುಗೆ ನೀಡುವುದು ನಿಶ್ಚಿತವಾಗಿದೆ.

2 ವರ್ಷಗಳ ಹಿಂದೆ ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಇದ್ದಾಗ, ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇತ್ತು. ಆ ಸಮಯದಲ್ಲಿ ಬಾಕಿ ಪಿಂಚಣಿ ಹಣ ಬಿಡುಗಡೆ ಸೇರಿ ವಿವಿಧ ಅನುದಾನ ಬಿಡುಗಡೆಗೆ ಕಾಂಗ್ರೆಸ್ ಸರ್ಕಾರ ಸಾಕಷ್ಟು ಸತಾಯಿಸಿತ್ತು. ಹೀಗಾಗಿ, ಮಹಾನಗರ ಪಾಲಿಕೆ ತನ್ನ ಸಂಪನ್ಮೂಲ ವ್ಯಾಪ್ತಿಯಲ್ಲಿಯೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿತ್ತು.

65 ಕೋಟಿಗೂ ಹೆಚ್ಚು ಕಾಮಗಾರಿ:

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಧಾರವಾಡ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪಾಲಿಕೆಯ 1ರಿಂದ 9 ವಾರ್ಡ್​ಗಳಲ್ಲಿ 65 ಕೋಟಿ ರೂ.ಗೂ ಹೆಚ್ಚು ವೆಚ್ಚದ ಕಾಮಗಾರಿಗಳು ನಡೆದಿವೆ.

ಅಮೃತ ಯೋಜನೆ ಅಡಿ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದೆ. ಮದಿಹಾಳದಲ್ಲಿ ನೀರು ಶುದ್ಧೀಕರಣ ಘಟಕ ನಿರ್ವಿುಸಲಾಗಿದೆ. ನಿರಂತರ ನೀರು ಪೂರೈಕೆ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಪ್ರಾರಂಭಗೊಳ್ಳಬೇಕಿದೆ. ವಾರ್ಡ್​ನಲ್ಲಿರುವ ಉದ್ಯಾನಗಳಲ್ಲಿ ವಾಕಿಂಗ್ ಪಾಥ್ ನಿರ್ವಿುಸಲಾಗಿದ್ದು, ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಎಲ್ಲ ವಾರ್ಡ್​ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಪ್ರತಿ ಮನೆಯಿಂದ ನಿತ್ಯ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ.

ಪಶ್ಚಿಮ ವಿಧಾನಸಭೆ ಕ್ಷೇತ್ರದಲ್ಲಿ ಐಐಟಿ, ಐಐಐಟಿ, ಹೈಯರ್ ಎಜುಕೇಶನ್ ಅಕಾಡೆಮಿ, ಪೊಲೀಸ್ ಟ್ರೇನಿಂಗ್ ಸ್ಕೂಲ್ ನಿರ್ವಣಗೊಂಡಿವೆ. ಪ್ರಧಾನಿಯವರ ಸರ್ವರಿಗೂ ಸೂರು ಪರಿಕಲ್ಪನೆಯಡಿ ಕಳೆದ ಅವಧಿಯಲ್ಲಿ 2,500 ಸಾವಿರ ಮನೆಗಳನ್ನು ನಿರ್ವಿುಸಲಾಗಿದೆ. ಈ ಬಾರಿಯೂ ಧಾರವಾಡದ ಸಾರಸ್ವತಪುರ, ರಜತಗಿರಿ, ನವಲೂರು, ಅಮರಗೋಳ, ಹುಬ್ಬಳ್ಳಿಯ ಕೃಷ್ಣ ಕಾಲನಿಯಲ್ಲಿ 6 ಸಾವಿರ ಮನೆಗಳಿರುವ ಅಪಾರ್ಟ್​ವೆುಂಟ್​ಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹುಬ್ಬಳ್ಳಿ - ಧಾರವಾಡದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸ್ಪೋರ್ಟ್ಸ್ ಕಾಂಪ್ಲೆಕ್ಸ್​ಗಳನ್ನು ನಿರ್ವಿುಸಲಾಗುತ್ತಿದೆ. 3.50 ಕೋಟಿ ರೂ. ವೆಚ್ಚದಲ್ಲಿ ಧಾರವಾಡದ ಕೆಲಗೇರಿ ಕೆರೆ ಅಭಿವೃದ್ಧಿಗೊಂಡಿದ್ದು, ಇನ್ನೂ 12 ಕೋಟಿ ರೂ. ಸಂಪೂರ್ಣ ಅಭಿವೃದ್ಧಿಗೆ ಬೇಕಾಗಿದೆ. 20 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿಯ ತೋಳನಕೆರೆ ಅಭಿವೃದ್ಧಿಗೊಳಿಸಲಾಗುತ್ತಿದೆ.

ಅಮೃತ ಯೋಜನೆಯಡಿ ಧಾರವಾಡದ ಅರ್ಧ ಭಾಗದಲ್ಲಿ ಒಳಚರಂಡಿ ನಿರ್ವಿುಸಲಾಗಿದೆ. ನಿರಂತರ ನೀರು ಪೂರೈಕೆಯನ್ನು ವಿವಿಧ ವಾರ್ಡ್​ಗಳಿಗೆ ವಿಸ್ತರಿಸಬೇಕಿದೆ. ಮಳೆಗಾಲದ ನಂತರ 100 ಕೋಟಿ ರೂ. ವೆಚ್ಚದಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ ನಡೆಯಲಿದೆ. ಬಾಕಿ ಉಳಿದಿರುವ ಸಿಮೆಂಟ್ ರಸ್ತೆಗಳ ಕಾಮಗಾರಿಯೂ ಶೀಘ್ರ ಪ್ರಾರಂಭಗೊಳ್ಳಲಿದೆ.

ಈ ಎರಡೂ ವಿಧಾನಸಭೆ ಕ್ಷೇತ್ರಗಳ ಬಿಜೆಪಿ ಶಾಸಕರು ಹಾಗೂ ಈ ಹಿಂದಿನ ಬಿಜೆಪಿ ಪಾಲಿಕೆ ಸದಸ್ಯರು ಕೈಜೋಡಿಸಿ ಸಾಕಷ್ಟು ಜನಪರ ಕೆಲಸಗಳನ್ನು ಕೈಗೊಂಡಿರುವುದರಿಂದ ಈ ಭಾಗದಲ್ಲಿ ಈ ಪಕ್ಷದ ಪರವಾದ ಅಲೆ ಸಹಜವಾಗಿ ಬೀಸಿದೆ.

ಎಲ್ಲ 34 ಕ್ಷೇತ್ರಗಳಲ್ಲಿ ಕಣಕ್ಕೆ

ಧಾರವಾಡದ 9 ವಾರ್ಡ್​ಗಳಲ್ಲಿ ಬಿಜೆಪಿಯಿಂದ ನಾಲ್ವರು ಮಹಿಳೆಯರು ಹಾಗೂ ಐವರು ಪುರುಷ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಶ್ಚಿಮ ಕ್ಷೇತ್ರದ 25 ವಾರ್ಡ್​ಗಳಲ್ಲಿ 9 ಮಹಿಳೆಯರು ಹಾಗೂ 16 ಪುರುಷ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಧಾರವಾಡದ 9 ವಾರ್ಡ್​ಗಳ ಪೈಕಿ 5 ರಿಂದ 7 ವಾರ್ಡ್​ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ಇದೆ. ಕ್ಷೇತ್ರದಾದ್ಯಂತ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಮತದಾರರು ಮನ್ನಣೆ ನೀಡಲಿದ್ದಾರೆ.- ಅಮೃತ ದೇಸಾಯಿ, ಧಾರವಾಡ ಶಾಸಕ

ಹು-ಧಾ ಪಶ್ಚಿಮ ಕ್ಷೇತ್ರದ 25 ವಾರ್ಡ್​ಗಳ ಪೈಕಿ 18 ರಿಂದ 20 ವಾರ್ಡ್​ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ನಿರೀಕ್ಷೆ ಇದೆ. ಬಾಕಿ ಉಳಿದಿರುವ ಸಿಸಿ ರಸ್ತೆಗಳನ್ನು ಪೂರ್ಣಗೊಳಿಸುವ ಬಗ್ಗೆ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರೊಂದಿಗೆ ರ್ಚಚಿಸಿದ್ದೇನೆ.- ಅರವಿಂದ ಬೆಲ್ಲದ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net