ಮತ್ತೆ ಕಂಡ ‘ಕತ್ತೆ ಕುರುಬ’

24Rajesh2a
Published on

ಚಾಮರಾಜನಗರ: ಅಸಂಖ್ಯಾತ ಜೀವರಾಶಿಗಳ ಬೀಡಾಗಿರುವ ದೇಶದ ಪ್ರಸಿದ್ಧ ಹುಲಿ ಕಾಡಿನಲ್ಲಿ ಅಪರೂಪದ ಪ್ರಾಣಿ ತನ್ನ ಇರುವಿಕೆಯನ್ನು ಮತ್ತೆ ಮತ್ತೆ ಖಚಿತ ಪಡಿಸುತ್ತಿದೆ.

ರಾಜ್ಯದಲ್ಲಿ ಅಧಿಕ ಹುಲಿಗಳು, ಆನೆಗಳಿರುವ ಕಾಡು ಮತ್ತು ಇತರೆ ಪ್ರಾಣಿಗಳ ನೆಚ್ಚಿನ ನೆಲೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಕತ್ತೆ ಕಿರುಬ(ಹೈನಾ) ಮತ್ತೊಮ್ಮೆ ಕಾಣಿಸಿಕೊಂಡಿದೆ. ಬಂಡೀಪುರ ವ್ಯಾಘ್ರಗಳ ಆಗರವಾಗಿ ಖ್ಯಾತಿ ಪಡೆದಿದೆ. ಗಜಪಡೆಗಳ ಬಿಡಾರವಾಗಿ ಕೀರ್ತಿ ಗಳಿಸಿದೆ. ಚಿರತೆ, ಕರಡಿ, ಕಾಡೆಮ್ಮೆ, ಜಿಂಕೆ, ಕಡವೆ, ವಿವಿಧ ಪ್ರಬೇಧದ ಪಕ್ಷಿಗಳು, ಬಗೆ ಬಗೆಯ ಸಸ್ಯ, ಮರಗಳಿರುವ ಬಯಲು ಖಜಾನೆ ಬಂಡೀಪುರ. ಹಾಗೆಯೇ ಅಳಿವನಂಚಿನಲ್ಲಿರುವ ಜೀವಿಗಳಿಗೂ ತನ್ನೊಡಲಿನಲ್ಲಿ ಜಾಗ ಕೊಟ್ಟು ಕಾಪಾಡುತ್ತಿದೆ. ಇಂತಹ ಪ್ರಾಣಿಗಳಲ್ಲಿ ಕನ್ನಡದಲ್ಲಿ ಕತ್ತೆ ಕಿರುಬ ಕೂಡ ಒಂದು. ಇದು ಹಲವು ದಶಕಗಳ ಹಿಂದೆ ಬಂಡೀಪುರದಲ್ಲಿ ತನ್ನ ಇರುವಿಕೆಯಲ್ಲಿ ಖಚಿತ ಪಡಿಸಿ ಬಳಿಕ ಕಣ್ಮರೆಯಾಗಿತ್ತು. ಇದೀಗ ಮತ್ತೆ ಮತ್ತೆ ತನ್ನ ಅಸ್ವಿತ್ವವನ್ನು ತೋರಿಸುತ್ತಿದೆ. ಇದು ಕೆಲವು ದಿನಗಳ ಹಿಂದಷ್ಟೇ ಬಂಡೀಪುರದ ಕಾಡಂಚಿನ ಗ್ರಾಮವಾಗಿರುವ ಎಲಚೆಟ್ಟಿಯಲ್ಲಿ ಕತ್ತೆ ಕಿರುಬ ಕಾಣಿಸಿಕೊಂಡಿದೆ. ಗ್ರಾಮದ ಕೆರೆ ಬಳಿ ಕತ್ತೆ ಕಿರುಬ ಓಡಾಡುತ್ತಿದ್ದ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪರಿಸರ ಪ್ರೇಮಿಗಳಿಂದ ಅಪಾರ ಮೆಚ್ಚಿಗೆಗೆ ಪಾತ್ರವಾಗಿದೆ.

ಅಪರೂಪಕ್ಕಷ್ಟೇ ಸಿಕ್ಕಿರುವ ದರ್ಶನ: ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಸಾರಿಗೆ ತೆರಳುವ ಪ್ರವಾಸಿಗರಿಗೆ ಅನೇಕ ಪ್ರಾಣಿ-ಪಕ್ಷಿಗಳ ದರ್ಶನವಾಗಿದೆ. ಆದರೆ ಕತ್ತೆ ಕಿರುಬವನ್ನು ನೋಡಿರಲು ಸಾಧ್ಯವಾಗಿಲ್ಲ. ಕಡಿಮೆ ಸಂಖ್ಯೆಯಲ್ಲಿರುವ ಕಾರಣ ಇವುಗಳ ದರ್ಶನ ವಿರಳವಾಗಿದೆ. ಸಾಮಾನ್ಯವಾಗಿ ಕತ್ತೆ ಕಿರುಬಗಳು ಕಾಣಿಸಿಕೊಳ್ಳದೆ ಇದ್ದರೂ ಅಪರೂಪಕ್ಕೆ ಕಂಡುಬರುತ್ತಿವೆ.

1980ರಲ್ಲಿ ವನ್ಯಜೀವಿ ತಜ್ಞರಾದ ಉಲ್ಲಾಸ್ ಕಾಂರತ್ ಬಂಡೀಪುರದಲ್ಲಿ ಕತ್ತೆ ಕಿರುಬ ಇರುವುದನ್ನು ಪತ್ತೆ ಮಾಡಿದ್ದರು. 2012ರಲ್ಲಿ ಎಲಚಟ್ಟಿ ಬೀಟ್‌ನಲ್ಲಿ ಕತ್ತೆ ಕಿರುಬಗಳು ಓಡಾಡುತ್ತಿದ್ದ ಪೋಟೋ ಸೆರೆ ಹಿಡಿಯಲಾಗಿತ್ತು. ನಂತರ ದಿನಗಳಲ್ಲಿ ಕಾಣಿಸಿಕೊಳ್ಳದೆ ತನ್ನ ಇರುವಿಕೆಯ ಅನುಮಾನ ಹುಟ್ಟಿಸಿತ್ತು. 2024ರ ಮೇನಲ್ಲಿ ಕುಂದಕೆರೆ ವಲಯದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಕತ್ತೆ ಕುರುಬ ಕಂಡಿತ್ತು. ಮಂಗಲ ಗ್ರಾಮ, ಜಕ್ಕಹಳ್ಳಿ ಬಳಿಯ ಮಹದೇಶ್ವರ ಕೆರೆ ಬಳಿ ರೈತರಿಗೂ ಕಾಣಿಸಿತ್ತು. ಅರಣ್ಯ ಇಲಾಖೆಯಿಂದ ಕೆಲವು ಸ್ಥಳದಲ್ಲಿ ಕ್ಯಾಮರಾ ಅಳವಡಿಸಲಾಗಿ ಕತ್ತೆ ಕಿರುಬಗಳ ಪೋಟೋ ಸೆರೆ ಹಿಡಿಯಲಾಗಿತ್ತು. ಇದಾದ ಬಳಿಕ ಈಗ ಎಲಚೆಟ್ಟಿ ಗ್ರಾಮದ ಬಳಿ ಓಡಾಡುತ್ತಿದ್ದ ದೃಶ್ಯವನ್ನು ಗ್ರಾಮಸ್ಥರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಹೀಗೆ ಕತ್ತೆ ಕಿರುಬ ಬಂಡೀಪುರ ಕಾಡಿನಲ್ಲಿ ತನ್ನ ಇರುವಿಕೆಯನ್ನು ಮತ್ತೆ ಮತ್ತೆ ಖಚಿತ ಪಡಿಸುತ್ತಲೇ ಇದೆ.

ಕತ್ತೆ ಕಿರುಬ ಸಂರಕ್ಷಿತ ಅರಣ್ಯ ಪ್ರದೇಶ: ದೇಶದ ಕೆಲವೇ ರಾಜ್ಯಗಳಲ್ಲಿ ಮಾತ್ರ ಕತ್ತೆ ಕಿರುಬ ಸಂರಕ್ಷಿತ ಅರಣ್ಯ ಪ್ರದೇಶಗಳಿವೆ. ಕರ್ನಾಟಕದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಕತ್ತೆ ಕಿರುಬಗಳಿವೆ. ಅಳಿವಿನಂಚಿನಲ್ಲಿರುವ ಕತ್ತೆ ಕಿರುಬಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿನ್ನೆಯೆಲ್ಲಿ ಬೆಳಗಾವಿಯಲ್ಲಿ ಕತ್ತೆ ಕಿರುಬ ಸಂರಕ್ಷಿತ ಪ್ರದೇಶ ೋಷಣೆ ಮಾಡಲು ಅರಣ್ಯ ಇಲಾಖೆ ಪ್ರಸ್ತಾವನೆ ಸಿದ್ಧ ಪಡಿಸಿಕೊಳ್ಳುತ್ತಿದೆ. ಇದಕ್ಕೆ ಸರ್ಕಾರದಿಂದ ಒಪ್ಪಿಗೆ ಸಿಕ್ಕರೆ ಕರ್ನಾಟಕದ ಮೊದಲ ಕತ್ತೆ ಕಿರುಬ ಸಂರಕ್ಷಿತ ಅರಣ್ಯ ಪ್ರದೇಶ ಬೆಳಗಾವಿಯಲ್ಲಿ ಸ್ಥಾಪನೆಯಾಗಲಿದೆ.

ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕತ್ತೆ ಕಿರುಬಗಳು ಇವೆ. ಇತ್ತೀಚೆಗೆ ಎಲಚೆಟ್ಟಿ ಬಳಿ ಕಾಣಿಸಿಕೊಂಡಿದೆ. ನವೀನ್, ಬಂಡೀಪುರ ಉಪ ವಿಭಾಗದ ಎಸಿಎ್ ಎಲೆಚೆಟ್ಟಿ ಬಳಿ ಐದಾರು ದಿನಗಳ ಹಿಂದೆ ಕತ್ತೆ ಕಿರುಬ ಕಂಡಿತ್ತು. ನಾನು ಇವುಗಳನ್ನು ಮೂರ‌್ನಾಲ್ಕು ಬಾರಿ ನೋಡಿದ್ದೇನೆ. ಎರಡು ವರ್ಷಗಳ ಹಿಂದೆ ರಾತ್ರಿ ವೇಳೆ ರಸ್ತೆ ರಸ್ತೆ ಬಳಿ ಹೋಗುವುದನ್ನು ಕಂಡಿದ್ದೆ. ಮನುಷ್ಯರನ್ನು ಕಂಡ ಕೂಡಲೇ ಸ್ಥಳದಿಂದ ಓಡಿ ಹೋಗುತ್ತವೆ. ಇಂತಹ ಅಪರೂಪದ ಪ್ರಾಣಿಗಳು ಬಂಡೀಪುರ ಕಾಡಿನಲ್ಲಿ ಇರುವುದು ಹೆಮ್ಮೆಯ ವಿಚಾರ. ನಾಗೇಶ್, ಪ್ರಗತಿ ಪರ ರೈತ, ಮಂಗಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net