

ಕಾರವಾರ: ಇಲ್ಲಿ ಕ್ರಿಮ್್ಸ ಕರೊನಾ ವಾರ್ಡ್ನಿಂದ ಮಂಗಳವಾರ ಐವರನ್ನು ಬಿಡುಗಡೆ ಮಾಡಲಾಗಿದೆ.
ಭಟ್ಕಳ ಮೂಲದ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಒಬ್ಬ 17 ವರ್ಷದ ಯುವತಿಯನ್ನು ಬಿಡುಗಡೆ ಮಾಡಲಾಗಿದೆ. ಎಲ್ಲರಿಗೂ ಹೂವು, ಪ್ರಮಾಣಪತ್ರ ನೀಡಿ, ಚಪ್ಪಾಳೆ ತಟ್ಟಿ ಆಂಬುಲೆನ್ಸ್ನಲ್ಲಿ ಭಟ್ಕಳಕ್ಕೆ ಬೀಳ್ಕೊಡಲಾಯಿತು.
ಕರೊನಾ ಸೋಂಕಿನಿಂದಾಗಿ ತಮ್ಮ ಪುಟ್ಟ ಮಗುವನ್ನು ಬಿಟ್ಟು ಆಸ್ಪತ್ರೆ ಸೇರಿದ್ದರು. ಮಂಗಳವಾರ ಅವರು ಬಿಡುಗಡೆಯಾಗುತ್ತಿದ್ದಂತೆ ಮನೆಯವರು ಮಗುವನ್ನು ತಾಯಿಯ ಕೈಗೆ ಒಪ್ಪಿಸಿದರು. ಎರಡು ವಾರದಿಂದ ಪುಟ್ಟ ಮಗು ಬಿಟ್ಟಿದ್ದ ತಾಯಿ ಕಣ್ಣೀರು ಹಾಕಿ ಮಗುವನ್ನು ಮುದ್ದಾಡಿದರು.
ಕ್ರಿಮ್್ಸ ನಿರ್ದೇಶಕ ಡಾ.ಗಜಾನನ ನಾಯಕ, ಡಾ. ಶಿವಾನಂದ ಕುಡ್ತಲಕರ್ ಹಾಗೂ ಇತರ ಸಿಬ್ಬಂದಿ ಈ ಸಂದರ್ಭದಲ್ಲಿದ್ದರು. ಮಂಗಳವಾರ ಜಿಲ್ಲೆಯಲ್ಲಿ ಯಾವುದೇ ಹೊಸ ಕರೊನಾ ಪ್ರಕರಣ ದಾಖಲಾಗಿಲ್ಲ. ಇದುವರೆಗೆ 69 ಜನರಲ್ಲಿ ರೋಗ ಕಾಣಿಸಿಕೊಂಡಿದ್ದು, 40 ಜನರನ್ನು ಬಿಡುಗಡೆ ಮಾಡಲಾಗಿದೆ. 29 ಸಕ್ರಿಯ ಪ್ರಕರಣಗಳಿವೆ.
ಸಂಕಷ್ಟದಲ್ಲಿ ನೇಪಾಳ ಪ್ರಜೆಗಳು
ಕಾರವಾರ: ಕರೊನಾ ಲಾಕ್ಡೌನ್ನಿಂದಾಗಿ ನಗರದಲ್ಲಿರುವ ನೇಪಾಳ ದೇಶದ ಪ್ರಜೆಗಳು ತೊಂದರೆಗೆ ಈಡಾಗಿದ್ದಾರೆ.
ಇಲ್ಲಿನ ವಿವಿಧ ಹೋಟೆಲ್ಗಳಲ್ಲಿ ಹಾಗೂ ಕೆಲವೆಡೆ ಘೂರ್ಕಾ(ರಾತ್ರಿ ಕಾವಲುಗಾರರು)ಗಳಾಗಿ ದುಡಿಯುತ್ತಿರುವ ಅಂದಾಜು 41 ರಷ್ಟು ನೇಪಾಳಿ ಕುಟುಂಬಗಳಿವೆ. ಕರೊನಾ ಲಾಕ್ಡೌನ್ನಿಂದ ಅವರಿಗೆ ಉದ್ಯೋಗವಿಲ್ಲದೆ ಸಮಸ್ಯೆಯಾಗಿದೆ. ನವದೆಹಲಿಗೆ ತಲುಪಿದರೆ ಅಲ್ಲಿಂದ ನೇಪಾಳಕ್ಕೆ ತೆರಳಲು ವ್ಯವಸ್ಥೆ ಮಾಡಿಕೊಡುವುದಾಗಿ ನೇಪಾಳಿ ದೂತಾಲಯ ತಿಳಿಸಿದೆ. ಆದರೆ, ದೆಹಲಿ ತಲುಪುವುದೇ ಸಮಸ್ಯೆಯಾಗಿದೆ. ಖಾಸಗಿ ಟ್ರಾವೆಲ್ಸ್ಗಳು 3 ಲಕ್ಷ ರೂ.ವರೆಗೂ ಕೇಳುತ್ತಿವೆ. ನಮ್ಮ ಬಳಿ ಅಷ್ಟು ಹಣವಿಲ್ಲ. ಸರ್ಕಾರ ನೆರವಾಗಬೇಕು ಎಂದು ನೇಪಾಳಿ ಪ್ರಜೆಗಳು ಮನವಿ ಮಾಡಿದ್ದಾರೆ. ನೇಪಾಳದಿಂದ ಯಾವುದೇ ಮನವಿ ಪತ್ರ ಬಂದರೆ ಅಥವಾ ಇಲ್ಲಿರುವ ಪ್ರಜೆಗಳು ಮನವಿ ಮಾಡಿದಲ್ಲಿ ನಾವು ಸಾರ್ವಜನಿಕ ಸಾರಿಗೆಗಳಲ್ಲಿ ಕಳಿಸಿಕೊಡುವ ವ್ಯವಸ್ಥೆಯ ಬಗ್ಗೆ ಚಿಂತಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಹೇಳಿದ್ದಾರೆ.