ಮತ್ತೆ ಇಬ್ಬರಿಗೆ ಕರೊನಾ ಸೋಂಕು ಶಂಕೆ

carona logo
Published on

ಗದಗ: ಕಲಬುರಗಿಯಿಂದ ನಗರಕ್ಕೆ ಬುಧವಾರ ಆಗಮಿಸಿರುವ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಅಣ್ಣಿಗೇರಿ ಪಟ್ಟಣದ ಯುವಕ ಮತ್ತು ನರಗುಂದದ ವ್ಯಕ್ತಿಯೊಬ್ಬರಲ್ಲಿ ಕರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು, ಜಿಲ್ಲೆಯಲ್ಲಿ ಆತಂಕ ಮನೆಮಾಡಿದೆ.

ಸದ್ಯ ಯುವಕ ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಯುವಕ ಕಲಬುರಗಿಯ ರೈಲು ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದು, ಬುಧವಾರ ಬೆಳಗ್ಗೆ ಅಣ್ಣಿಗೇರಿಗೆ ಬಂದಿದ್ದಾನೆ. ಕಲಬುರಗಿಯಿಂದ ಬಸ್ ಅಥವಾ ರೈಲಿನ ಮೂಲಕ ಆಗಮಿಸಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಯುವಕ ಈ ಬಗ್ಗೆ ಏನನ್ನೂ ಹೇಳುತ್ತಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಯುವಕನ ರಕ್ತ ಮತ್ತು ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಲಂಡನ್​ನಿಂದ ಆಗಮಿಸಿರುವ ದಂಪತಿಯ ಮಗುವಿಗೆ ಮಂಗಳವಾರ ಕರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ದರಿಂದ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ, ನೆಗೆಟಿವ್ ವರದಿ ಬಂದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಆದೇಶದನ್ವಯ ಜಿಲ್ಲಾದ್ಯಂತ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಜಿಲ್ಲೆಯಲ್ಲಿ 68 ಜನ ನಿಗಾದಲ್ಲಿದ್ದಾರೆ. ಇದರಲ್ಲಿ ಐವರು 28 ದಿನಗಳನ್ನು ಪೂರೈಸಿದ್ದು ಆರೋಗ್ಯದಿಂದ ಇದ್ದಾರೆ. ಇಬ್ಬರು ವೈದ್ಯಕೀಯ ಸೌಲಭ್ಯದೊಂದಿಗೆ ಪ್ರತ್ಯೇಕ ನಿಗಾದಲ್ಲಿದ್ದಾರೆ. ಒಟ್ಟು ಪರೀಕ್ಷೆಗಾಗಿ 11 ಜನರ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. 10 ಪ್ರಕರಣಗಳಲ್ಲಿ ನೆಗೆಟಿವ್ ಬಂದಿದೆ. ಸದ್ಯ ಅಣ್ಣಿಗೇರಿ ಯುವಕನ ವರದಿ ಬರಬೇಕಿದೆ.

ಸಭೆ, ಸಮಾರಂಭಗಳು, ಚಿತ್ರಮಂದಿರ, ಮಾಲ್​ಗಳು, ಶಾಲಾ ಕಾಲೇಜ್​ಗಳು ಬಂದ್ ಆಗಿವೆ. ಜನಜೀವನ ಯಥಾಪ್ರಕಾರ ಮುಂದುವರಿದಿದ್ದು, ವೈರಸ್ ಭಯದಿಂದ ಕೆಲವೆಡೆ ಮಹಿಳೆಯರು, ಮಕ್ಕಳು ಮನೆಯಿಂದ ಹೊರಗೆ ಬರುತ್ತಿಲ್ಲ

ಸಾರಿಗೆ ಸಂಸ್ಥೆಯಲ್ಲಿ ಕಟ್ಟುನಿಟ್ಟಿನ ಕ್ರಮ: ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಹಾಗೂ ಸಂಸ್ಥೆಯ ಸಿಬ್ಬಂದಿ ಹಿತದೃಷ್ಟಿಯಿಂದ ಹಲವಾರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ಸದ್ಯ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಿದೆ. ಮಾ. 11ರಿಂದ ಮಾ. 17ರವರೆಗೆ ಸಂಸ್ಥೆಯ ವ್ಯಾಪ್ತಿಯ 6 ಜಿಲ್ಲೆಗಳ ಒಟ್ಟು 9 ವಿಭಾಗಗಳಿಂದ ಕಾರ್ಯಾಚರಣೆಯಾಗುತ್ತಿರುವ ಸಾರಿಗೆಗಳಲ್ಲಿ 1,692 ಅನುಸೂಚಿಗಳನ್ನು ರದ್ದುಗೊಳಿಸಲಾಗಿದೆ. ವಿಶೇಷವಾಗಿ ಬೆಂಗಳೂರು, ಕಲಬುರಗಿ, ಮುಂಬೈ, ಪುಣೆ, ಹೈದರಾಬಾದ್, ಗೋವಾ ಮತ್ತಿತರ ಅಂತಾರಾಜ್ಯ ಮತ್ತು ದೂರಮಾರ್ಗದ ಪ್ರತಿಷ್ಠಿತ ಮತ್ತು ವೇಗದೂತ ಸಾರಿಗೆಗಳನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರ ಸಾಂದ್ರತೆಯನ್ನು ಗಮನದಲ್ಲಿಟ್ಟುಕೊಂಡು ಅವಶ್ಯಕತೆಗನುಸಾರವಾಗಿ ಸಾರಿಗೆ ಕಾರ್ಯಾಚರಣೆ ಮಾಡಲಾಗುತ್ತಿದೆ. ಘಟಕ, ಕಾರ್ಯಾಗಾರ ಮತ್ತು ಬಸ್ ನಿಲ್ದಾಣಗಳಿಗೆ ಅಧಿಕಾರಿಗಳು ಭೇಟಿ ನೀಡಿ ಚಾಲನಾ, ಆಡಳಿತ, ತಾಂತ್ರಿಕ ಸಿಬ್ಬಂದಿಗೆ ತಿಳಿವಳಿಕೆ ನೀಡುತ್ತಿದ್ದಾರೆ. ಎಲ್ಲ ಬಸ್ ನಿಲ್ದಾಣಗಳನ್ನು ಪ್ರತಿದಿನ ಸ್ವಚ್ಛಗೊಳಿಸಲಾಗುತ್ತಿದೆ. ಎಲ್ಲ ಬಸ್ ನಿಲ್ದಾಣಗಳಲ್ಲಿ ಪ್ರತಿ 5 ನಿಮಿಷಕ್ಕೊಮ್ಮೆ ಕರೊನಾ ವೈರಸ್ ಕುರಿತಂತೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕರ್ತವ್ಯ ನಿರತ ಚಾಲನಾ ಸಿಬ್ಬಂದಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ. ಲಭ್ಯತೆ ಮತ್ತು ಆದ್ಯತೆ ಮೇರೆಗೆ ಮಾಸ್ಕ್​ಗಳನ್ನು ವಿತರಿಸಲಾಗುತ್ತಿದೆ. ಬಸ್​ಗಳಲ್ಲಿ ಬೆಡ್​ಶೀಟ್, ಬ್ಲಾಂಕೆಟ್ ವಿತರಿಸುವುದನ್ನು ರದ್ದುಗೊಳಿಸಲಾಗಿದೆ.

ಘಟಕ ಹಾಗೂ ಕಚೇರಿಗೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಕೈಗಳನ್ನು ಸ್ಯಾನಿಟೈಸರ್, ಡಿಟರ್ಜೆಂಟ್ ಬಳಸಿ ಸ್ವಚ್ಛವಾಗಿ ತೊಳೆದುಕೊಂಡು ಬರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಸ್ಥೆಯ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಆರೋಗ್ಯ ಇಲಾಖೆಯವರಿಗೆ ಸ್ಥಳಾವಕಾಶ ಕಲ್ಪಿಸಿಕೊಟ್ಟಿದ್ದು, ಶಂಕಿತ ಪ್ರಯಾಣಿಕರನ್ನು ಪರೀಕ್ಷೆಗೊಳಪಡಿಸುವ ಹಾಗೂ ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ, ತಿಳಿವಳಿಕೆ ನೀಡಲಾಗುತ್ತಿದೆ ಎಂದು ಚೋಳನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದೇಶದಿಂದ ಬಂದವರ ಮಾಹಿತಿ ಕಲೆ ಹಾಕಲು ನಿರ್ದೇಶನ

ಗದಗ: ವಿದೇಶಗಳಿಂದ ಜಿಲ್ಲೆಗೆ ಬಂದಿರುವ ಪ್ರತಿಯೊಬ್ಬರ ಮಾಹಿತಿ ಕಲೆ ಹಾಕಬೇಕು. ಜತೆಗೆ ಪೊಲೀಸ್ ಇಲಾಖೆ ಸಹಕಾರದೊಂದಿಗೆ ತಾಲೂಕು ಆರೋಗ್ಯಾಧಿಕಾರಿಗಳು ಮನೆಗೆ ಭೇಟಿ ನೀಡಿ ತಪಾಸಣೆಗೊಳಪಡಿಸಬೇಕು. ನಿಗದಿತ ಅವಧಿಯಂತೆ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರುವಂತೆ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಟಾಸ್ಕ್​ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರೊನಾ ಸೊಂಕು ಹರಡದಂತೆ ಜಿಲ್ಲಾದ್ಯಂತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯ ನರಗುಂದ, ಮುಂಡರಗಿ ಹಾಗೂ ರೋಣ ತಾಲೂಕು ಆಸ್ಪತ್ರೆಯಲ್ಲಿ ತಲಾ 1, ಶಿರಹಟ್ಟಿ 2 ಸೇರಿ ಜಿಲ್ಲೆಯಲ್ಲಿ ಒಟ್ಟು 16 ವೆಂಟಿಲೇಟರ್​ಗಳಿವೆ. ಮುಂಜಾಗ್ರತೆ ಕ್ರಮವಾಗಿ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಆಯುಷ್ ಕಾಲೇಜಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ ಹಾಗೂ ಕಲಬುರಗಿಯಿಂದ ರೈಲು, ಬಸ್ ಮೂಲಕ ಜಿಲ್ಲೆಗೆ ಬರುವ ಪ್ರಯಾಣಿಕರ ಮೇಲೆ ನಿಗಾವಹಿಸಬೇಕು ಎಂದರು.

ಗದಗ ಹಾಗೂ ಹೊಳೆಆಲೂರು ರೈಲು ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ತಪಾಸಣೆಗೆ ಕ್ರಮ ವಹಿಸಬೇಕು. ಸಾರಿಗೆ ಬಸ್​ಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಅವರು ನಿರ್ದೇಶನ ನೀಡಿದರು. ಜಿಪಂ ಸಿಇಒ ಡಾ. ಆನಂದ ಕೆ. ಮಾತನಾಡಿ, ಕೋವಿಡ್ 19 ಸೋಂಕಿನ ಬಗ್ಗೆ ನಿಗಾವಹಿಸಿದವರ ವರದಿ ನೆಗೆಟಿವ್ ಬಂದ ತಕ್ಷಣವೇ ಬಿಡುಗಡೆ ಮಾಡಬಾರದು. ಅವರ ಮೇಲೆ ನಿರಂತರ ನಿಗಾವಹಿಸಿ ಕೆಲ ದಿನಗಳ ಕಾಲ ಜನರ ಸಂಪರ್ಕದಿಂದ ದೂರವಿರುವಂತೆ ಕ್ರಮ ಕೈಗೊಳ್ಳಬೇಕು. ಜತೆಗೆ ಕರೊನಾ ವೈರಸ್ ಕುರಿತು ಜನರಲ್ಲಿ ಇನ್ನೂ ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಿಡದ, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಡಾ.ಪಿ.ಎಸ್. ಭೂಸರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ವಿ.ಸಿ. ಕರಿಗೌಡರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮೇಲುಸ್ತುವಾರಿ ಸಮಿತಿ ರಚನೆ: ಜಿಲ್ಲೆಯಲ್ಲಿ ಕರೊನಾ ವೈರಸ್ ಸಾಂಕ್ರಾಮಿಕವಾಗಿ ಹರಡುವುದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಕಾರ್ಯವಿಧಾನ ಅನುಷ್ಠಾನಗೊಳಿಸಲು ಗದಗ ಜಿಲ್ಲಾ ಮಟ್ಟದ ಮೇಲುಸ್ತುವಾರಿ ಸಮಿತಿಯನ್ನು ರಚಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಟಾಸ್ಕ್​ಫೋರ್ಸ್ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಜಿಪಂ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಗದಗ ವೈದ್ಯಕೀಯ ಮಹಾವಿದ್ಯಾಲಯ ನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ, ವಿಭಾಗೀಯ ನಿಯಂತ್ರಣಾಧಿಕಾರಿ, ಐಎಂಎ ಅಧ್ಯಕ್ಷ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ, ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳ ಸಂಘದ ಅಧ್ಯಕ್ಷರು ಸಮಿತಿಯ ಸದಸ್ಯರಾಗಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ. ಸಮಿತಿಯ ಸದಸ್ಯರು ಪ್ರತಿದಿನ ಸಭೆ ನಡೆಸಿ ಕರೊನಾ ವೈರಸ್ ಪ್ರಕರಣಗಳ ಬಗ್ಗೆ ಪರಿಶೀಲಿಸುವುದು ಹಾಗೂ ಆರೋಗ್ಯ ಇಲಾಖೆ ಸುತ್ತೋಲೆಯಡಿ ನೀಡಿದ ನಿರ್ದೇಶನಗಳಂತೆ ಕ್ರಮ ಜರುಗಿಸಿ ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net