

ಕಾರವಾರ: ಜಿಲ್ಲೆಯಲ್ಲಿ ಮತ್ತೆ 77 ಜನರಲ್ಲಿ ಕರೊನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದು, 72 ಜನರು ಗುಣ ಹೊಂದಿದ್ದಾರೆ.
ಕಾರವಾರ ಮತ್ತು ಮುಂಡಗೋಡಿನ ತಲಾ 12, ದಾಂಡೇಲಿ ಮತ್ತು ಹಳಿಯಾಳ ಸೇರಿ 38, ಅಂಕೋಲಾ, ಕುಮಟಾ ಮತ್ತು ಭಟ್ಕಳದಲ್ಲಿ ತಲಾ 3, ಹೊನ್ನಾವರದಲ್ಲಿ 1, ಶಿರಸಿಯಲ್ಲಿ 5 ಪ್ರಕರಣಗಳು ಪತ್ತೆಯಾಗಿವೆ. ಕಾರವಾರದಲ್ಲಿ ಒಂದು ಸಾವು ಸಂಭವಿಸಿದೆ.
ಕಾರವಾರದಲ್ಲಿ 2, ಅಂಕೋಲಾದಲ್ಲಿ 13, ಕುಮಟಾದಲ್ಲಿ 14, ಹೊನ್ನಾವರದಲ್ಲಿ 5, ಭಟ್ಕಳದಲ್ಲಿ 13, ಶಿರಸಿಯಲ್ಲಿ 19, ಹಳಿಯಾಳದಲ್ಲಿ 6 ಜನ ಗುಣ ಹೊಂದಿದ್ದಾರೆ.
ಒಟ್ಟಾರೆ ವೈರಸ್ಗೆ ತುತ್ತಾದವರಲ್ಲಿ 22 ಜನರ ಸೋಂಕಿನ ಮೂಲ ಪತ್ತೆಯಾಗಿಲ್ಲ. ಹೊರ ಊರಿನಿಂದ ಬಂದ ಇಬ್ಬರಲ್ಲಿ, ಜ್ವರದ ಲಕ್ಷಣ ಇದ್ದ 14 ಜನರಲ್ಲಿ ಕೋವಿಡ್ ಖಚಿತವಾಗಿದೆ. ಒಟ್ಟಾರೆ ಸೋಂಕಿತರದಲ್ಲಿ 11 ವೃದ್ಧರು ಹಳಿಯಾಳದ 3 ವರ್ಷದ ಮಗು ಸೇರಿದೆ. ಇಬ್ಬರು ಯುವಕರು ಐವರು ವೃದ್ಧರು ಸೇರಿ ಏಳು ಜನರು ಕರೊನಾದಿಂದ ಸ್ವಲ್ಪ ಗಂಭೀರ ಸಮಸ್ಯೆ ಎದುರಿಸುತ್ತಿದ್ದು, ಅವರನ್ನು ವಿಶೇಷ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಕ್ಷಯ ರೋಗಿ ಸಾವು: ಕ್ಷಯ ರೋಗದಿಂದ ಬಳಲುತ್ತಿದ್ದ ಕಾರವಾರದ 52 ವರ್ಷದ ಮಹಿಳೆಗೆ ಕರೊನಾ ಸೋಂಕು ತಗುಲಿತ್ತು. ಜುಲೈ 31ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆ. 5 ರಂದು ಆಕೆಯ ಕರೊನಾ ವರದಿ ನೆಗೆಟಿವ್ ಬಂದಿತ್ತು. ಆದರೆ, ಅವರು ರಾತ್ರಿ ಮೃತಪಟ್ಟಿದ್ದಾರೆ. ಕರೊನಾ ನಿಯಮಾವಳಿಯಂತೆ ಅವರ ಅಂತ್ಯಕ್ರಿಯೆಗೆ ಸೂಚಿಸಲಾಗಿದೆ ಎಂದು ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ದೇಶಕ ಡಾ. ಗಜಾನನ ನಾಯಕ ತಿಳಿಸಿದ್ದಾರೆ.
ಸೋಂಕಿತೆಗೆ ಹೆರಿಗೆ: ಕರೊನಾ ಸೋಂಕಿನಿಂದ ಬಳಲುತ್ತಿದ್ದ ಹೊನ್ನಾವರದ 25 ವರ್ಷದ ಮಹಿಳೆಯನ್ನು ಕ್ರಿಮ್್ಸ ಆಸ್ಪತ್ರೆಗೆ ಆ. 4ರಂದು ರವಾನಿಸಲಾಗಿತ್ತು. ಅಂದು ರಾತ್ರಿ ಆಕೆಗೆ ಸಹಜ ಹೆರಿಗೆ ಮಾಡಿಸಲಾಗಿದ್ದು, ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ಕ್ರಿಮ್್ಸ ಪ್ರಕಟಣೆ ತಿಳಿಸಿದೆ. ಇದುವರೆಗೆ ಮೂವರಿಗೆ ಕ್ರಿಮ್ಸ್ನಲ್ಲಿ ಹೆರಿಗೆ ಮಾಡಿಸಲಾಗಿದೆ.