ಮತ್ತಿಮನೆಯಲ್ಲಿ ನವವಿವಾಹಿತೆಗೆ ಕರೊನಾ

6hos1p sealdown
Published on

ಹೊಸನಗರ: 10 ದಿನದ ಹಿಂದೆ ಮದುವೆಯಾಗಿ ಬಂದಿದ್ದ 25 ವರ್ಷದ ನವವಿವಾಹಿತೆಗೆ ಕರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಮತ್ತಿಮನೆ ಪ್ರದೇಶವನ್ನು ಸೀಲ್​ಡೌನ್ ಮಾಡಲಾಗಿದೆ.

3 ದಿನದ ಹಿಂದೆ ಸೋಂಕಿತೆ ಹೊಸನಗರ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಗಾಗಿದ್ದರು. ಭಾನುವಾರ ರಾತ್ರಿಯೇ ಶಿವಮೊಗ್ಗಕ್ಕೆ ಶಿಫ್ಟ್ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೋಂಕಿತೆಯ ಮನೆ ಸುತ್ತ ಬ್ಯಾರಿಕೇಡ್ ಹಾಕಿ ಪ್ರವೇಶ ನಿರ್ಬಂಧಿಸಲಾಗಿದೆ.

ಜೂ.25ರಂದು ಉಡುಪಿ ಜಿಲ್ಲೆ ಕಾಪುವಿನ ಯುವತಿ ಜತೆ ಮತ್ತಿಮನೆಯಲ್ಲಿ ಹುಡುಗನೊಂದಿಗೆ ಮದುವೆ ನಡೆದಿದ್ದು ಅಂದಾಜು 200 ಜನರು ಭಾಗವಹಿಸಿದ್ದರು. ಕಾಪುವಿನಿಂದ ಬಂದ ಕಾರಣ ಗ್ರಾಪಂ ಸೂಚನೆ ಮೇರೆಗೆ ನವವಿವಾಹಿತೆ ಹೊಸನಗರ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ಜು.4ರಂದು ತನ್ನ ಪತಿಯ ರಿಕ್ಷಾದಲ್ಲೇ ಪರೀಕ್ಷೆಗೆ ತೆರಳಿದ್ದು ರಿಕ್ಷಾದಲ್ಲಿ ಸೋಂಕಿತ ಮಹಿಳೆ, ಪತಿ ಮತ್ತು ಅತ್ತೆ ಸೇರಿ ಮೂವರು ಇದ್ದರು. ಪರೀಕ್ಷೆಗೆ ಹೋಗಿ ಬರುವ ವೇಳೆ ನಗರ ಚಿಕ್ಕಪೇಟೆಯಲ್ಲಿರುವ ತನ್ನ ನಾದಿನಿ ಮನೆಗೂ ಹೋಗಿ ಬಂದಿದ್ದರು. ಸೋಂಕಿತ ಮಹಿಳೆ ಭೇಟಿ ನೀಡಿದ್ದ ಕಾರಣ ನಾದಿನಿಯನ್ನು ಕೂಡ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಮದುವೆಯಲ್ಲಿ ಭಾಗವಹಿಸಿದವರ ಪೈಕಿ ಈಗಾಗಲೇ 80 ಜನರ ಪಟ್ಟಿ ಮಾಡಲಾಗಿದೆ. ಸಂಪರ್ಕದ ಆಧಾರದ ಮೇಲೆ ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದೆ.

ತಹಸೀಲ್ದಾರ್ ಭೇಟಿ: ಮತ್ತಿಮನೆಗೆ ಭೇಟಿ ನೀಡಿದ ತಹಸೀಲ್ದಾರ್ ವಿ.ಎಸ್.ರಾಜೀವ್ ಮಾತನಾಡಿ, ಮಹಿಳೆಯ ಟ್ರಾವೆಲ್ ಹಿಸ್ಟರಿ ಕಲೆ ಹಾಕಲಾಗುತ್ತಿದೆ. ಪ್ರಾಥಮಿಕ ಸಂಪರ್ಕದ ನಿಯಮ ಆಧರಿಸಿ ಅವರಿಗೆ ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದರು.

ಇದಕ್ಕೂ ಮುನ್ನ ಅರಮನೆಕೊಪ್ಪ ಗ್ರಾಪಂಯಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ಥಳೀಯ ಸಿಬ್ಬಂದಿ ಸಭೆ ನಡೆಸಿದ ತಾಪಂ ಇಒ ಸಿ.ಆರ್.ಪ್ರವೀಣ್, ಟಿಎಚ್​ಒ ಡಾ.ಸುರೇಶ್, ಸೋಂಕು ಹರಡದಂತೆ ಕೈಗೊಳ್ಳುವ ಕ್ರಮಗಳ ಬಗ್ಗೆ ರ್ಚಚಿಸಿದರು. ಮೈಕ್ ಪ್ರಚಾರದ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲು ತಿಳಿಸಲಾಯಿತು.

ತಾಪಂ ಸದಸ್ಯ ಕೆ.ವಿ.ಸುಬ್ರಹ್ಮಣ್ಯ, ಪಿಡಿಒ ಪರಮೇಶ್ವರ್, ಪಿಎಸ್​ಐ ಸಿ.ಆರ್.ಕೊಪ್ಪದ್, ಕಂದಾಯ ನಿರೀಕ್ಷಕ ಲೋಹಿತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net