ಮತ್ತಷ್ಟು ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸಿ

01 kkr,1
ಕಿಕ್ಕೇರಿ ಹೋಬಳಿ ತೆಂಗಿನಘಟ್ಟ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸಚಿವ ಕೆ.ಸಿ.ನಾರಾಯಣಗೌಡ ಸೋಮವಾರ ಮತಯಾಚಿಸಿದರು. ಮುಡಾ ಅಧ್ಯಕ್ಷ ಕೆ. ಶ್ರೀನಿವಾಸ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಪ್ರಭಾಕರ್, ವಿಧಾನಪರಿಷತ್ ಸದಸ್ಯ ಡಿ.ಸಿ. ವೀರಯ್ಯ, ಕೆ.ಜಿ. ತಮ್ಮಣ್ಣ, ಶೇಖರ್, ಕೆ.ಆರ್. ನೀಲಕಂಠ, ರಾಜಹುಲಿ ದಿನೇಶ್ ಮತ್ತಿತರರಿದ್ದರು.
Published on

ಕಿಕ್ಕೇರಿ: ತಾಲೂಕು ಸೇರಿದಂತೆ ಕಿಕ್ಕೇರಿ ಹೋಬಳಿಯ ಸಮಗ್ರ ಅಭಿವೃದ್ಧಿಯನ್ನು ಸಾಕಷ್ಟು ಮಾಡಲಾಗಿದ್ದು, ಮತ್ತಷ್ಟು ಅಭಿವೃದ್ಧಿಗಾಗಿ ಮತ್ತೊಮ್ಮೆ ಗೆಲ್ಲಿಸಿಕೊಡಿ ಎಂದು ಬಿಜೆಪಿ ಅಭ್ಯರ್ಥಿ, ಸಚಿವ ಕೆ.ಸಿ.ನಾರಾಯಣಗೌಡ ಮನವಿ ಮಾಡಿದರು.

ಹೋಬಳಿಯ ವಿವಿಧ ಗ್ರಾಮಗಳಲ್ಲಿ ರೋಡ್‌ಶೋ ಮೂಲಕ ಮತಯಾಚನೆ ಮಾಡಿ ಮಾತನಾಡಿ, ತಾಲೂಕಿನ ಅಭಿವೃದ್ಧಿಗೆ 1800 ಕೋಟಿ ರೂ. ಗಳಷ್ಟು ಅನುದಾನ ತಂದಿರುವೆ. ಕಿಕ್ಕೇರಿ ಹೋಬಳಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನನ್ನನ್ನು ಗೆಲ್ಲಿಸಿಕೊಡಿ. ತಾಲೂಕಿನ ಋಣ ನನ್ನ ಮೇಲಿದೆ. ಋಣ ತೀರಿಸಲು ಮತ್ತೊಂದು ಅವಕಾಶ ನೀಡಿ ಎಂದರು.

ರೈತರ ಸಮಸ್ಯೆಗಳನ್ನು ಬಗೆಹರಿಸಲು ವಿಶೇಷವಾಗಿ ಸಂತೇಬಾಚಹಳ್ಳಿ, ಬೂಕನಕೆರೆ, ಶೀಳನೆರೆ ಹೋಬಳಿಗಾಗಿ ಗೂಡೆಹೊಸಹಳ್ಳಿ, ಕಟ್ಟಹಳ್ಳಿ ಬಳಿ ಏತನೀರಾವರಿ ಯೋಜನೆ, ತಾಲೂಕು ಕೇಂದ್ರದಲ್ಲಿ ಹೈಟೆಕ್ ಒಳಾಂಗಣ ಕ್ರೀಡಾಂಗಣ, ತಾಯಿ ಮಗು ಆಸ್ಪತ್ರೆ, ರಸ್ತೆ ಅಭಿವೃದ್ಧಿ ಕಾಮಗಾರಿ, ಜಲಜೀವನ್ ಮಿಷನ್‌ನಂತಹ ಹಲವಾರು ಯೋಜನೆಗಳನ್ನು ತಂದಿರುವೆ.

ಕಿಕ್ಕೇರಿ ಹಾಗೂ ತಾಲೂಕಿನಲ್ಲಿ ಸಣ್ಣ ಗಲಭೆಯೂ ನಡೆಯದಂತೆ ಶಾಂತಿ ಕಾಪಾಡುತ್ತಿರುವೆ. ಜನರ ನೆಮ್ಮದಿಯಲ್ಲಿ ಸಂತೋಷ ಕಾಣುತ್ತಿರುವೆ. ವಿರೋಧಿಗಳು ತನ್ನ ಅಭಿವೃದ್ಧಿ ಸಾಧನೆ ನೋಡಲು ಸಾಧ್ಯವಾಗದೆ ಟೀಕೆಗೆ ಇಳಿದಿದ್ದಾರೆ. ಇದಕ್ಕೆ ನಾನು ತಲೆಕೆಡಿಸಿಕೊಳ್ಳಲಾರೆ. ಮತದಾರರು ಎಂದಿಗೂ ತನ್ನ ಕೈಬಿಡಲಾರರು ಎಂಬುದು ವಿರೋಧ ಪಕ್ಷಗಳಿಗೆ ತಿಳಿದಿಲ್ಲ ಎಂದರು.

ತಾಲೂಕಿನ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿರುವೆ. ಹಲವು ಯೋಜನೆ ಕಾಮಗಾರಿಗಳು ಅನಿವಾರ್ಯ ಕಾರಣದಿಂದ ಆರಂಭವಾಗಲು ತಡವಾಗಿದೆ. ಚುನಾವಣೆ ನಡೆಯುತ್ತಿರುವುದರಿಂದ ತೊಡಕಾಗಿದೆ. ಎಲ್ಲವೂ ಸರಿಯಾಗಲಿದೆ. ಜನತೆಗೆ ಆತಂಕ ಬೇಡ. ಬಡತನದಲ್ಲಿ ಹುಟ್ಟಿ ಮುಂಬೈಗೆ ಹೋಗಿ ಬದುಕು ಕಟ್ಟಿಕೊಂಡು ಜನ್ಮಭೂಮಿ ಋಣ ತೀರಿಸಲು ಬಂದಿರುವೆ. ಕೊನೆಯವರಿಗೆ ಇಲ್ಲಿಯೇ ಜನರೊಂದಿಗೆ ಇರುವೆ ಎಂದು ಉದ್ವೇಗದಿಂದ ನುಡಿದರು.

ಹೇಮನಾಡಿಗ್, ನಿಸರ್ಗ, ಮುತ್ತುರಾಜ್, ಮಹೇಶ್ ವಶಿಷ್ಠ ಮತ್ತಿತರ ಕಿರುತೆರೆಯ ತಾರೆಯರು ಪ್ರಚಾರ ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಮುಖಂಡರಾದ ಮೋಹನ್‌ಕುಮಾರ್‌ಗೌಡ, ರವಿ, ಶಿವಕುಮಾರ್, ಮುಂಬೈ ರಾಜೇಗೌಡ, ಬೋರಾಪುರ ಮಂಜುನಾಥ್, ಕೆ.ಜಿ. ತಮ್ಮಣ್ಣ, ಮಾದಾಪುರ ಶೇಖರ್, ಕೆ.ಆರ್. ನೀಲಕಂಠ, ರಾಜಹುಲಿ ದಿನೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net