ಮತೀಯ ಗೊಂದಲಗಳಿಗೆ ಅವಕಾಶ ಸಲ್ಲದು : ಸುಪ್ರೀಂ ಕೋರ್ಟ್​ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಭಿಮತ, ಅಕ್ಷರ ವೃಕ್ಷ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಭಾಗಿ

1
Published on
ಕೋಲಾರ: ಸಂವಿಧಾನದಲ್ಲಿ ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂದು ವಿಂಗಡಣೆ ಮಾಡಿಲ್ಲ. ಪ್ರತಿಯೊಬ್ಬರು ಸಮಾನವಾಗಿ ಬದುಕುವ ಹಕ್ಕು ಕಲ್ಪಿಸಲಾಗಿದೆ. ಈ ನೆಲದಲ್ಲಿ ಎಲ್ಲರೂ ಸುಖವಾಗಿ, ಸಂತೋಷವಾಗಿ ಜೀವಸಬೇಕೆಂಬ ಆಶಯದಿಂದಲೇ ಸಂವಿಧಾನ ರಚಿಸಲಾಗಿದ್ದು,ಇದನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂದು ಸುಪ್ರೀಂ ಕೋರ್ಟ್​ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಜಿಲ್ಲಾ ಕಸಾಪ, ಮೈಸೂರಿನ ವಸುಂಧರ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಲೇಖಕ ರವೀಂದ್ರ ಸಿಂಗ್​ ವಿರಚಿತ ಅಕ್ಷರ ವೃಕ್ಷ ಕೃತಿಯ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ, ಬಡವ ಬಲ್ಲಿದ ಎಂಬ ತಾರತಮ್ಯವನ್ನು ಹೋಗಲಾಡಿಸಲು ಸಂವಿಧಾನ ರಚಿಸಲಾಗಿದೆ, ಎಲ್ಲರು ಸಮಾನವಾಗಿ, ಸರಿ ಸಮಾನವಾಗಿ ಬಾಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಮತೀಯ ಗೊಂದಲ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಬಡವ ಬಡವನಾಗಿಯೇ ಇರಬೇಕೆಂದು ಇಲ್ಲ, ಅವಕಾಶಗಳನ್ನು ಬಳಸಿಕೊಂಡು ಪ್ರಗತಿ ಸಾಧಿಸಬಹುದು. ಯಾರಲ್ಲಿ ಛಲ, ಬದ್ಧತೆ, ಗುರಿ ಇರುತ್ತದೋ ಅಂತಹವರು ಕಷ್ಟಗಳನ್ನು ಮೆಟ್ಟಿನಿಲ್ಲುತ್ತಾರೆ ಎಂಬುದಕ್ಕೆ ಬಡ ಕುಟುಂಬದಲ್ಲಿ ಹುಟ್ಟಿ, ಕಷ್ಟಗಳ ನಡುವೆಯೂ ಉನ್ನತ ಶಿಕ್ಷಣ ಪಡೆದು ಸಾಮಾಜಕ್ಕೆ ದಾರಿ ದೀಪವಾಗಿರುವ ಜಿಲ್ಲೆಯವರೇ ಆದ ಪೋ.ಶ್ರೀರಾಮ ಅವರ ಬದುಕಿನ ಪಲ್ಲಟಗಳ ಕುರಿತು ಹೊರ ತಂದಿರುವ ಅಕ್ಷರ ವೃಕ್ಷ ಕೃತಿ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ ಎಂದರು.
ಕೋಲಾರ ಜಿಲ್ಲೆಯನ್ನು ಒಂದು ಕಾಲದಲ್ಲಿ ಆಂಧ್ರ ಪ್ರದೇಶದ ರಾಯಲ ಸೀಮೆಗೆ ಹೊಲಿಕೆ ಮಾಡಲಾಗಿತ್ತು, ಆದರೆ ಇಲ್ಲಿನ ಜನತೆ ರಾಯಲ ಸೀಮೆ ಆಗಲು ಬಿಡಲಿಲ್ಲ, ರಾಯಲು ಎಂದರೆ ಕಲ್ಲು, ಆದರೆ ಮನುಷ್ಯನ ಅತಿ ಆಸೆಯಿಂದ ಕಲ್ಲು ಕರಗುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಮುಳಬಾಗಿಲು ತಾಲೂಕಿನವರಾದ ಜಸ್ಟೀಸ್​ ವೆಂಕಟಾಚಲಯ್ಯ, ಶ್ರೀನಿವಾಸಪುರ ತಾಲೂಕಿನ ರೋಣೂರು ಗ್ರಾಮದವರಾದ ಜಸ್ಟೀಸ್​ ರಾಜೇಂದ್ರಬಾಬು ಅವರು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿ ಜಿಲ್ಲೆಗೆ ಕೀರ್ತಿ ತಂದುಕೊಟ್ಟಿದ್ದು, ಪೋ. ಶ್ರೀರಾಮ ಸಹ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ ಎಂದು ಆಶಿಸಿದರು.
ಪುಸ್ತಕ ಬಿಡುಗಡೆ ಮಾಡಿದ ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ ಡಿ.ದೇವರಾಜು, ಶ್ರೀರಾಮ ಅವರು ಕೆಜಿಎಫ್​ ಕಾಲೇಜಿನಲ್ಲಿ ಕಾಮರ್ಸ್​ ವಿಭಾಗದ ಉಪನ್ಯಾಸಕರಾಗಿದ್ದ ತಾನು ವಿದ್ಯಾರ್ಥಿಯಾಗಿದ್ದ ಸನ್ನಿವೇಶವನ್ನು ಮೆಲಕು ಹಾಕಿದರಲ್ಲದೆ, ನಮ್ಮ ಜಿಲ್ಲೆಯ ಬಡ ಕುಟುಂಬದ ಯುವಕನೊಬ್ಬ ಕಷ್ಟಪಟ್ಟು ಬೆಳೆದಿರುವುದು ಇಂದಿನ ಯುವ ಜನಾಂಗಕ್ಕೆ ಮಾದರಿ ಎಂದು ತಿಳಿಸಿದರು.
ತಾವು ಕೋಲಾರ ಜಿಲ್ಲೆಯ ಯುವಕರಿಗಾಗಿ ಸ್ಪರ್ಧಾತ್ಮಕ ಪರೀಾ ಕೇಂದ್ರ ತೆರೆಯಲು ಬಯಸಿದ್ದು, ಜಸ್ಟೀಸ್​ ಗೋಪಾಲಗೌಡ ಅವರನ್ನು ಪರೀಾರ್ಥಿಗಳಿಗೆ ಮೊಟಿವೇಟ್​ ಮಾಡಲು ಆಹ್ವಾನಿಸುವೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಗೌರವಾಧ್ಯಕ್ಷ ಜೆ.ಜಿ.ನಾಗರಾಜು ಪುಸ್ತಕ ಕುರಿತು ಮಾತನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ಬಿ.ವಿ.ಗೋಪಿನಾಥ, ಜಿಲ್ಲಾ ಕಸಾಪ ಅಧ್ಯಕ್ಷ ಗೋಪಾಲಗೌಡ, ಗೌರವ ಪ್ರಧಾನ ಕಾರ್ಯದರ್ಶಿ ಕೆ.ಎಸ್​.ಗಣೇಶ್​, ಪೋ.ಶ್ರೀರಾಮ, ಲೇಖಕ ರವೀಂದ್ರ ಸಿಂಗ್​, ನಿವೃತ್ತ ಅರಣ್ಯಾಧಿಕಾರಿ ಮುನಿಸ್ವಾಮಿ, ಜಿಲ್ಲಾ ಒಕ್ಕಲಿಗರ ಸಂದ ಅಧ್ಯಕ್ಷ ಕೆ.ವಿ.ಶಂಕರಪ್ಪ, ಹೈಕೋರ್ಟಿನ ನಿವೃತ್ತ ಅಧಿಕಾರಿ ಗೋವಿಂದರಾಜು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net