

ಮೈಸೂರು: ಕನ್ನಡವನ್ನು ಕಗ್ಗೊಲೆ ಮಾಡಿ ಜನರನ್ನು ಮತಾಂತರ ಮಾಡಿದ ಮತಾಂಧ ಟಿಪ್ಪುವನ್ನು ಮತಕ್ಕಾಗಿ ಯಾಕೆ ಇಷ್ಟು ಓಲೈಕೆ ಮಾಡಲಾಗುತ್ತಿದೆ ಎಂದು ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಕಿಡಿಕಾರಿದರು.
ರಂಗಾಯಣ, ಬೆಂಗಳೂರಿನ ಅಯೋಧ್ಯಾ ಪ್ರಕಾಶನ ವತಿಯಿಂದ ಭೂಮಿಗೀತದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ರಚಿಸಿರುವ ‘ಟಿಪ್ಪು ನಿಜ ಕನಸುಗಳು’ ನಾಟಕ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಮೈಸೂರು ಅರಸರು ಕನ್ನಡ ನಾಡು, ನುಡಿಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಂತಹವರನ್ನು ಕೆಳಗಿಸಿ ಅಧಿಕಾರ ಕೈಗೆ ತೆಗೆದುಕೊಂಡ ಹೈದರ್ ಅಲಿ, ಟಿಪ್ಪು ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಅಳಿಸಿ ಹಾಕುವ ಯತ್ನ ನಡೆಸಿದ್ದರು. ಅಲ್ಲದೇ, ಕೊಡಗು, ಕೇರಳ ಸೇರಿದಂತೆ ರಾಜ್ಯ ವಿಸ್ತರಿಸಿದ ಕಡೆಗಳಲ್ಲಿ ಮತಾಂತರ ಮಾಡಿ, ದೇವಸ್ಥಾನ ಕೆಡವಿ ಮಸೀದಿ ನಿರ್ಮಿಸಿದ್ದ. ಆಡಳಿತ ಭಾಷೆಯಾಗಿದ್ದ ಕನ್ನಡ ಜಾಗದಲ್ಲಿ ಪರ್ಷಿಯನ್ ಭಾಷೆ ಜಾರಿಗೆ ತಂದ. ಕಂದಾಯ ಇಲಾಖೆಗೆ ಸಂಬಂಧಪಟ್ಟ ಪದಗಳನ್ನು ಖಾತೆ, ಕಿರ್ದಿ, ತರಿ, ಖುಷ್ಕಿ, ತಹಸೀಲ್ದಾರ್, ಶಿರಸ್ತೇದಾರ್ ಎಂದು ಬದಲಿಸಿದ. ಅಲ್ಲದೇ ಮೈಸೂರನ್ನು ನಜರ್‌ಬಾದ್, ಬ್ರಹ್ಮಪುರಿಯನ್ನು ಸುಲ್ತಾನ್ ಪೇಟ್, ಕಾಳಿಕೋಟೆ(ಕಲ್ಲಿಕೋಟೆ)- ಫೂರಕಬಾದ್, ದೇವನಹಳ್ಳಿ- ಯೂಸುಫಾಖಾನ್, ಸಂಕ್ರೀದುರ್ಗವನ್ನು ಮುಜರಾಬಾದ್, ಸಕಲೇಶಪುರ- ಮಂಜರಾಬಾದ್ ಎಂದು ಬದಲಿಸುವ ಮೂಲಕ ನಮ್ಮ ನಾಡಿನ ಇತಿಹಾಸವನ್ನೇ ಅಳಿಸಿ ಹಾಕಲು ಯತ್ನಿಸಿದ ಎಂದು ಟೀಕಿಸಿದರು.
ಟಿಪ್ಪುವಿನ ನಿಜ ಬಣ್ಣ ಬಯಲು ಮಾಡಿದ ಅಂದಿನ ಶಿಕ್ಷಣ ಸಚಿವರಾಗಿದ್ದ ಡಿ.ಎಚ್.ಶಂಕರಮೂರ್ತಿ ಕಾರ್ಯಕ್ರಮವೊಂದರಲ್ಲಿ ಟಿಪ್ಪು ಕನ್ನಡ ವಿರೋಧಿ ಅಗಿದ್ದ ಎಂದು ನೀಡಿದ ಹೇಳಿಕೆ ವಿರುದ್ಧ ಎಡಪಂಥಿಯರು ದೊಡ್ಡ ಹೋರಾಟ, ಟೀಕೆ ಮಾಡಿದ್ದರು. ಈಗ ರೈಲಿಗೆ ಟಿಪ್ಪು ಹೆಸರು ಬದಲಿಸಿ ಒಡೆಯರ್ ಹೆಸರು ಇಟ್ಟಿರುವುದಕ್ಕೆ ಟೀಕೆಗಳು ಬರುತ್ತಿವೆ. ಬೆಂಗಳೂರು ಕಟ್ಟಿದ ಕೆಂಪೇಗೌಡರ ಪ್ರತಿಮೆ ನಿರ್ಮಿಸಿದಂತೆ ಟಿಪ್ಪು ಪ್ರತಿಮೆ ನಿರ್ಮಿಸುವುದಾಗಿ ಕೆಲವರು ಹೇಳುತ್ತಿದ್ದಾರೆ. ಕೆಂಪೇಗೌಡರಂತೆ ನಾಡಿಗೆ ಟಿಪ್ಪು ಕೊಡುಗೆ ಏನು ಎಂದು ಪ್ರಶ್ನಿಸಿದರು.
ಟಿಪ್ಪು ಮೂಲತಃ ಕ್ರೂರಿ ಎನ್ನುವುದಕ್ಕೆ ನಂದಿಬೆಟ್ಟದ ಮೇಲಿನಿಂದ ಜನರನ್ನು ಚೀಲಕ್ಕೆ ತುಂಬಿ ಕೆಳಕ್ಕೆ ಎಸೆಯುತ್ತಿದ್ದ. ನಮ್ಮ ವ್ಯವಸ್ಥೆಯಲ್ಲಿ ಮತಕ್ಕಾಗಿ ಕೀಟಲೆ ಮಾಡಲೆಂದೇ ಟಿಪ್ಪು ಜಯಂತಿ ಆಯೋಜಿಸುತ್ತಿದ್ದಾರೆ. ಪ್ರತಾಪಗಡ ಎಂಬಲ್ಲಿ ಶಿವಾಜಿ ಗುಡಿಯನ್ನು ಮಟ್ಟಮಾಡಿ, ಅಲ್ಲೊಂದು ಮಸೀದಿ ಕಟ್ಟಿದರು ಎಂದು ಕಿಡಿಕಾರಿದರು.
ಹೆತ್ತ ತಾಯಿಯ ಜುಟ್ಟು ಹಿಡಿದು ಒಪ್ಪಿಸಿ ಬಿಡುವಷ್ಟರ ಮಟ್ಟಿಗೆ ನಮ್ಮ ಪ್ರಜಾಪ್ರಭುತ್ವವಿದೆ. ಇದಕ್ಕಾಗಿಯೇ ನಾವು ಬ್ರಿಟಿಷರನ್ನು ಓಡಿಸಿದ್ದು?. ಜನರು ಇಂತಹ ವ್ಯವಸ್ಥೆಯನ್ನು ಪ್ರಶ್ನಿಸದಿದ್ದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಈ ನಾಟಕವನ್ನು ನೋಡಿ ಮನೆಗೆ ಹೋದರೆ ಪ್ರಯೋಜನವಿಲ್ಲ. ಬದಲಿಗೆ ನಾಲ್ಕಾರು ಮಂದಿಗೆ ಈ ವಿಷಯ ಮುಟ್ಟಿಸಬೇಕು. ಜನರಿಗೆ ಈ ಸತ್ಯ ತಿಳಿಯಬೇಕು ಎಂದು ಸಲಹೆ ನೀಡಿದರು.
ಸಂವಿಧಾನ ಬರೆಯುವಾಗ ಅಂಬೇಡ್ಕರ್ ಅವರು ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಬಿಟ್ಟುಬಿಡಿ ಎಂದಿದ್ದರು. ಆದರೆ ಗಾಂಧೀಜಿ ನೇತೃತ್ವದ ಸಭೆಯಲ್ಲಿ ನಮ್ಮ ನಂಬಿಕೆಗೆ ಬದ್ಧರಾಗಿರುತ್ತೇವೆ ಎಂದಾದರೆ ಇರಿ ಎಂದಿದ್ದರು. ಆದರೆ ಈಗ ಆ ಮಾತನ್ನು ಅನುಸರಿಸುತ್ತಿದ್ದಾರೆಯೇ? ಟಿಪ್ಪು ಹೆಸರನ್ನು ರೈಲಿಗೆ ಇಡುವ ಜನ, ಕಲಾಂ ಹೆಸರನ್ನಿಡಲು ಸಿದ್ಧರಿಲ್ಲ. ಟಿಪ್ಪುವನ್ನು ಹೀರೋ ಮಾಡಿಕೊಂಡು ಬರುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಅಭಿಪ್ರಾಯಪಟ್ಟರು.
ಸಾಮರಸ್ಯ ವೇದಿಕೆಯ ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಮಾತನಾಡಿ, ಕೇರಳ ಆಕ್ರಮಿಸಿಕೊಳ್ಳಲು ಟಿಪ್ಪು ಮುಂದಾಗಿ ಕೊಡಗು ದಾಟುವಾಗ ಅಲ್ಲಿ ಮಾಡಿದ ಅನಾಚಾರ, ಅತ್ಯಾಚಾರ ಸಾಕಷ್ಟಿದೆ. ಕರಾವಳಿಯಲ್ಲಿ ಕ್ರಿಶ್ಚಿಯನ್ನರ ಮೇಲೆ ದಾಳಿ ನಡೆಸಿದ. 27 ಚರ್ಚ್‌ಗಳಲ್ಲಿ 25 ಚರ್ಚ್ ಮೇಲೆ ದಾಳಿ ನಡೆಸಿದ. ಬ್ರಿಟಿಷರ ಪರವಾದವರ ಮೇಲೆ ಕ್ರೌರ್ಯ ತೋರಿಸುತ್ತಲೇ ಬಂದ. ಆತ ಹಿಂದು ಪರವಾಗಿದ್ದರೆ ಚಿತ್ರದುರ್ಗದ ಮದಕರಿನಾಯಕರ ಮೇಲೆ ದಂಡೆತ್ತಿ ಹೋಗಿ ಅವರ 3 ಸಾವಿರ ಮುಸ್ಲಿಂ ಸೈನಿಕರ ಮೇಲೆ ಮತೀಯ ಭಾವನೆ ತಂದು ಕುತಂತ್ರದಿಂದ ಸೆರೆ ಹಿಡಿಯುತ್ತಿರಲಿಲ್ಲ. ಸೆರೆ ಸಿಕ್ಕ ಮದಕರಿನಾಯಕರನ್ನು ಶ್ರೀರಂಗಪಟ್ಟಣಕ್ಕೆ ಕರೆತಂದು ಮೋಸದಿಂದ ವಿಷವಿಕ್ಕಿ ಕೊಂದ. ಚನ್ನಪಟ್ಟಣ ಸಮೀಪದ ಭೈರಪಟ್ಟಣದ ಬಳಿ ಮದಕರಿನಾಯಕರ ಮಗನನ್ನು ನೇಣು ಹಾಕಿ ಕೊಂದಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಟಿಪ್ಪುವಿನ ನಿಜ ಬಣ್ಣವನ್ನು ಐ.ಎಂ.ಮುತ್ತಣ್ಣ, ಡಾ.ಎಸ್.ಎಲ್.ಭೈರಪ್ಪ, ಪ್ರತಾಪ ಸಿಂಹ, ಚಿಮೂ, ಪ್ರಧಾನ ಗುರುದತ್ತ ಸೇರಿದಂತೆ ಅನೇಕರು ಬಯಲಿಗೆಳೆಯಲು ಶ್ರಮಿಸಿದ್ದಾರೆ. ಟಿಪ್ಪು ಖಡ್ಗ ಧಾರಾವಾಹಿ ತೆಗೆದ ಸಂಜಯ್ ಖಾನ್ ಅದು ಕಾಲ್ಪನಿಕ ಎಂದು ಒಪ್ಪಿದರೆ, ಗಿರೀಶ್ ಕಾರ್ನಾಡ್ ತಾವು ಬರೆದ ಟಿಪ್ಪು ಕುರಿತ ನಾಟಕ ಲಾವಣಿ ಆಧಾರಿತ ಎಂದು ಹೇಳಿ ಜಾರಿಕೊಂಡಿದ್ದರು ಎಂದು ಹೇಳಿದರು.
ಲೇಖಕ ರೋಹಿತ್ ಚಕ್ರತೀರ್ಥ ಮಾತನಾಡಿ, ಟಿಪ್ಪು ನಿಜ ಕನಸುಗಳು ಕೃತಿ ಚರಿತ್ರೆಯ ಒಂದು ಭಾಗವಾಗಿದ್ದು, ಇದೊಂದು ಅದ್ಭುತ ರಂಗಕೃತಿ. ಟಿಪ್ಪುವಿನ ಕುರಿತು ಅನೇಕ ಕೃತಿಗಳು ಹೊರಬಂದಿವೆ. ಆದರೆ ಮೊದಲ ಬಾರಿಗೆ ಭೈರಪ್ಪ ಅವರ ಆವರಣ ಕೃತಿಯನ್ನು ಓದಿದ ಅನೇಕರು ಟಿಪ್ಪುವಿನ ಬಗೆಗಿನ ನಿಲುವು ಬದಲಿಸಿಕೊಂಡರು. ಆದರೆ ಕೃತಿ ವಿರುದ್ಧವಾಗಿ ಹೇಳಿಕೆ ನೀಡುತ್ತಿರುವವರು ಕೃತಿಯನ್ನು ಓದದೆ ಇರುವವರು ಎಂದು ಟೀಕಿಸಿದರು.
ನಾವು ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಟಿಪ್ಪುವಿನ ಕುರಿತಾಗಿ ಯಾವುದಕ್ಕೆ ಸಾಕ್ಷ್ಯವಿಲ್ಲವೋ ಅವುಗಳನ್ನು ತೆಗೆದೆವು. ಆಗ ಸಾಕಷ್ಟು ವಿರೋಧ ವ್ಯಕ್ತವಾಯಿತು. ಈಗ ಮತ್ತೆ ಈ ಕೃತಿಯ ಕುರಿತು ಎರಡು, ಮೂರು ದಿನದಿಂದ ಬಹಳ ಚರ್ಚೆಯಾಗುತ್ತಿದೆ. ಈ ಕೃತಿಯಲ್ಲಿ ಮತಾಂತರದ ಜತೆಗೆ ರಕ್ತಮಾಂಸವೂ ಸೇರಿಕೊಂಡಿದೆ, ಜನರ ಸಂಕಷ್ಟಗಳನ್ನು ಹೇಳಿರುವುದರಿಂದ ಜನರಿಗೆ ಈ ಕೃತಿ ಹತ್ತಿರವಾಗಿದೆ ಎಂದರು.
ಕೃತಿ ರಚಿಸಿದ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಅರ್ಬನ್ ನಕ್ಸಲ್‌ರಂತೆ ಇದ್ದ ಗಿರೀಶ್ ಕಾರ್ನಾಡ್ ಅವರು ಟಿಪ್ಪುವಿನ ಕನಸುಗಳು ನಾಟಕ ಬರೆದಿದ್ದರು. 2012ರಲ್ಲಿ ಕೇಂದ್ರ ಸಚಿವರಾಗಿದ್ದ ರೆಹಮಾನ್ ಖಾನ್ ಅವರು ಶ್ರೀರಂಗಪಟ್ಟಣದಲ್ಲಿ ಮುಸ್ಲಿಮರಿಗಾಗಿ ಟಿಪ್ಪು ಹೆಸರಿನಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ತೆರೆಯುವುದಾಗಿ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದ್ದೆವು. ಅಲ್ಲದೇ ಟಿಪ್ಪು ಮತ್ತು ಕೊಡವರು ಕೃತಿ ಮೂಲಕ ಜನತೆಗೆ ತಿಳಿಸಿದ್ದೆ ಎಂದರು.
ಟಿಪ್ಪುವಿನ ಕಾರಣಕ್ಕೆ ಮೇಲುಕೋಟೆ ಬ್ರಾಹ್ಮಣರು ಈಗಲೂ ದೀಪಾವಳಿ ಆಚರಿಸುತ್ತಿಲ್ಲ. ಟಿಪ್ಪು ಅನೇಕ ಕ್ರಿಶ್ಚಿಯನ್ನರನ್ನು ಮತಾಂತರಿಸಿದ, ಆ ವಂಶದವರು ಈಗಲೂ ವಿರಾಜಪೇಟೆಯಲ್ಲಿದ್ದಾರೆ. ಅಂತೆಯೇ ಸರ್ಕಾರದ ಅನುದಾನ ಪಡೆದು ರಂಗಾಯಣದಿಂದ ಟಿಪ್ಪು ಕಂಡ ಕನಸುಗಳು ನಾಟಕ ಪ್ರದರ್ಶಿಸಿದರು. ಅದಕ್ಕಾಗಿ ಈಗ ನಾನು ಟಿಪ್ಪುವಿನ ನಿಜ ಕನಸುಗಳು ನಾಟಕ ರಚಿಸಿದ್ದೇನೆ. ಇದೇ ತಿಂಗಳ 20ರಂದು ಅದು ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಅಯೋಧ್ಯಾ ಪ್ರಕಾಶನ ಶಶಾಂಕ್ ಭಟ್ ಇದ್ದರು.