

ಅರಸೀಕೆರೆ: ಸರ್ಕಾರಗಳು ಮತಾಂತರಕ್ಕೆ ಕಡಿವಾಣ ಹಾಕದಿದ್ದರೆ ಅಪಾಯ ನಿಶ್ಚಿತ ಎಂದು ಆರ್‌ಎಸ್‌ಎಸ್ ಪ್ರಾಂತ ಕಾರ್ಯಕಾರಿಣಿ ಆಮಂತ್ರಿತ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.
ನಗರದ ವಾಚನಾಲಯ ರಸ್ತೆಯಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಸಂಘಟನೆ ವತಿಯಿಂದ ಹನುಮ ಉತ್ಸವ ನಿಮಿತ್ತ ಸುನೀಲ್‌ಸಿಂಹ ವೇದಿಕೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸನಾತನ ಸಂಸ್ಕೃತಿ ಹಾಗೂ ಪರಂಪರೆ ಹೊಂದಿರುವ ಭವ್ಯ ದೇಶ ನಮ್ಮದಾಗಿದೆ. ಸುಮಾರು 750 ವರ್ಷ ಮುಸ್ಲಿಮರು, 250 ವರ್ಷ ಬ್ರಿಟಿಷರು ಈ ದೇಶವನ್ನಾಳಿದರು. ಸಂಪತ್ತಿನ ಜತೆಯಲ್ಲಿ ಅಧಿಕಾರವನ್ನು ಹಿಡಿದು ದೇಶವನ್ನು ಲೂಟಿ ಮಾಡುವ ಜತೆಗೆ ಮತಾಂತರಕ್ಕೆ ಮುನ್ನುಡಿ ಬರೆದಿದ್ದರು. ಆದರೆ, ಇಂತಹ ಷಡ್ಯಂತ್ರ ಇಂದಿಗೂ ನಡೆಯುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಮತಾಂತರ, ಲವ್ ಜಿಹಾದ್ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿರುವುದು ದೇಶ ವಿರೋಧಿ ಕೆಲಸವಾಗಿದ್ದು ತಕ್ಕ ಪಾಠ ಕಲಿಸುವ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ತಾಕೀತು ಮಾಡಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೋದಲ್ಲಿ ಬಂದಲ್ಲಿ ಸಾವರ್ಕರ್ ಅವರ ಹೆಸರನ್ನು ಪ್ರಸ್ತಾಪಿಸಿ ಮನಬಂದಂತೆ ಟೀಕಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದಲೇ ವಿಧಾನಸೌಧದಲ್ಲಿ ಸಾಮಾಜಿಕ ಬದಲಾವಣೆಯ ಹರಿಕಾರ ಸಾವರ್ಕರ್ ಪೋಟೋ ಹಾಕಲಾಗಿದೆ. ಆರ್‌ಎಸ್‌ಎಸ್ ಯಾರ ದ್ವೇಷಿಯಲ್ಲ. ಆದರೆ, ದೇಶದ ಅಭಿವೃದ್ಧಿಯ ಚಿಂತನೆ ಹೊಂದಿದೆ ಎಂದು ಪ್ರತಿಪಾದಿಸಿದರು.
ಮಾಲೇಕಲ್ಲು ತಿರುಪತಿ ಆಗಮಿಕ ರಾಮಪ್ರಸಾದ್ ಮಾತನಾಡಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಹಾಸನ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಲಯದಿಂದ ವೀರಾಂಜನೇಯಸ್ವಾಮಿ ಅದ್ದೂರಿ ಮೆರವಣಿಗೆ ನಡೆಯಿತು. ಅದ್ದೂರಿ ಮೆರವಣಿಗೆಗೆ ಡಿ.ಎಂ. ಕುರ್ಕೆ ಬೂದಿಹಾಳ್ ವಿರಕ್ತಮಠದ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಚಾಲನೆ ನೀಡಿದರು. ಬಜರಂಗದಳ ಅಧ್ಯಕ್ಷ ಸಂಪತ್‌ಕುಮಾರ್, ವಿಶ್ವಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್, ಜಿಲ್ಲಾ ಸಹ ಸಂಯೋಜಕ ಶರತ್, ಅರುಣ್‌ಕುಮಾರ್, ಅಪ್ಪು, ಮಂಜು ಇತರರಿದ್ದರು.