

ಹುಬ್ಬಳ್ಳಿ: ಹಿಂದುಗಳನ್ನು ಇಸ್ಲಾಂ ಧರ್ಮಕ್ಕೆ ಬಲವಂತದಿಂದ ಮತಾಂತರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆ ಅಂಗೀಕಾರ ಆಗಿದ್ದರೂ, ಬಲವಂತದಿಂದ ಮತಾಂತರ ಮಾಡುವ ಹುನ್ನಾರದ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಯುವಕ - ಯುವತಿಯರಿಗೆ ಆಸೆ, ಆಮೀಷವೊಡ್ಡಿ ಮತಾಂತರ ಮಾಡುತ್ತಿರುವ ಘಟನೆಗಳನ್ನು ಬೆಳಕಿಗೆ ಬರುತ್ತಿವೆ. ಈ ಘಟನೆಗಳ ಹಿಂದೆ ಇರುವವರನ್ನು ಪತ್ತೆ ಹಚ್ಚಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ, ಪ್ರಭು ನವಲಗುಂದಮಠ, ದತ್ತಮೂರ್ತಿ ಕುಲಕರ್ಣಿ, ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ತಿಪ್ಪಣ್ಣ ಮಜ್ಜಗಿ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಚಂದ್ರಶೇಖರ ಗೋಕಾಕ, ವಕ್ತಾರ ರವಿ ನಾಯಕ, ಬಸವರಾಜ ಅಮ್ಮಿನಬಾವಿ, ಕೃಷ್ಣ ಗಂಡಗಾಳೇಕರ, ಉಮೇಶ ದುಸಿ, ಮಹೇಂದ್ರ ಕೌತಾಳ, ಪ್ರಮಿಳಮ್ಮ ಕೋಟಾರಿ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.