ಮತದಾರರು ಜೆಡಿಎಸ್‌ಗೆ ಆಶೀರ್ವದಿಸಿ

04 krp 02
ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಮಂಜು ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮಡುವಿನಕೋಡಿ, ಐಚನಹಳ್ಳಿ ಮತ್ತು ಬಲ್ಲೇನಹಳ್ಳಿ ಗ್ರಾಮಗಳಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು.
Published on

ಕೆ.ಆರ್.ಪೇಟೆ: ಜೆಡಿಎಸ್ ಪಕ್ಷ ಕನ್ನಡಿಗರ ಪಕ್ಷ, ಕನ್ನಡ ನಾಡಿನ ಅಸ್ಮಿತೆಯನ್ನು ಕಾಪಾಡುವ ಹೆಮ್ಮೆಯ ಪಕ್ಷವಾಗಿದ್ದು ಕರುನಾಡಿನ ಪ್ರಗತಿಗೆ ಮುನ್ನುಡಿ ಬರೆಯಲು ಮುನ್ನುಗ್ಗುತ್ತಿರುವ ಜೆಡಿಎಸ್ ಪಕ್ಷಕ್ಕೆ ಕನ್ನಡಿಗರು ಆಶೀರ್ವಾದ ಮಾಡಬೇಕು ಎಂದು ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಮಂಜು ತಿಳಿಸಿದರು.

ಅವರು ತಾಲೂಕಿನ ಬೂಕನಕೆರೆ ಹೋಬಳಿಯ ಮಡುವಿನಕೋಡಿ, ಐಚನಹಳ್ಳಿ, ಮತ್ತು ಬಲ್ಲೇನಹಳ್ಳಿ ಗ್ರಾಮಗಳಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮತಯಾಚನೆ ಮಾತನಾಡಿದರು.

ರಾಜ್ಯದ ಜನರ ಕಲ್ಯಾಣಕ್ಕಾಗಿ, ರೈತರ, ಮಹಿಳೆಯರ, ದೀನದಲಿತರ, ಬಡವರ್ಗದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪಂಚರತ್ನ ಕಾರ್ಯಕ್ರಮ ರೂಪಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲೆಡೆ ಅಭೂತಪೂರ್ವ ಜನಬೆಂಬಲ ದೊರಕಿದೆ. ಕುಮಾರಣ್ಣನನ್ನು ಮುಖ್ಯಮಂತ್ರಿಯನ್ನಾಗಿ ನೋಡಲು ರಾಜ್ಯದ ಜನತೆ ಅಪೇಕ್ಷೆಪಟ್ಟಿದ್ದಾರೆ. ಇದರ ಪರಿಣಾಮವಾಗಿ ಜೆಡಿಎಸ್ ಪಕ್ಷಕ್ಕೆ ಜನಾಶೀರ್ವಾದ ಸಿಗುವ ಎಲ್ಲಾ ಲಕ್ಷಣಗಳು ದೊರಕಿವೆ ಎಂದರು.

ನಾನೊಬ್ಬ ರೈತನ ಮಗನಾಗಿದ್ದು ಜನಸಾಮಾನ್ಯರ ಬದುಕನ್ನು ಹತ್ತಿರದಿಂದ ನೋಡಿದ್ದೇನೆ. ಅವರ ಕಷ್ಟಸುಖಗಳಲ್ಲಿ ಭಾಗಿಯಾಗಿ ನಿಮ್ಮ ನೋವು, ನಲಿವುಗಳಲ್ಲಿ ಸ್ಪಂದಿಸುವ ಕೆಲಸ ಮಾಡುತ್ತೇನೆ. ತಿಂಗಳಿನ 25 ದಿನಗಳಲ್ಲಿ ನಿಮ್ಮೊಂದಿಗೆ ಇದ್ದು ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ನಿಮ್ಮೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತೇನೆ ಎಂದರು.

ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ಮಾತನಾಡಿ, ಕಳೆದ 3-4 ವರ್ಷದಿಂದ ತಾಲೂಕಿನಲ್ಲಿ ಇರುವ ನೂರಾರು ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೆ ಕಾಲಹರಣ ಮಾಡಿಕೊಂಡಿದ್ದ ಸಚಿವರು ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಳ್ಳಿಗಳನ್ನು ಸುತ್ತುತ್ತಿದ್ದಾರೆ. ಅಧಿಕಾರ ಇದ್ದಾಗ ಹಳ್ಳಿಗಳಲ್ಲಿನ ಜನರ ಕಷ್ಟಸುಖಗಳಲ್ಲಿ ಭಾಗಿಯಾಗದೆ ಬೆಂಗಳೂರು, ಮುಂಬೈ ಅಂತ ಕಾಲಾಹರಣ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ಉಪಾಧ್ಯಕ್ಷ ಸಂಗಾಪುರ ಪುಟ್ಟಸ್ವಾಮಿಗೌಡ, ಕಾರ್ಯಾದ್ಯಕ್ಷ ರಾಜೇಗೌಡ, ಟಿಎಪಿಸಿಎಂಎಸ್ ನಿರ್ದೇಶಕರಾದ ಬಲದೇವ್, ಮಂಜುನಾಥ್, ಬೂಕನಕೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ನಂದೀಶ್, ಜೆಡಿಎಸ್ ಮುಖಂಡರಾದ ಹುಲ್ಲೇಗೌಡ, ಪೂವನಹಳ್ಳಿ ರೇವಣ್ಣ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net