

ಅರಸೀಕೆರೆ: ಕ್ಷೇತ್ರದಲ್ಲಿ ಹದಿನೈದು ವರ್ಷದಿಂದ ನಡೆಯುತ್ತಿರುವ ರಾಜಕೀಯ ದುರಾಡಳಿತದ ಅಂತ್ಯ ಹತ್ತಿರವಾಗಿದ್ದು ಮತದಾರರು ಜಾಗರೂಕರಾಗಿರಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಹೇಳಿದರು.
ತಾಲೂಕಿನ ಬಾಗೇಶಪುರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಮಡಿಲಕ್ಕಿ ವಿತರಣೆ ಹಾಗೂ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಸಭೆ ಸಮಾರಂಭಗಳಲ್ಲಿ ಎಲ್ಲರ ರಾಜಕೀಯ ಹಿನ್ನಲೆ ಕೆದಕುವ ವ್ಯಕ್ತಿ ತಾನೇನೂ ಮಾಡಿದ್ದೇನೆಂದು ಎಲ್ಲಿಯೂ ಹೇಳಿಲ್ಲ.ಇಪ್ಪತ್ತು ವರ್ಷದ ಹಿಂದೆ ಬೆರಳೆಣಿಕೆ ತೆಂಗಿನ ಮರ ಹೊಂದಿದ್ದವರು ದಿಢೀರ್ ಶ್ರೀಮಂತನಾಗಲು ಹೇಗೆ ಸಾಧ್ಯ ಎನ್ನುವುದನ್ನು ಬಹಿರಂಗಪಡಿಸಬೇಕು. ಬಿಜೆಪಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾವಿರಾರು ಕೋಟಿ ರೂ.ಅನುದಾನ ಬಿಡಿಗಡೆಯಾಗಿದ್ದು ಕೆಲಸ ಹೇಗೆ ನಡೆದಿದೆ ಎಂದು ಪ್ರಶ್ನಿಸುವ ಮನೋಭಾವ ನಿಮ್ಮದಾಗಬೇಕು. ಆಗ ಮಾತ್ರವೇ ಗುಣಮಟ್ಟದ ಕೆಲಸಗಳು ನಡೆದಿವೆ ಎಂದು ಹೇಳಬಹುದು. ಆದರೆ ಕ್ಷೇತ್ರದಲ್ಲಿ ನಡೆದಿರುವ ಎಲ್ಲ ಕೆಲಸ ಕಾರ್ಯಗಳಲ್ಲಿ ಸರ್ಕಾರದ ಹಣ ದುರುಪಯೋಗವಾಗಿದೆ ಎನ್ನುವ ದೂರುಗಳು ಕೇಳಿಬರುತ್ತಿದ್ದು ಸಮಗ್ರ ತನಿಖೆ ನಡೆದಲ್ಲಿ ಎಲ್ಲವೂ ಬಯಲಾಗಲಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಬೃಹತ್ ಸಭೆಯಲ್ಲಿ ಸಂತೋಷ್ ವಾಗ್ದಾಳಿ ನಡೆಸಿದರು.
ಅರಸೀಕೆರೆ ವಿಧಾನಸಭಾ ಕ್ಷೇತ್ರದ 35 ಗ್ರಾಮ ಪಂಚಾಯಿತಿಗಳಲ್ಲಿ ಐದಾರು ತಿಂಗಳಿಗೊಮ್ಮೆ ಅಧಿಕಾರ ಹಂಚಿಕೆ ಹೆಸರನಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯುತ್ತಿರುವುದು ಯಾವ ಸೌಭಾಗ್ಯಕ್ಕೆಂದು ಈವರೆಗೂ ಅರ್ಥವಾಗಿಲ್ಲ. ಇಂತಹ ಬೆಳವಣಿಗೆಯಿಂದ ಅಭಿವೃದ್ಧಿ ಅಸಾಧ್ಯವೆನ್ನುವಂತಾಗಿದೆ.ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಕೆ.ಎಂ.ಶಿವಲಿಂಗೇಗೌಡ ಮಾತ್ರ ಹದಿನೈದು ವರ್ಷದಿಂದ ಶಾಸಕರಾಗಿದ್ದು ಅನ್ಯರಿಗೆ ಬಿಟ್ಟುಕೊಡುವ ಮನಸ್ಥಿತಿ ಹೊಂದಿಲ್ಲ. ಮೈಸೂರು ದಸಾರದಲ್ಲಿ ಪಾಲ್ಗೊಂಡು ಅಂಬಾರಿ ಹೊರುವ ಆನೆಗಳನ್ನು ವಿವಿಧ ಕಾರಣ ಮುಂದಿಟ್ಟು ಆಗಾಗ ಬದಲಾವಣೆ ಮಾಡುತ್ತಾರೆ ಎಂದ ಮೇಲೆ ಇಲ್ಲಿಯೂ ಬದಲಾವಣೆ ಬೇಕಲ್ಲವೇ ನೀವೆ ಹೇಳಿ ಎಂದು ಪ್ರಶ್ನಿಸುವ ಮೂಲಕ ಚಪ್ಪಾಳೆ ಗಿಟ್ಟಿಸಿದರಲ್ಲದೇ ನಿಮಗೂ ಕಾಲ ಕೂಡಿ ಬಂದಿದ್ದು ಮೂರು ಬಾರಿ ಅವರಿಗೆ ಅವಕಾಶ ನೀಡಿದ್ದೀರಿ, ನನಗೊಮ್ಮೆ ಆಶಿರ್ವದಿಸಿ ಎಂದು ಮನವಿ ಮಾಡಿದರು.
ಪ್ರಯೋಜನ ಪಡೆಯಿರಿ:
ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ರೈತ ಹಾಗೂ ಜನಪರ ಕೊಡುಗೆಗಳನ್ನು ನೀಡುತ್ತಿರುವುದು ಶ್ಲಾಘನೀಯ. ಅನ್ನದಾತನ ಹಿತ ಮನಗಂಡ ಉಭಯ ಸರ್ಕಾರಗಳು ಕೃಷಿಸಮ್ಮಾನ್ ಯೋಜನೆ ಮೂಲಕ ರೈತನ ಖಾತೆಗೆ ವಾರ್ಷಿಕ ಹತ್ತು ಸಾವಿರ ರೂ. ನಗದು ಜಮಾ ಮಾಡುತ್ತಿವೆ.ಸುಕನ್ಯಾ ಸಮೃದ್ಧಿ,ಮನೆ ಮನೆಗೆ ಗಂಗೆ, ಫಸಲ್ ಭಿಮಾ ಯೋಜನೆ, ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಭಾರತ್, ಹೆಣ್ಣುಮಕ್ಕಳ ಸ್ವಾವಲಂಬನೆಗಾಗಿ ಮುದ್ರಾ ಯೋಜನೆ,ಅಂಚೆ ಕಚೇರಿಯಲ್ಲಿ ವಾರ್ಷಿಕ 350 ರೂ. ಪಾವತಿಸಿದರೆ ಆಕಸ್ಮಿಕ ಅಪಘಾತ ಸಂಭವಿಸಿ ಸಾವನ್ನಪ್ಪಿರೆ 10 ಲಕ್ಷ ರೂ ಪರಿಹಾರ, ವಿದ್ಯಾನಿಧಿ ಸೇರಿ ಹಲವು ಜನಪರ ಕಾರ್ಯಕ್ರಮಗಳನ್ನು ಡಬಲ್ ಇಂಜಿನ್ ಸರ್ಕಾರ ನೀಡಿದ್ದು ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಒಬಿಸಿ ಮುಖಂಡ ವೈ.ಕೆ.ದೇವರಾಜ್ ಮಾತನಾಡಿ, ಯುವಕರು ಸಕ್ರಿಯ ರಾಜಕಾರಣಕ್ಕೆ ಬರಬೇಕು ಎನ್ನುವ ಹಿರಿಯರ ಆಶಯದಂತೆ ಎನ್.ಆರ್.ಸಂತೋಷ್ ಸಂಘಟನೆಯಲ್ಲಿ ತೊಡಗಿದ್ದು ನೀವೆಲ್ಲರೂ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು. ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಮಾತನಾಡಿ, ಶೋಷಿತ ಸಮುದಾಯದ ಜನರ ಪರ ಕಾಳಜಿ ಹೊಂದಿರುವುದರಿಂದಲೇ ನನಗೆ ನಗರಸಭೆ ಅಧ್ಯಕ್ಷ ಸ್ಥಾನ ದೊರೆಯಲು ಕಾರಣವಾಗಿದೆ. ಇದನ್ನು ಸಹಿಸದ ಶಾಸಕರು ಹಾಗೂ ಮತ್ತವರ ಬೆಂಬಲಿಗರು ಪ್ರತಿ ಬಾರಿಯೂ ನನ್ನನ್ನು ಕೆಳಗಿಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದರು.ಕುಣಘಟ್ಟಹಳ್ಳಿ ಮಂಜುನಾಥ್, ಮುಖಂಡರಾದ ರಾಮೇಗೌಡ,ನಂಜೇಗೌಡ,ನೀರಗುಂದ ಲೋಕೇಶ್, ಕಾಂತರಾಜ್, ಪ್ರವೀಣ್, ನಟರಾಜ್,ಗ್ರಾಪಂ ಸದಸ್ಯರಾದ ರಂಗನಾಥ್,ರಮೇಶ್, ಮಾಜಿ ಸದಸ್ಯೆ ಲಲಿತಮ್ಮ, ರಾಜೇಂದ್ರ, ಚಿಟ್ನಳ್ಳಿ ಲೋಕೇಶ್ ಇನ್ನತರರಿದ್ದರು. ಬಹಿರಂಗ ಸಭೆಗೂ ಮುನ್ನ ಬೈಕ್ ರ‌್ಯಾಲಿ ಮೂಲಕ ಎನ್.ಆರ್.ಸಂತೋಷ್ ಅವರನ್ನು ವೇದಿಕೆಗೆ ಕರೆತರಲಾಯಿತು. ಪತ್ನಿ ಜಾಹ್ನವಿ ಹಾಗೂ ಕುಟುಂಬ ಸದಸ್ಯರ ಜತೆಗೂಡಿ ಹೆಣ್ಣುಮಕ್ಕಳಿಗೆ ಬಾಗಿನ ಸಮರ್ಪಿಸಲಾಯಿತು.