ಮತದಾರರಿಗೆ ಜಾಗೃತಿ ಮೂಡಿಸಿ

3Manju10
ಬೆಳಗಾವಿ ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳ ತರಬೇತಿ ಕಾರ್ಯಾಗಾರ ಜರುಗಿತು. ಡಿಸಿ ನಿತೇಶ ಪಾಟೀಲ, ಸಿಇಒ ದರ್ಶನ ಎಚ್.ವಿ ಇತರರಿದ್ದರು.
Published on

ಬೆಳಗಾವಿ: ವಿಧಾನ ಪರಿಷತ್‌ನ ವಾಯವ್ಯ ಪದವೀಧರ ಮತ್ತು ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಮತದಾನ ದಿನ ಮೊಬೈಲ್, ಇಲೆಕ್ಟ್ರಾನಿಕ್ ವಸ್ತುಗಳನ್ನು ಮತಗಟ್ಟೆಯಲ್ಲಿ ನಿಷೇಧಿಸಿದೆ. ಈ ಕುರಿತು ಮತದಾರರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ ಪಾಟೀಲ ಸೂಚಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮತದಾನ ಮುಕ್ತಾಯದ ನಂತರ ದಾಖಲಾದ ಮತಗಳ ಲೆಕ್ಕ ತಯಾರಿಸಬೇಕು ಹಾಗೂ ಮತದಾನದ ಗೌಪ್ಯತೆ ಕಾಪಾಡಿ ಚುನಾವಣಾ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಮತದಾನದ ಗೌಪ್ಯತೆ ಕಾಪಾಡದ ಮತದಾರರ ಮತ ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಮತದಾನ ದಿನದಂದು ಮತ ಚಲಾಯಿಸಲು ಮತಗಟ್ಟೆ ಪ್ರವೇಶಕ್ಕೆ ಒಬ್ಬ ಮತದಾರನಿಗೆ ಮಾತ್ರ ಅವಕಾಶ ಇರಲಿದೆ. ಏಕಕಾಲದಲ್ಲಿ ಒಬ್ಬ ಮತದಾರ ಹೊರತುಪಡಿಸಿ ಯಾರಿಗೂ ಅವಕಾಶ ಇರುವುದಿಲ್ಲ. ಗುರುತಿನ ಚೀಟಿ ಪರಿಶೀಲಿಸಿ ಸರಿಯಾದ ವ್ಯಕ್ತಿ ಎಂದು ಖಾತ್ರಿಯಾದ ಬಳಿಕ ಮತದಾನಕ್ಕೆ ಅವಕಾಶ ಕಲ್ಪಿಸಬೇಕು ಎಂದು ತಿಲಿಸಿದರು.
ವಿಧಾನ ಪರಿಷತ್ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮತಗಟ್ಟೆಯಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನ ನಡೆಯುವಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಬ್ಯಾಲೆಟ್ ಬಾಕ್ಸ್ , ಬ್ಯಾಲೆಟ್ ಪೇಪರ್, ಚುನಾವಣೆ ಕರ್ತವ್ಯಕ್ಕೆ ನೀಡಿದ ಸಲಕರಣೆಗಳ ಕುರಿತು ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಸರಿಯಾದ ಸಮಯಕ್ಕೆ ಮತದಾನನಡೆಸಬೇಕು. ಚುನಾವಣಾ ಕರ್ತವ್ಯಕ್ಕೆ ನೀಡಿದ ಸಾಮಗ್ರಿಗಳನ್ನು ಪರಿಶೀಲನಾ ಪಟ್ಟಿಯ ಪ್ರಕಾರ ಸರಿಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಂಡು. ಕೋವಿಡ್-19ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಕುರುಡ, ದುರ್ಬಲ ಮತ್ತು ಅಂಕವಿಕಲ ಮತದಾರರಿಗೆ ಸಹಾಯಕರನ್ನು ಬಳಸಲು ಅವಕಾಶ ಕಲ್ಪಿಸಬಹುದು ಎಂದರು. ಜಿಪಂ ಸಿಇಒ ದರ್ಶನ ಎಚ್.ವಿ., ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ, ಬಿಮ್ಸ್ ಸಿಇಒ ಎಸ್. ಬಾನುಬಳ್ಳಾರಿ, ಎನ್.ವಿ.ಶಿರಗಾಂವಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net