ಮತದಾರರನ್ನು ಸೆಳೆಯಲು 63 ವಿಶೇಷ ಮತಗಟ್ಟೆ ಸ್ಥಾಪನೆ: ಬಿ.ಆರ್.ಪೂರ್ಣಿಮಾ

ಮತದಾರರನ್ನು ಸೆಳೆಯಲು 63 ವಿಶೇಷ ಮತಗಟ್ಟೆ ಸ್ಥಾಪನೆ: ಬಿ.ಆರ್.ಪೂರ್ಣಿಮಾ
Published on

ಹಾಸನ: ಲೋಕಸಭೆ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು 63 ವಿಶೇಷ ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಬಿ.ಆರ್.ಪೂರ್ಣಿಮಾ ಅವರು ಹೇಳಿದರು.
ಜಿಲ್ಲಾ ಪಂಚಾಯಿತಿ ಹೇಮಾವತಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 32 ಸಖಿ, 10 ಯುವ ಮತಗಟ್ಟೆ, 7 ವಿಕಲಚೇತನ ಸ್ನೇಹಿ ಮತಗಟ್ಟೆ, 6 ವಿಷಯಾಧಾರಿತ ಮತಗಟ್ಟೆ, 6 ಎತ್ನಿಕ್ (ಸ್ಥಳೀಯ ಸಂಪ್ರದಾಯ ಪ್ರತಿಬಿಂಬಿಸುವ) ಮತಗಟ್ಟೆ ತೆರೆಯಲಾಗಿದೆ. ಜಿಲ್ಲೆಯ ಎಲ್ಲಾ ಮತದಾರರಿಗೆ ವೋಟರ್ ಗೈಡ್ ಮತ್ತು ವೋಟರ್ ಸ್ಲಿಪ್ ತಲುಪಿಸಲು ಕ್ರಮ ವಹಿಸಲಾಗಿದೆ ಎಂದರು.
2019ರ ಚುನಾವಣೆಯಲ್ಲಿ ಶೇ. 77 ಮತದಾನವಾಗಿದೆ. ಜಿಲ್ಲೆಯ 190 ಮತಗಟ್ಟೆಗಳಲ್ಲಿ ರಾಷ್ಟ್ರೀಯ ಸರಾಸರಿ ಮತದಾನಕ್ಕಿಂತ ಕಡಿಮೆ ಹಕ್ಕು ಚಲಾವಣೆಯಾಗಿದೆ. ಶ್ರವಣಬೆಳಗೊಳ ಕ್ಷೇತ್ರದ 24, ಅರಸೀಕೆರೆ 20, ಬೇಲೂರು 15, ಹಾಸನ 109, ಹೊಳೆನರಸೀಪುರ 6, ಅರಕಲಗೂಡು 4 ಮತ್ತು ಸಕಲೇಶಪುರ ಕ್ಷೇತ್ರದಲ್ಲಿ 12 ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾಗಿದ್ದು, ಈ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಗಿದೆ. ಸಕಲೇಶಪುರ ಕ್ಷೇತ್ರದ 76, ಬೇಲೂರು 23, ಅರಕಲಗೂಡು ಕ್ಷೇತ್ರ ವ್ಯಾಪ್ತಿಯ 9 ಮತಗಟ್ಟೆಗಳಲ್ಲಿ ಆನೆ ಹಾವಳಿ ಭೀತಿಯಿದ್ದು, ಇಲ್ಲಿನ ಜನರಿಗೆ ಮತದಾನಕ್ಕೆ ಬರಲು ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 21043 ವಿವಿಧ ರೀತಿಯ ವಿಕಲಚೇತನ ಮತದಾರರಿದ್ದು, ಮತಗಟ್ಟೆಗಳಿಗೆ ತೆರಳಲು ವ್ಹೀಲ್‌ಚೇರ್, ರ‌್ಯಾಂಪ್, ರೈಲಿಂಗ್ಸ್, ಭೂತಗನ್ನಡಿ, ಬ್ರೈಲ್ ಬ್ಯಾಲೆಟ್ ಪೇಪರ್, ಸ್ವಯಂ ಸೇವಕರ ಸಹಾಯ, ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದು ಅರ್ಹರು ಮತದಾನದಿಂದ ಹೊರಗುಳಿಯಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net