

ಹೊಳೆನರಸೀಪುರ: ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದ್ದು, ಅದರ ಪ್ರಕಾರ 2004 ರಲ್ಲಿ ಜನಿಸಿದ ಮಾಹಿತಿ ಮೇಲೆ ಯುವ ಮತದಾರರ ಪಟ್ಟಿ ಸಿದ್ಧಪಡಿಸುವಂತೆ ಸೂಚನೆ ನೀಡಿದೆ ಎಂದು ತಹಸೀಲ್ದಾರ್ ಹಾಗೂ ತಾಲೂಕು ಚುನಾವಣಾ ಅಧಿಕಾರಿ ಕೆ.ಕೆ.ಕೃಷ್ಣಮೂರ್ತಿ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿರುವ ಅವರು, 2004 ರಲ್ಲಿ ಜನಿಸಿದವರ ವಿವರಣೆ ಮೇಲೆ 2009ಕ್ಕೆ ಶಾಲೆಗಳಿಗೆ ನೋಂದಣಿ ಆಗಿರುತ್ತಾರೆ. ತಾಲೂಕಿನಲ್ಲಿರುವ ಎಲ್ಲ ಶಾಲೆಗಳಿಂದ ಮಾಹಿತಿ ಪಡೆದು ಮತದಾರರ ಸೇರ್ಪಡೆಗೆ ಮುಂದಾಗುವಂತೆ ಸೂಚನೆ ನೀಡಿದ್ದು, ಅದರಂತೆ ಬೂತ್‌ಮಟ್ಟದ ಅಧಿಕಾರಿಗಳ ಸಭೆ ಕರೆದು ಪೂರ್ಣ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಕೇಂದ್ರ ಚುನಾವಣಾ ಆಯೋಗ ನೀಡಿರುವ ಮಾಹಿತಿ ಆಧರಿಸಿ ಒಂದು ಮೂಲದ ಪ್ರಕಾರ ಜಿಲ್ಲೆಯಲ್ಲಿ 50 ಸಾವಿರಕ್ಕೂ ಹೆಚ್ಚು ಯುವ ಮತದಾರರು ಇರಬೇಕಿದೆ. ಆದರೆ ಇಲ್ಲಿಯವರೆಗೆ ಕೇವಲ 15 ಸಾವಿರ ಯುವ ಮತದಾರರು ಸೇರ್ಪಡೆ ಆಗಿದ್ದಾರೆ. ಉಳಿದ 35 ಯುವ ಮತದಾರರನ್ನು ಕಂಡುಹಿಡಿದು ಅವರ ಹೆಸರು ನೋಂದಣಿ ಮಾಡಿಸಲು ಜ. 14 ರವರೆಗೆ ಅವಕಾಶ ನೀಡಿದ್ದಾರೆ.
ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಸಭೆ ನಡೆಸಿ ಜಿಲ್ಲೆಯ ಎಲ್ಲ ತಾಲೂಕು ತಹಸೀಲ್ದಾರ್‌ಗೆ ಮಾಹಿತಿ ನೀಡಿ ಕೈಬಿಟ್ಟು ಹೋಗಿರುವ 35 ಸಾವಿರ ಯುವ ಮತದಾರರನ್ನು ಕಂಡುಹಿಡಿದು ನೋಂದಣಿ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದರು.
ಬೂತ್ ಮಟ್ಟದ ಅಧಿಕಾರಿಗಳು ತಮ್ಮಲ್ಲಿಗೆ ಬಂದಾಗ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡುವುದರ ಜತೆಗೆ ಕೈಬಿಟ್ಟಿರುವ ಯುವ ಮತದಾರರ ಸೇರ್ಪಡೆ ಮಾಡುವಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು.
ನೂತನವಾಗಿ ಸೇರ್ಪಡೆ ಆಗುವ ಯುವ ಮತದಾರರ ಪಟ್ಟಿಯನ್ನು ಜ. 23ರ ಒಳಗಾಗಿ ನೋಂದಣಿ ಮಾಡಿಕೊಂಡು ಅದನ್ನು ಗರುಡಾ ಆ್ಯಪ್‌ಗೆ ಸೇರ್ಪಡೆ ಮಾಡಲಾಗುವುದೆಂದು ಮಾಹಿತಿ ನೀಡಿದರು.