

ಅರಕಲಗೂಡು: ಜಿಲ್ಲೆಯಲ್ಲಿ 14.38 ಲಕ್ಷ ಮತದಾರರಿದ್ದು, ಅರಕಲಗೂಡು ತಾಲೂಕಿನಲ್ಲಿ 2.26 ಲಕ್ಷ ಮತದಾರರಿದ್ದಾರೆ. ತಾಲೂಕಲ್ಲಿ ಈ ವರ್ಷ 4,700 ಮತದಾರರು ಸೇರ್ಪಡೆಯಾಗಿದ್ದು, 2,300 ಅರ್ಜಿ ಸ್ವೀಕೃತವಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ತಿಳಿಸಿದರು.
ತಾಲೂಕಿನ ವಡ್ಡರಹಳ್ಳಿ, ಅಂಕನಾಯಕನಹಳ್ಳಿ, ಪೇಟೆ ಮಾಚಗೌಡನಹಳ್ಳಿ, ಪಟ್ಟಣದ ಕೋಟೆ, ಕೆಇಬಿ ರಸ್ತೆ ಮತ್ತಿತರೆ ವಾರ್ಡ್‌ಗಳಿಗೆ ಗುರುವಾರ ಭೇಟಿ ನೀಡಿ ಬಿಎಲ್‌ಒಗಳಿಂದ ಹೊಸದಾಗಿ ಮತದಾರರ ಪಟ್ಟಿ ಸೇರ್ಪಡೆ, ಬಿಡತಕ್ಕವುಗಳ ಬಗ್ಗೆ ಪರಿಶೀಲಿಸಿ, ಮಾಹಿತಿ ಪಡೆದುಕೊಂಡರು. ಪ್ರಗತಿ ಸಾಧಿಸದ ಕೆಲ ಬಿಎಲ್‌ಒ ಗಳಿಗೆ ಬಹುಬೇಗ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವಂತೆ ಸೂಚಿಸಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಬಿಎಲ್‌ಒ ಗಳಿಂದ ಮನೆ ಮನೆ ಸರ್ವೇ ಮಾಡಿಸುತ್ತಿದ್ದೇವೆ. ಈ ಹಿಂದೆ ಚನ್ನರಾಯಪಟ್ಟಣದಲ್ಲಿ ಮನೆ ಮನೆ ಸರ್ವೇ ಆಗಿತ್ತು. ಈ ಬಾರಿ ಎಲ್ಲ ತಾಲೂಕಿನಲ್ಲೂ ಬಿಎಲ್‌ಒ ಗಳು ಮನೆ ಮನೆಗೆ ಭೇಟಿ ನೀಡಿ ಹೊಸದಾಗಿ ಮತದಾರರ ಸೇರ್ಪಡೆ ಮತ್ತು ಬಿಡತಕ್ಕವುಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದರು.
ಆಧಾರ್ ನೋಂದಣಿ ಕಡ್ಡಾಯವಿಲ್ಲ. ಹಾಗಾಗಿ ಜನರನ್ನು ಬಲವಂತ ಮಾಡಲು ಸಾಧ್ಯವಿಲ್ಲ. ನೋಂದಣಿ ಮಾಡಿಸಿದರೆ ಒಳ್ಳೆಯದು, ಬೇರೊಂದು ಸ್ಥಳಕ್ಕೆ ಹೋದಾಗ ಸೇರ್ಪಡೆ ಮಾಡಿಸಲು ಅನುಕೂಲವಾಗುತ್ತದೆ ಎಂದ ಅವರು, ಕೆಲ ಬಿಎಲ್‌ಒ ಗಳು ಹೆಚ್ಚು ಪ್ರಗತಿ ಸಾಧಿಸಿದರೆ, ಕೆಲವರು ನಿರೀಕ್ಷಿತ ಸಾಧನೆ ಮಾಡಿಲ್ಲ. ಸಾಕಷ್ಟು ಕಡೆ ಪಟ್ಟಣದಲ್ಲಿ ಪ್ರಗತಿ ಕಡಿಮೆ ಇದೆ. ಮುಂದಿನ ದಿನದಲ್ಲಿ ಜನರಿಗೆ ತಿಳಿವಳಿಕೆ ನೀಡಿ ಪ್ರಗತಿ ಸಾಧಿಸಲಾಗುವುದು ಎಂದರು.
ಚುನಾವಣಾ ಸಂದರ್ಭದಲ್ಲಿ ಅನುಕೂಲಕ್ಕೆ ತಕ್ಕಂತೆ ಮತದಾರ ಗುರುತಿನ ಚೀಟಿ ಬದಲಾವಣೆಯಾಗುತ್ತಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಡಿಸಿ ಪ್ರತಿಕ್ರಿಯಿಸಿ, 2 ಕಡೆ ಮತದಾರ ಗುರುತಿನ ಚೀಟಿ ಹೊಂದಿರುವುದು ನನ್ನ ಗಮನಕ್ಕೆ ತಂದರೆ ಪರಿಶೀಲಿಸಲಾಗುವುದು ಎಂದರು.
ಪಟ್ಟಣದ ಸರ್ಕಾರಿ ಉಗ್ರಾಣದಲ್ಲಿ 222 ಚೀಲ ಪಡಿತರ ರಾಗಿ ಕಳ್ಳಸಾಗಣಿಕೆಯಾಗಿದ್ದು, ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗೆ ಡಿಸಿ ಪ್ರತಿಕ್ರಿಯಿಸಿ, ಇದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ತಹಸೀಲ್ದಾರ್, ಆಹಾರ ಡಿಡಿ ಅವರೊಂದಿಗೆ ಮಾತನಾಡಿ ಪರಿಶೀಲನೆ ಮಾಡುತ್ತೇನೆ ಎಂದರು. ಪಟ್ಟಣದಲ್ಲಿ ಅನಧಿಕೃತ ಕ್ಲಿನಿಕ್ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ತಂಡ ಪ್ರತಿ ತಿಂಗಳು ಪರಿಶೀಲಿಸಿದ್ದೆವೆಂದು ವರದಿ ನೀಡುತ್ತಿದ್ದಾರೆ. ಅನಧಿಕೃತ ಕ್ಲಿನಿಕ್ ಬಗ್ಗೆ ದೂರು ನೀಡಿದರೆ ಪರಿಶೀಲಿಸಲಾಗುವುದು ಎಂದರು. ತಹಸೀಲ್ದಾರ್ ಶ್ರೀನಿವಾಸ್, ಸಿಬ್ಬಂದಿ ಇದ್ದರು.