

ಚಿತ್ರದುರ್ಗ: ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿಗೆ ಹೆಸರನ್ನು ನೋಂದಾಯಿಸಲು ವರ್ಷಕ್ಕೆ ನಾಲ್ಕು ಅರ್ಹತಾ ದಿನಾಂಕಗಳನ್ನು ನೀಡಿ, ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಮಾನ್ಯತೆ ಹೊಂದಿದ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದರು.
ಜನವರಿ 1, ಏಪ್ರಿಲ್ 1, ಜುಲೈ 1, ಅಕ್ಟೋಬರ್ 1ಕ್ಕೆ 18 ವರ್ಷ ತುಂಬಿದವರು, ಅರ್ಹರು, ಈವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಲ್ಲದವರು ಭಾವಚಿತ್ರದೊಂದಿಗೆ ನಮೂನೆ-6ರ ಮೂಲಕ ನೋಂದಾಯಿಸಬಹುದು. ಇನ್ನೂ ಹೆಸರು ಕೈಬಿಟ್ಟು ಹೋಗಿದ್ದರೆ, ಆಕ್ಷೇಪಣೆಗಾಗಿ ನಮೂನೆ-7, ತಿದ್ದುಪಡಿ ಹಾಗೂ ವರ್ಗಾಯಿಸಬೇಕಿದ್ದಲ್ಲಿ ನಮೂನೆ-8ರಲ್ಲಿ ಅರ್ಜಿ ಸಲ್ಲಿಸಬಹುದು ಎಂದರು.
ಅರ್ಹರು ತಪ್ಪದೇ ನಿಗದಿತ ನಮೂನೆಗಳಲ್ಲಿ ತಮ್ಮ ಮತದಾನ ಕೇಂದ್ರಗಳ ನಿರ್ಧಿಷ್ಠಾಧಿಕಾರಿ, ಮತಗಟ್ಟೆ ಅಧಿಕಾರಿಗೆ ಅರ್ಜಿ ಭರ್ತಿ ಮಾಡಿ ಸಲ್ಲಿಸಬಹುದು. ಅಲ್ಲದೆ, ತಾಲೂಕು ಕಚೇರಿ, ಉಪವಿಭಾಗಾಧಿಕಾರಿ ಕಾರ್ಯಾಲಯದಲ್ಲೂ ನೀಡಿ ಸ್ವೀಕೃತಿ ಪಡೆಯಬಹುದು. ಎಪಿಕ್ ಕಾರ್ಡ್ ಬದಲಿಸಲು, ಅಂಗವಿಕಲ ಮತದಾರರನ್ನು ಗುರುತಿಸಲು ಭಾವಚಿತ್ರ ಸಮೇತ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.
2025ರ ಜ. 6ರಂದು ಅಂತಿಮ ಮತದಾರರ ಪಟ್ಟಿಯನ್ನು ಮತಗಟ್ಟೆ ಕೇಂದ್ರ, ಗ್ರಾಪಂ ಕಚೇರಿ, ನಗರಸಭೆ, ಪುರಸಭೆ ಹಾಗೂ ಪಪಂ, ತಾಲೂಕು ಕಚೇರಿ, ಉಪವಿಭಾಗಾಧಿಕಾರಿ ಕಚೇರಿ ಹಾಗೂ www.ceokarnataka.kar.nic.in, https://chitradurga.nic.in ವೆಬ್‌ಸೈಟ್‌ನಲ್ಲಿ ಪರಿಶೀಲಿಸಿಕೊಳ್ಳಬಹುದು. ಒಂದು ವೇಳೆ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿ ಹಾಕಬಹುದು. ವೋಟರ್ ಹೆಲ್ಪ್‌ಲೈನ್‌ನಲ್ಲಿ ಆನ್‌ಲೈನ್ ಮೂಲಕವೂ ಸಲ್ಲಿಸಬಹುದು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರದ ಎಲ್ಲ ಮತಗಟ್ಟೆಗಳಲ್ಲಿ ಮತಗಟ್ಟೆ ಏಜೆಂಟ್‌ರನ್ನು ಪಕ್ಷವಾರು ನೇಮಕಾತಿ ಮಾಡಬೇಕು. ಈ ಮಾಹಿತಿಯನ್ನು ಮತಗಟ್ಟೆವಾರು ಸಲ್ಲಿಸುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಿದರು.
ಉಪವಿಭಾಗಾಧಿಕಾರಿ ಮಹಬೂಬ್ ಜಿಲಾನಿ ಖುರೇಷಿ, ಚುನಾವಣಾ ತಹಸೀಲ್ದಾರ್ ಮಲ್ಲಿಕಾರ್ಜುನ ನಾಯಕ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಟಿ.ಯಶವಂತ್‌ಕುಮಾರ್, ಡಿ.ಗೋಪಾಲಸ್ವಾಮಿ ನಾಯಕ, ಡಿ.ಎನ್.ಮೈಲಾರಪ್ಪ, ಸಿ.ಜೆ.ನಾಸಿರುದ್ದೀನ್, ಸಿ.ಕೆ.ಗೌಸ್‌ಪೀರ್ ಇತರರಿದ್ದರು.