ಚಾಮರಾಜನಗರ: ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಾದ ಹನೂರು, ಕೊಳ್ಳೇಗಾಲ, ಚಾಮರಾಜನಗರ ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ 983 ಮತಗಟ್ಟೆಗಳ ಮತದಾರರ ಪಟ್ಟಿ ತಯಾರಿಕೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಂ ಸಂಖ್ಯೆ 08226-223160 ಗೆ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು, ತೆಗೆದುಹಾಕಲು ಹಾಗೂ ತಿದ್ದುಪಡಿ ಮಾಡುವ ಸಂಬಂಧ ನಿಗದಿತ ನಮೂನೆಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ವೋಟರ್ ಹೆಲ್ಪ್ ಲೈನ್ ಆಪ್ (ಮೊಬೈಲ್ ಆಪ್), ಎನ್‍ವಿಎಸ್‍ಪಿ ಪೋರ್ಟಲ್ ಮತ್ತು ಬಿಎಲ್.ಒ ಆಪ್ (ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ನೀಡಲಾಗಿರುವ ಆಪ್) ಬಳಸಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ವಯಸ್ಸು, ವಾಸಸ್ಥಳ ದಾಖಲಾತಿ ಹಾಗೂ ಇತ್ತೀಚಿನ ಭಾವಚಿತ್ರ ಸಲ್ಲಿಸಬೇಕು. ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮಾಡಲು ವಯಸ್ಸು, ವಾಸಸ್ಥಳ ತಿದ್ದುಪಡಿ, ಭಾವಚಿತ್ರ ತಿದ್ದುಪಡಿ ಹಾಗೂ ದೂರವಾಣಿ ಸಂಖ್ಯೆಗಳ ತಿದ್ದುಪಡಿಯಿದ್ದಲ್ಲಿ ಮೊಬೈಲ್ ಸಂಖ್ಯೆಗಳ ವಿವರವನ್ನು ಸ್ಪಷ್ಟವಾಗಿ ನಮೂದಿಸಬೇಕು. ಮತದಾರರ ಪಟ್ಟಿಯಿಂದ ತೆಗೆದುಹಾಕಲು ಮತದಾರರು ಮರಣ ಹೊಂದಿದ್ದಲ್ಲಿ ಮರಣ ಪ್ರಮಾಣ ಪತ್ರ ಹಾಗೂ ಅರ್ಜಿದಾರರ ದಾಖಲಾತಿಗಳೊಂದಿಗೆ ಸ್ಪಷ್ಟವಾಗಿ ಮಾಹಿತಿಯನ್ನು ನಮೂದಿಸಬೇಕು.
ಅಗತ್ಯ ದಾಖಲಾತಿಗಳೊಂದಿಗೆ ಮೊಬೈಲ್ ಅಪ್ ಅಥವಾ ಆನ್‍ಲೈನ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು. ತಪ್ಪಿದಲ್ಲಿ ಆಯಾ ಮತಗಟ್ಟೆಯ ಮತಗಟ್ಟೆ ಮಟ್ಟದ ಅಧಿಕಾರಿಗೆ ಅಗತ್ಯ ದಾಖಲಾತಿಗಳನ್ನು ನೀಡಿ, ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸದರಿ ಅರ್ಜಿಗಳ ಮಾಹಿತಿಯನ್ನು ಆನ್‍ಲೈನ್ ಪೋರ್ಟಲ್ ಮೂಲಕ ತಿಳಿದುಕೊಳ್ಳಬಹುದು. ಇನ್ನೂ ಹೆಚ್ಚಿನ ಮಾಹಿತಿ ಅವಶ್ಯಕತೆಯಿದ್ದಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಂ ದೂ.ಸಂ 08226-223160 ಸಂಪರ್ಕಿಸಿ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.