

ಹಾಸನ: ಮತದಾರರ ಪಟ್ಟಿ, ಮತಗಟ್ಟೆ, ಚುನಾವಣೆಗಳು ಹಾಗೂ ಚುನಾವಣಾ ಕಾನೂನುಗಳ ಕುರಿತು ಯಾವುದೇ ದೂರು, ಆಕ್ಷೇಪಣೆ ಹಾಗೂ ಸಲಹೆಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಿ. ಸತ್ಯಭಾಮಾ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ನಮ್ಮ ಜಿಲ್ಲೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ವಿಚಾರದಲ್ಲಿಯೂ ಪಾರದರ್ಶಕವಾಗಿ ನಡೆಯುತ್ತಿದ್ದು, ಯಾವುದೇ ದೂರುಗಳು, ಸಲಹೆ ಸೂಚನೆಗಳು ನೀಡಿದಲ್ಲಿ ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ವತಿಯಿಂದ ಬೂತ್ ಮಟ್ಟದ ಏಜೆಂಟ್‌ಗಳನ್ನು ನಿಯೋಜಿಸುವಂತೆ ತಿಳಿಸಿದರು.
ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ. ಬೂತ್ ಮಟ್ಟದ ಅಧಿಕಾರಿಗಳ ಕಾರ್ಯವನ್ನು ಮೇಲ್ವಿಚಾರಣೆ ಮಾಡಲು ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳನ್ನು ಬೂತ್ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ವಿಧಾನಸಭಾ, ಲೋಕಸಭಾ ಮತ್ತು ವಿಧಾನ ಪರಿಷತ್ ಚುನಾವಣೆಯನ್ನು ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಕೈ ಬಿಡುವುದು ಮತ್ತು ತಿದ್ದುಪಡಿ, ವರ್ಗಾವಣೆ ಕುರಿತು ಚಾಲ್ತಿಯಲ್ಲಿರುವ ಪ್ರಜಾ ಪ್ರತಿನಿಧಿ ಕಾಯ್ದೆ 1950, ಪ್ರಜಾ ಪ್ರತಿನಿಧಿ ಕಾಯ್ದೆ 1951, ಮತದಾರರ ನೋಂದಣಿ ನಿಯಮಗಳು 1960, ಚುನಾವಣೆಗಳನ್ನು ನಡೆಸುವ ನಿಯಮಗಳು 1961 ಮತ್ತು ಮತದಾರರ ಪಟ್ಟಿಯ ಕೈಪಿಡಿ ಅನ್ವಯ ಮಾಡಲಾಗುವುದು ಎಂದು ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಹೇಳಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ನಿರಂತರ ಪರಿಷ್ಕರಣೆ ಹಾಗೂ ಪ್ರತಿ ವರ್ಷ ಅಕ್ಟೋಬರ್ - ಡಿಸೆಂಬರ್ ತಿಂಗಳಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಕೈಗೊಳ್ಳಲಾಗುವುದು. ನಿರಂತರ ಪರಿಷ್ಕರಣೆ ಅವಧಿಯಲ್ಲಿ ಮನೆ-ಮನೆ ಸಮೀಕ್ಷೆಯನ್ನು ಸಹ ನಡೆಸಲಾಗುವುದು ಎಂದರು.
ಮತದಾರರ ಪಟ್ಟಿ ಪರಿಷ್ಕರಣೆಯನ್ನು 1ನೇ ಜನವರಿ, 1ನೇ ಏಪ್ರಿಲ್, 1ನೇ ಜುಲೈ ಮತ್ತು 1ನೇ ಅಕ್ಟೋಬರ್ ಹೀಗೆ 4 ಅರ್ಹತಾ ದಿನಾಂಕವಾಗಿ ಇಟ್ಟುಕೊಂಡು ನಡೆಸಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಜ.6ರಂದು ಪ್ರಕಟಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯಂತೆ ಪುರುಷರು 7,63,676 ಹಾಗೂ ಮಹಿಳೆಯರು 7,74,175 ಮತ್ತು ಇತರರು 37 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 15,37,888 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ನಮೂನೆ-6ರಲ್ಲಿ, ಮರಣ, ಸ್ಥಳಾಂತರ, ಪುನರಾವರ್ತನೆ ಆಗಿದ್ದಲ್ಲಿ ಹೆಸರುಗಳನ್ನು ಕೈಬಿಡಲು ನಮೂನೆ-7ರಲ್ಲಿ, ಮತದಾರರ ಗುರುತಿನ ಚೀಟಿಯಲ್ಲಿ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿಗಾಗಿ, ಹೆಸರು ವರ್ಗಾವಣೆಗಾಗಿ ನಮೂನೆ-8ರಲ್ಲಿ, ಅನಿವಾಸಿ ಭಾರತೀಯರು ಮತದಾರರು ಪಟ್ಟಿಗೆ ಹೆಸರು ಸೇರಿಸಲು ನಮೂನೆ-6ಎ ರಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನಮೂನೆ-6, 6ಎ, 7 ಮತ್ತು 8ರ ಅರ್ಜಿಗಳನ್ನು ಭಾರತ ಚುನಾವಣಾ ಆಯೋಗವು ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಷನ್ ಮತದಾರರ ಸಹಾಯವಾಣಿ ಆಪ್ ಹಾಗೂ ಆನ್‌ಲೈನ್‌ನಲ್ಲಿ ನೇರವಾಗಿ ಸಲ್ಲಿಸಬಹುದಾಗಿದೆ ಎಂದರು.
ಆಯೋಗವು ಪ್ರತಿ 800 ರಿಂದ 1200 ಮತದಾರರಿಗೆ ಪ್ರತ್ಯೇಕ ಮತಗಟ್ಟೆಯನ್ನು ಸ್ಥಾಪಿಸುವುದು, ಮತದಾರರು ವಾಸಿಸುವ ಸ್ಥಳದಿಂದ ಮತಗಟ್ಟೆ ತಲುಪಲು ಗರಿಷ್ಠ 2 ಕಿ.ಮೀ. ಮೀರದಂತೆ ಇರುಬೇಕು ಎಂಬುದಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 1968 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸ್ಥಾಪಿಸಲಾಗಿರುವ ಎಲ್ಲ ಮತಗಟ್ಟೆಗಳಲ್ಲಿ ಕನಿಷ್ಠವಾಗಿ ನೀಡಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಜಿಲ್ಲೆಯಲ್ಲಿ ಸ್ಥಾಪಿಸಿರುವ ಎಲ್ಲ ಮತಗಟ್ಟೆಗಳು ನೆಲ ಮಹಡಿಯಲ್ಲಿಯೇ ಇವೆ. ನಗರ ಪ್ರದೇಶದಲ್ಲಿ ಹೆಚ್ಚಿನ ಜನ ಸಂದಣಿಯಾಗದೆ ಗುಂಪು ಮತಗಟ್ಟೆಗಳನ್ನು ವಿಂಗಡಿಸಲಾಗಿದ್ದು, ಮತದಾನ ಪ್ರಕ್ರಿಯೆಗೆ ತೊಂದರೆಯಾಗದಂತೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು, ಮುಂಜಾಗ್ರತಾ ಕ್ರಮಗಳ ಕೈಗೊಳ್ಳಲಾಗುವುದು ಎಂದರು.
ಮತದಾರರ ಪಟ್ಟಿಯನ್ನು ನಮೂದುಗಳ ಕುರಿತು ಮತದಾರರ ನೋಂದಣಾಧಿಕಾರಿಗಳ ಆದೇಶದ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಪ್ರಜಾ ಪ್ರತಿನಿಧಿ ಕಾಯ್ದೆ 1950 ರ ಸೆಕ್ಷನ್ 24(ಎ) ರಂತೆ ಮೊದಲನೇ ಮೇಲ್ಮನವಿಯನ್ನು ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಚುನಾವಣೆ ತಹಸೀಲ್ದಾರ್ ಪಿ.ಎಸ್ ಕುಂಬಾರ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.