

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಜು.21 ರಿಂದ ಸೆ.29 ರವರೆಗೆ ಮತದಾರರ ಪಟ್ಟಿ ಪೂರ್ವ ಪರಿಷ್ಕರಣೆ ಚಟುವಟಿಕೆ ಕೈಗೊಳ್ಳಲಾಗುತ್ತಿದೆ.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಮನೆ ಮನೆ ಸಮೀಕ್ಷೆ, ಮತಗಟ್ಟೆಗಳ ಮರು ವಿಂಗಡಣೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನೇತೃತ್ವದಲ್ಲಿ ರಾಜಕೀಯ ಮುಖಂಡರೊಂದಿಗೆ ಚರ್ಚಿಸಲಾಯಿತು. ಸಲಹೆಗಳನ್ನು ಸ್ವೀಕರಿಸಲಾಯಿತು.
18 ವರ್ಷದ ಯುವ ಜನರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ 6, ಆಕ್ಷೇಪಣೆ ಮತ್ತು ಹೆಸರು ತೆಗೆದು ಹಾಕಲು ನಮೂನೆ-7, ತಿದ್ದುಪಡಿ ಮತ್ತು ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ವರ್ಗಾವಣೆ, ತಿದ್ದುಪಡಿಗೆ ಪರಿಷ್ಕೃತ ನಮೂನೆ-8 ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಮತದಾರರ ಪಟ್ಟಿಯಲ್ಲಿನ ಮತದಾರರನ್ನು ದೃಢೀಕರಣಕ್ಕೆ ಹೊಸದಾಗಿ ನಮೂನೆ 6ಬಿ ಅರ್ಜಿ ಸಲ್ಲಿಕೆಯ ಅವಕಾಶ ಇದೆ. ನೋಂದಾಯಿತರು ಸ್ವಯಂಪ್ರೇರಿತರಾಗಿ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬಹುದು ಇಲ್ಲವೇ ಚುನಾವಣಾ ಆಯೋಗವು ನಿಗದಿಪಡಿಸಿದ 11 ಅಧಿಕೃತ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಒದಗಿಸಬಹುದಾಗಿದೆ.
ಜು.21 ರಿಂದ ಮನೆ-ಮನೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಇದರ ಅಭಿಯಾನದಲ್ಲಿ ಮತಗಟ್ಟೆ ಅಧಿಕಾರಿಗಳು ಆ.21 ರವರೆಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಇನ್ನು ಒಂದು ಮತಗಟ್ಟೆಯಲ್ಲಿ 1500 ಕ್ಕಿಂತ ಹೆಚ್ಚು ಮತದಾರರಿದ್ದಲ್ಲಿ ವಿಭಜಿಸಿ, ಹೊಸ ಮತಗಟ್ಟೆ ಸ್ಥಾಪಿಸಲಾಗುತ್ತದೆ.
ಅ.17 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಿದ್ದು ನ.30 ರವರೆಗೆ ಹೆಸರು ಸೇರ್ಪಡೆ ಮತ್ತು ತೆಗೆದು ಹಾಕಲು ಆಕ್ಷೇಪಣೆ ಸಲ್ಲಿಸಬಹುದು. ಡಿ.26 ರೊಳಗೆ ಅರ್ಜಿಗಳನ್ನು ಇತ್ಯರ್ಥಪಡಿಸಲಿದ್ದು 2024 ನೇ ಸಾಲಿನ ಜ.5 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಪ್ರಜಾ ಪ್ರತಿನಿಧಿ ಕಾಯ್ದೆ-1950ರ ಪ್ರಕರಣ 14(ಬಿ) ಮತ್ತು ಮತದಾರರ ನೋಂದಣಿ ನಿಯಮಗಳು 1960 ರಲ್ಲಿ ಸೂಕ್ತ ತಿದ್ದುಪಡಿ ತರಲಾಗಿದೆ. ಅದರಂತೆ, ಜ.1 ರ ಅರ್ಹತಾ ದಿನಾಂಕದ ಜತೆಗೆ ಪ್ರತಿ ವರ್ಷ ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ 1 ರಂತೆ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಮುಂದೆ ಮತದಾರರ ಪಟ್ಟ್ಟಿಯನ್ನು ಪ್ರತಿ ತ್ರೆಮಾಸಿಕದಲ್ಲಿ ಪರಿಷ್ಕರಿಸಲಾಗುತ್ತದೆ. ಮತದಾರರ ಭಾವಚಿತ್ರದ ಗುರುತಿನ ಚೀಟಿಯನ್ನು ಸಹ ವಿತರಿಸಲಾಗುತ್ತದೆ. ಇದರಿಂದ 18 ವರ್ಷ ಪೂರೈಸಿದವರು ನೋಂದಣಿಗಾಗಿ ಒಂದೊಂದು ವರ್ಷ ಕಾಯುವಿಕೆಯು ತಪ್ಪುತ್ತದೆ. ಮಧ್ಯಂತರ ಅವಧಿಯಲ್ಲಿ ನಡೆಯುವ ಚುನಾವಣೆಗಳಲ್ಲಿ ಮತ ಚಲಾಯಿಸಬಹುದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
* ಸ್ವತಃ ಅಡ್ಡ ಪರಿಶೀಲನೆ
ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ನೇಮಿಸಿಕೊಂಡಿರುವ ಬೂತ್ ಲೆವೆಲ್ ಏಜೆಂಟ್‌ಗಳು ಸಂಬಂಧಪಟ್ಟ ಮತಗಟ್ಟೆ ಹಂತದ ಅಧಿಕಾರಿಗೆ ಪ್ರತಿ ದಿನ 10 ನಮೂನೆಗಳನ್ನು ನಿರಂತರ ಪರಿಷ್ಕರಣೆಯಲ್ಲಿ ಸಲ್ಲಿಸಲು ಅವಕಾಶವಿದೆ. ನಿಗದಿತ ಅವಧಿಯಲ್ಲಿ ಒಬ್ಬ ಬೂತ್ ಲೆವೆಲ್ ಏಜೆಂಟ್ 30 ಕ್ಕಿಂತ ಹೆಚ್ಚು ನಮೂನೆಗಳನ್ನು ದೃಢೀಕರಿಸಿ ಸಲ್ಲಿಸಿದಲ್ಲಿ, ಆ ಮತಗಟ್ಟೆಯಲ್ಲಿ ಖುದ್ದು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿ ಇಲ್ಲವೇ ಸಹಾಯಕ ಮತದಾರರ ನೋಂದಣಾಧಿಕಾರಿ ಅಡ್ಡ ಪರಿಶೀಲನೆ ನಡೆಸುತ್ತಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
Voter Service Portal (VSP) ಮತ್ತು Voter Helpline App (VHA) ಮೂಲಕ ಮತದಾರ ಪಟ್ಟಿ ಸೇರ್ಪಡೆ, ರದ್ದು ಮತ್ತು ತಿದ್ದುಪಡಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹಾಗೆಯೇ ಇ-ಎಪಿಕ್ (ಭಾವಚಿತ್ರವುಳ್ಳ ಮತದಾರರ ಗುರುತಿನ ಚೀಟಿ) ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮತದಾರರ ಸಹಾಯವಾಣಿ 1950 ಗೆ ಕರೆ ಮಾಡಬಹುದಾಗಿದೆ.