

ಮೈಸೂರು: ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳನ್ನು ಅರ್ಹತಾ ದಿನಾಂಕ 2025ರ ಜ.11ರ ಅನ್ವಯ ಪರಿಷ್ಕರಿಸಲು ಭಾರತ ಚುನಾವಣಾ ಆಯೋಗವು ವೇಳಾಪಟ್ಟಿ ನಿಗದಿಪಡಿಸಿದೆ.
ಅ.9 ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ ಮಾಡಲಾಗಿದ್ದು, ನ.28ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಬಹುದಾಗಿದೆ. ನ.9, 10, 23 ಮತ್ತು 24 ರಂದು ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ವಿಶೇಷ ಆಂದೋಲನ ದಿನಗಳಾಗಿದ್ದು, ಡಿ.24ರ ಒಳಗಾಗಿ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಮಾಡಲಾಗುವುದು.
ಜ.1ರ ಒಳಗೆ ಅಂತಿಮ ಮತದಾರರ ಪಟ್ಟಿಯ ಪರಿಶೀಲನೆ ಹಾಗೂ ಪ್ರಕಟಣೆಗೆ ಆಯೋಗದಿಂದ ಅನುಮತಿ ಪಡೆಯುವುದು ಹಾಗೂ ಡೇಟಾಬೇಸ್ ಅನ್ನು ಕಾಲೋಚಿತಗೊಳಿಸುವುದು ಮತ್ತು ಸಪ್ಲಿಮೆಂಟರಿ ಪಟ್ಟಿ ಮುದ್ರಣ ಮಾಡಲಾಗುವುದು. ಜ.6ರಂದು ಅಂತಿಮ ಮತದಾರರ ಪಟ್ಟಿಯ ಪ್ರಕಟಣೆ ಮಾಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
18-19 ವಯಸ್ಸಿನ ಯುವಕ, ಯುವತಿಯರು ಹಾಗೂ ಹೆಸರು ನೋಂದಣಿಯಾಗದ ಅರ್ಹ ಮತದಾರರು, ಅವರ ಹೆಸರು ಪ್ರತಿಶತ 100ರಂತೆ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು, ಮತದಾರರ ನೋಂದಣಿ ವಿಶೇಷ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸದರಿ ದಿನಗಳಂದು ಪ್ರತಿ ಮತಗಟ್ಟೆಗಳಿಗೆ ನಿಯೋಜಿಸಿರುವ ಬಿಎಲ್‌ಒ (ಮತಗಟ್ಟೆ ಅಧಿಕಾರಿಗಳು) ಮತಗಟ್ಟೆಗಳಲ್ಲಿ ಹಾಜರಾಗಿ ಪರಿಷ್ಕರಣೆ ಕಾರ್ಯನಿರ್ವಹಿಸುವರು.
ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ ವೆಬ್‌ಸೈಟ್ನ https://ceo.karnataka.gov.in ಲ್ಲಿ ಪ್ರಕಟಿಸಲಾಗುವುದು. ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಗ್ಗೆ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ. ಸರಿಯಾದ ಹೆಸರನ್ನು ನಮೂದುಗಳೊಂದಿಗೆ ನೋಂದಾಯಿಸಿದ ಬಗ್ಗೆ ಖಚಿತಪಡಿಸಿಕೊಳ್ಳಬಹುದು.
ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳುವುದು. ಒಂದು ಪಕ್ಷ ಅವರ ಹೆಸರು ಕೈಬಿಟ್ಟು ಹೋಗಿದ್ದಲ್ಲಿ ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿ ಗಮನಕ್ಕೆ ತಂದು ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿಯಲ್ಲಿ ಹೆಸರು ಸೇರ್ಪಡೆ ಮಾಡಿಸಬೇಕು.
ಕರಡು ಮತದಾರರ ಪಟ್ಟಿಯಲ್ಲಿ ಮೃತ ಮತದಾರರ ಹೆಸರು ಉಳಿದುಕೊಂಡಿದ್ದಲ್ಲಿ ಅದರ ಬಗ್ಗೆ ಮಾಹಿತಿ, ದಾಖಲಾತಿ ಹೊಂದಿರುವ ಮೃತ ಮತದಾರರ ಕುಟುಂಬದ ಸದಸ್ಯರು ಅಥವಾ ಆ ಬಗ್ಗೆ ಮಾಹಿತಿ ಹೊಂದಿದ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಬೂತ್‌ಮಟ್ಟದ ಏಜೆಂಟರ್‌ಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನೀಡಬೇಕು. ಅಂತಹ ಮೃತ ಮತದಾರರ ಹೆಸರು ಪ್ರಮಾಣಿತ ಕಾರ್ಯನಿರ್ವಹಣಾ ಪದ್ಧತಿಗೆ ಅನುಗುಣವಾಗಿ ಕೈಬಿಡಲು ಸಹಕಾರ ನೀಡಬೇಕು ಎಂದು ತಿಳಿಸಲಾಗಿದೆ.
ಕರಡು ಮತದಾರರ ಪಟ್ಟಿಯಲ್ಲಿರುವ ಯಾವುದೇ ಮತದಾರರ ಭಾವಚಿತ್ರ ಅಳವಡಿಸದಿದ್ದಲ್ಲಿ, ಭಾವಚಿತ್ರವು ಅಸ್ಪಷ್ಟವಾಗಿದ್ದಲ್ಲಿ ಅಥವಾ ಚುನಾವಣಾ ಆಯೋಗವು ನಿಗದಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿಲ್ಲದಿದ್ದರೆ, ಇನ್ನಿತರ ದೋಷವಿರುವ ಭಾವಚಿತ್ರ ತಿದ್ದುಪಡಿ ಅರ್ಜಿಯ ಮೂಲಕ ಬದಲಿಸಿಕೊಳ್ಳಲು ಅವಕಾಶವಿದ್ದು, ಅದರ ಸದುಪಯೋಗ ಪಡೆದುಕೊಳ್ಳುವುದು. ಜಿಲ್ಲೆಯ ಯಾವುದೇ ಅರ್ಹ ಮತದಾರ, ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕೈಬಿಟ್ಟುಹೋಗದಂತೆ ನೋಂದಣಿ ಮಾಡಿಸಿಕೊಳ್ಳಬೇಕು.
ಮತದಾರರ ಪಟ್ಟಿಗೆ ನೋಂದಾಯಿಸಲು ವರ್ಷದಲ್ಲಿ ನಾಲ್ಕು ಅವಕಾಶಗಳಿದ್ದು, ಮೊದಲಿದ್ದಂತೆ ಅರ್ಹತಾ ದಿನಾಂಕವಾದ ಜ.1 ರವರೆಗೂ ಕಾಯಬೇಕಾಗಿಲ್ಲ. 17+ವಯಸ್ಸಿನ ಯುವಕರಿಗೆ ಮುಂಗಡ ಅರ್ಜಿ ಸಲ್ಲಿಸುವ ಸೌಲಭ್ಯ ಕಲ್ಪಿಸಲಾಗಿದ್ದು, ಒಂದೇ ತರಹದ ಹೆಸರು, ಫೋಟೋ ನಮೂದು ಹೊಂದಿರುವ ಮತದಾರರ ಪರಿಶೀಲನೆಗೆ ಆದ್ಯತೆ ನೀಡಲಾಗುವುದು.
ಸಮರ್ಪಕ ಮತದಾರರ ಪಟ್ಟಿಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಪರಿಶೀಲನೆ, ಮೇಲ್ವಿಚಾರಣೆ ಮಾಡಲಾಗುವುದು.
ಪ್ರಸ್ತುತ ಜಾರಿಯಲ್ಲಿರುವ ಜ.1ರ ಅರ್ಹತಾ ದಿನಾಂಕದ ಜತೆಗೆ ಏ.1ನೇ, ಜು.1ನೇ ಮತ್ತು ಅ.1ರಂದು ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಆಯಾ ತ್ರೈಮಾಸಿಕದಲ್ಲಿ 18 ವರ್ಷ ತುಂಬುವ ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಜತೆ ಮತದಾರರ ಭಾವಚಿತ್ರದ ಗುರುತಿನ ಚೀಟಿ ಸಹ ವಿತರಿಸಲಾಗುವುದು.
ಪರಿಷ್ಕರಣೆ ಸಂದರ್ಭದಲ್ಲಿ ಏ.1, ಜು.1, ಅ.1ಕ್ಕೆ 18 ವರ್ಷ ತುಂಬುವ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮುಂಗಡ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದರಿಂದ 18 ವರ್ಷ ಪೂರೈಸಿದ ಯುವಕರು ನೋಂದಣಿಗಾಗಿ ಮುಂದಿನ ವರ್ಷದ ವಿಶೇಷ ಪರಿಷ್ಕರಣೆವರೆಗೆ ಕಾಯುವುದನ್ನು ತಪ್ಪಿಸಲಾಗಿದೆ. ಮಧ್ಯಂತರ ಅವಧಿಯಲ್ಲಿ ನಡೆಯುವ ಚುನಾವಣೆಗಳಲ್ಲಿ ಮತ ಚಲಾವಣೆಗೆ ಅವಕಾಶ ದೊರೆಯಲಿದೆ.
ನಮೂನೆ-6 ರಲ್ಲಿ ಸೇರ್ಪಡೆ, ನಮೂನೆ-6ಎರಲ್ಲಿ ಅನಿವಾಸಿ ಭಾರತೀಯರು ಅವರ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ನಮೂನೆ-6ಬಿನಲ್ಲಿ ಮತದಾರರ ಪಟ್ಟಿಯೊಂದಿಗೆ ಆಧಾರ್ ಜೋಡಣೆ ಮಾಡಿಕೊಳ್ಳಬಹುದು, ನಮೂನೆ-7 ರಲ್ಲಿ ತೆಗೆದುಹಾಕುವುದು (ಮರಣ, ಸ್ಥಳಾಂತರ, ಪುನರಾವರ್ತನೆ) ಹಾಗೂ ನಮೂನೆ-8ರಲ್ಲಿ ಮತದಾರರ ಹೆಸರು ವಿಳಾಸ ಮತ್ತು ಭಾವಚಿತ್ರಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ, ಒಂದು ವಿಧಾನಸಭಾ ಕ್ಷೇತ್ರದಿಂದ ಬೇರೆ ವಿಧಾನಸಭಾ ಕ್ಷೇತ್ರಕ್ಕೆ ವರ್ಗಾವಣೆ, ಒಂದು ವಿಧಾನಸಭಾ ಕ್ಷೇತ್ರದಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವರ್ಗಾವಣೆ, ಬದಲಿ ಎಪಿಕ್‌ಗಾಗಿ ಮನವಿ ಮತ್ತು ಅಂಗವೈಕಲ್ಯ ಹೊಂದಿರುವ ಮತದಾರರ ಅವರ ಅಂಗವೈಕಲ್ಯವನ್ನು ದಾಖಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ: ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನೇಮಕವಾಗಿರುವ ಅಧಿಸೂಚಿತ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ನಿಗದಿತ ನಮೂನೆಗಳಲ್ಲಿ ಆನ್‌ಲೈನ್ ಮೂಲಕವೇ ಅವಶ್ಯಕತೆಗಳೊಂದಿಗೆ ಅರ್ಜಿ ಸಲ್ಲಿಸಲು ಆದ್ಯತೆ ನೀಡುವುದು. ಸಾರ್ವಜನಿಕರು ಹಕ್ಕು ಮತ್ತು ಆಕ್ಷೇಪಣೆಯ ಅವಧಿಯಲ್ಲಿ ಸಲ್ಲಿಸುವ ಅರ್ಜಿ ಆನ್‌ಲೈನ್ ಮೂಲಕವೇ ಸಲ್ಲಿಸುವ ಕುರಿತು ಜಾಗೃತಿ ಮೂಡಿಸುವುದು.
ಮತಗಟ್ಟೆಗಳ ರ‌್ಯಾಷನಲೈಜೇಷನ್ ಸಂಬಂಧ 1500ಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆ ವಿಭಜಿಸಿ ಹೆಚ್ಚುವರಿಯಾಗಿ ಮತಗಟ್ಟೆ ಸ್ಥಾಪಿಸಲಾಗಿದೆ. ಕಡಿಮೆ ಮತದಾರರಿರುವ ಮತಗಟ್ಟೆಗಳಲ್ಲಿ ಒಗ್ಗೂಡಿಸುವಿಕೆ ಕಾರ್ಯ ಕೈಗೊಳ್ಳಲಾಗಿದೆ. ಸೇರ್ಪಡೆ, ತಿದ್ದುಪಡಿ ಮಾಡುವ ವಿವರಗಳ ಮತದಾರರ ಗುರುತಿನ ಚೀಟಿಯನ್ನು ಸ್ಪೀಡ್‌ಪೋಸ್ಟ್ ಮುಖಾಂತರ ಮತದಾರರಿಗೆ ವಿತರಣೆ ಮಾಡಲಾಗುವುದು.
ಸಾರ್ವಜನಿಕರು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ವಿಶೇಷ ಆಂದೋಲನ ಕಾರ್ಯಕ್ರಮ ಸದುಪಯೋಗಪಡಿಸಿಕೊಂಡು ದೋಷರಹಿತ ಹಾಗೂ ಗುಣಾತ್ಮಕವಾದ ಮತದಾರರ ಪಟ್ಟಿಯ ಸಿದ್ಧತೆಯ ಕಾರ್ಯದಲ್ಲಿ ಮತದಾರರು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಪಿ.ಶಿವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2915 ಮತಗಟ್ಟೆಗಳು:
ಪ್ರಸ್ತುತ ವಿಧಾನಸಭಾ ಕ್ಷೇತ್ರವಾರು ಮತಗಟ್ಟೆಗಳ ವಿವರ: ಪಿರಿಯಾಪಟ್ಟಣ ಕ್ಷೇತ್ರದಲ್ಲಿ 235, ಕೃಷ್ಣರಾಜ ನಗರ ಕ್ಷೇತ್ರದಲ್ಲಿ 252, ಹುಣಸೂರು ಕ್ಷೇತ್ರದಲ್ಲಿ 274, ಹೆಗ್ಗಡದೇವನಕೋಟೆ ಕ್ಷೇತ್ರದಲ್ಲಿ 282, ನಂಜನಗೂಡು ಕ್ಷೇತ್ರದಲ್ಲಿ 246, ಚಾಮುಂಡೇಶ್ವರಿ ಕ್ಷೇತ್ರದಲ್ಲಿ 341, ಕೃಷ್ಣರಾಜ ಕ್ಷೇತ್ರದಲ್ಲಿ 265, ಚಾಮರಾಜ ಕ್ಷೇತ್ರದಲ್ಲಿ 248, ನರಸಿಂಹರಾಜ ಕ್ಷೇತ್ರದಲ್ಲಿ 283, ವರುಣ ಕ್ಷೇತ್ರದಲ್ಲಿ 261 ಹಾಗೂ ತಿ.ನರಸೀಪುರ ಕ್ಷೇತ್ರದಲ್ಲಿ 228 ಮತಗಟ್ಟೆಗಳಿದ್ದು, ಜಿಲ್ಲೆಯಲ್ಲಿ 2915 ಮತಗಟ್ಟೆಗಳಿವೆ.
ಜಿಲ್ಲೆಯಲ್ಲಿ 27.67 ಲಕ್ಷ ಮತದಾರರು:
ಕರಡು ಮತದಾರರ ಪಟ್ಟಿಯಂತೆ ವಿಧಾನಸಭಾ ಕ್ಷೇತ್ರವಾರು ಮತದಾರರ ಸಂಖ್ಯೆ ಬಿಡುಗಡೆ ಮಾಡಲಾಗಿದೆ.
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 1,98,638, ಕೃಷ್ಣರಾಜನಗರ ಕ್ಷೇತ್ರದಲ್ಲಿ 2,19,491, ಹುಣಸೂರು ಕ್ಷೇತ್ರದಲ್ಲಿ 2,48,704, ಹೆಗ್ಗಡದೇವನಕೋಟೆ ಕ್ಷೇತ್ರದಲ್ಲಿ 2,30,409, ನಂಜನಗೂಡು ಕ್ಷೇತ್ರದಲ್ಲಿ 2,24,019, ಚಾಮುಂಡೇಶ್ವರಿ ಕ್ಷೇತ್ರದಲ್ಲಿ 3,53,457, ಕೃಷ್ಣರಾಜ ಕ್ಷೇತ್ರದಲ್ಲಿ 2,61,120, ಚಾಮರಾಜ ಕ್ಷೇತ್ರದಲ್ಲಿ 2,60,502, ನರಸಿಂಹರಾಜ ಕ್ಷೇತ್ರದಲ್ಲಿ 3,17,887, ವರುಣ ಕ್ಷೇತ್ರದಲ್ಲಿ 2,42,268 ಹಾಗೂ ತಿ.ನರಸೀಪುರ ಕ್ಷೇತ್ರದಲ್ಲಿ 2,11,055 ಮತದಾರರಿದ್ದು, ಜಿಲ್ಲೆಯಲ್ಲಿ 13,61,452 ಪುರುಷ ಮತದಾರರು, 14,05,870 ಮಹಿಳಾ ಮತದಾರರು ಮತ್ತು 228 ತೃತೀಯ ಲಿಂಗಿಗಳು ಸೇರಿ ಒಟ್ಟು 27,67,550 ಮತದಾರರಿದ್ದಾರೆ.