

ಚಾಮರಾಜನಗರ: ಮತದಾರರ ಪಟ್ಟಿಯ ಜಿಲ್ಲಾ ವೀಕ್ಷಕಿ ಹಾಗೂ ಸಮಗ್ರ ಶಿಕ್ಷಣ ರಾಜ್ಯ ಯೋಜನಾ ನಿರ್ದೇಶಕಿ ಬಿ.ಬಿ. ಕಾವೇರಿ ಜಿಲ್ಲೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಸಭೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಪರಿಶೀಲಿಸಿದರು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಬಿಡತಕ್ಕವು, ತಿದ್ದುಪಡಿ, ಸ್ಥಳಾಂತರ ಸಂಬಂಧ ಸ್ವೀಕೃತವಾಗಿರುವ ಹಕ್ಕು ಆಕ್ಷೇಪಣೆ, ನಮೂನೆಗಳ ಅರ್ಜಿಗಳನ್ನು ತಂತ್ರಾಂಶದಲ್ಲಿ ದಾಖಲಿಸುವಾಗ ಪೂರಕ ದಾಖಲಾತಿಗಳು ಸರಿ ಇರುವ ಬಗ್ಗೆ ಖಚಿತ ಪಡಿಸಿಕೊಂಡಿರಬೇಕು ಎಂದರು.
ಮಾರ್ಗಸೂಚಿಗಳ ಪ್ರಕಾರ ಅರ್ಜಿ ಇತ್ಯರ್ಥಪಡಿಸುವ ಬಗ್ಗೆ ಮತದಾರರ ನೋಂದಣಾಧಿಕಾರಿ, ಸಹಾಯಕ ನೋಂದಣಾಧಿಕಾರಿಗಳು ಕ್ರಮವಹಿಸಬೇಕೆಂದು ತಿಳಿಸಿದರು. ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಪರಿಷ್ಕರಣೆ ಕಾರ್ಯ ಸಂಬಂಧ ವಿವರ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಉಪವಿಭಾಗಾಧಿಕಾರಿ ಗೀತಾ ಹುಡೇದಾ, ತಹಸೀಲ್ದಾರರಾದ ಬಸವರಾಜು, ರವಿಶಂಕರ್, ಆನಂದಯ್ಯ, ಮಂಜುಳಾ, ಶಿವರಾಜು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.