ಮತದಾರರ ಪಟ್ಟಿ ಆಕ್ಷೇಪಣೆಗೆ ನ.28 ಕಡೇದಿನ

CTD VOTER LIST...
Published on

ಚಿತ್ರದುರ್ಗ: ವಿಧಾನಸಭೆ ಕ್ಷೇತ್ರವಾರು ಕರಡು ಮತದಾರರ ಪಟ್ಟಿ ಕುರಿತಂತೆ ಸಾರ್ವಜನಿಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಅ.29ರಿಂದ ನವೆಂಬರ್ 28ರವರೆಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಡಿಸಿ ಕಚೇರಿಯಲ್ಲಿ ಮಂಗಳವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಪಟ್ಟಿ ಪ್ರಕಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಪಟ್ಟಿ ಪ್ರಕಟಿಸಲಾಗಿದೆ. ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025 ಕಾರ್ಯವೂ ಪ್ರಾರಂಭವಾಗಿದೆ ಎಂದು ತಿಳಿಸಿದರು.

ಮತದಾರರ ನೋಂದಣಿಗೆ ಸಂಬಂಧಿಸಿದಂತೆ 2024ರ ನವೆಂಬರ್ 9,10,23 ಮತ್ತು 24ರಂದು ಜಿಲ್ಲೆಯಲ್ಲಿ ವಿಶೇಷ ನೋಂದಣಿ ನಡೆಯಲಿದೆ. ಅರ್ಹರನ್ನು ಪಟ್ಟಿಗೆ ಸೇರಿಸಲಾಗುವುದು. 2024ರ ಡಿ.24ರಂದು ಹಕ್ಕು ಮತ್ತು ಆಕ್ಷೇಪಣೆಗಳನ್ನು ತೀರ್ಮಾನಿಸ ಲಾಗುವುದು. 2025ರ ಜನವರಿ 6ರಂದು ಅಂತಿಮವಾಗಿ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಸದ್ಯ 1661 ಮತಗಟ್ಟೆಗಳು, 14,35,994 ಮತದಾರರಿದ್ದಾರೆ. ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳಿಸಲು ರಾಜಕೀಯ ಪಕ್ಷಗಳು ಪಟ್ಟಿ ಪರಿಷ್ಕರಣೆ ಕುರಿತು ಪ್ರಚಾರ ನೀಡಬೇಕು. ಪಕ್ಷದವರು ಪ್ರತಿ ಮತಗಟ್ಟೆಗೂ ಏಜೆಂಟರನ್ನು ನೇಮಿಸಬೇಕೆಂದರು.

ಮತದಾರರ ಪಟ್ಟಿಗೆ ಹೆಸರು ಸೇರಿಸಲು 2025ರ ಜನವರಿ 1,ಏಪ್ರಿಲ್ 1,ಜುಲೈ 1 ಹಾಗೂ ಅಕ್ಟೋಬರ್ 1ಕ್ಕೆ, 18ವರ್ಷ ಪೂರ್ಣಗೊಳ್ಳುವ ಯುವಜನರು ಹಾಗೂ ಅರ್ಹ ಮತದಾರರು ತಿದ್ದುಪಡಿ ಅಥವಾ ಬೇರೆ ಮತಗಟ್ಟೆಗೆ ವರ್ಗಾಯಿಸಲು ನಿಗದಿತ ನಮೂನೆಗಳಲ್ಲಿ 2024ರ ಅ.29ರಿಂದ ನವೆಂಬರ್ 28ರೊಳಗೆ ತಮ್ಮ ವ್ಯಾಪ್ತಿಯ ಮತದಾನ ಕೇಂದ್ರ, ತಾಲೂಕು ಕಚೇರಿ, ಎಸಿ ಕಚೇರಿಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು.

ಕರಡು ಮತದಾರರ ಪಟ್ಟಿಯನ್ನು ಮತಗಟ್ಟೆ ಕೇಂದ್ರ, ಗ್ರಾಪಂ ಕಚೇರಿ, ನಗರಸಭೆ, ಪುರಸಭೆ ಹಾಗೂ ಪಪಂ, ತಾಲೂಕು ಕಚೇರಿ, ಎಸಿ ಕಚೇರಿ ಹಾಗೂ  www.ceokarnataka.kar.nic.in ಮತ್ತು https://chitradurga.nic.inವೆಬ್‌ಸೈಟ್‌ನಲ್ಲಿ ಪರಿಶೀಲಿಸಿಬಹುದು. ಅರ್ಜಿಗಳನ್ನು VHA (Voter help Line) ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ ಎಂದರು.

ಪ್ರತಿಯೊಬ್ಬ ಯುವ ಮತದಾರರು ಪಟ್ಟಿಯಲ್ಲಿ ತಪ್ಪದೇ ತಮ್ಮ ಹೆಸರು ನೋಂದಾಯಿಸ ಬೇಕು. ಪ್ರಾಚಾರ್ಯರು ಎಲ್ಲ್ಲ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಪಟ್ಟಿ ಕುರಿತು ಸಂದೇಹಗಳಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಹಾಯವಾಣಿ ಸಂಖ್ಯೆ-ಟೋಲ್ ಫ್ರೀ ಸಂಖ್ಯೆ 1950ಕ್ಕೆ ಕರೆ ಮಾಡಬಹುದಾಗಿದೆ ಎಂದರು.

ಎಸಿ ಎಂ.ಕಾರ್ತಿಕ್, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ‌್ಯದರ್ಶಿ ಡಿ.ಎನ್.ಮೈಲಾರಪ್ಪ, ಸಿಪಿಐ(ಎಂ)ಡಿಒಸಿ ಸಿ.ಕೆ.ಗೌಸ್‌ಪೀರ್, ಜಿಲ್ಲಾ ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ‌್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯ ಟಿ.ಯಶವಂತ ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net