

ಬೀದರ್: ಮತದಾರರ ಪಟ್ಟಿಯಲ್ಲಿ ಹೊಸ ಹೆಸರು ಸೇರ್ಪಡೆ, ತಿದ್ದುಪಡಿ, ಮಾರ್ಪಾಡು ಕುರಿತು ಗ್ರಾಪಂ ಹಾಗೂ ಹೋಬಳಿ ಮಟ್ಟದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಸಬೇಕು. ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೂ ಆದ ಜಿಲ್ಲಾ ಚುನಾವಣಾ ಪಟ್ಟಿ ವೀಕ್ಷಕ ವಿನ್ಸೆಂಟ್ ಡಿಸೋಜಾ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಗ್ರಾಪಂ ಚುನಾವಣೆ ತಯಾರಿ ಕುರಿತ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಎಲ್ಲ ಗ್ರಾಮಗಳಲ್ಲಿ ಬಿಎಲ್ಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವ ಬಗ್ಗೆ ತಿಳಿವಳಿಕೆ ನೀಡಬೇಕು. ಮತದಾನಕ್ಕೆ ಅರ್ಹರಾಗಿರುವ ಯಾರೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಬಿಎಲ್ಒಗಳು ಎಲ್ಲಿಯಾದರೂ ನಿವೃತ್ತಿಯಾದಲ್ಲಿ ತಕ್ಷಣ ಚುನಾವಣಾ ವಿಭಾಗದವರು ಮಾಹಿತಿ ಪಡೆದು, ಬೇರೊಬ್ಬರನ್ನು ನಿಯೋಜಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆಯ ನಂತರ ಯಾವುದೇ ರೀತಿಯ ದೂರುಗಳು ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಡಿಸಿ ರಾಮಚಂದ್ರನ್ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಪ್ರಕ್ರಿಯೆ ಚುರುಕಿನಿಂದ ನಡೆಯಬೇಕು. ಈ ವಿಷಯದಲ್ಲಿ ಲೋಪಗಳಾದಲ್ಲಿ ಸಂಬಂಧಿತ ತಹಸೀಲ್ದಾರರನ್ನು ಹೊಣೆಗಾರರಾಗಿ ಮಾಡುವುದಾಗಿ ಎಚ್ಚರಿಸಿದರು.
ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ್, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ್, ಭುವನೇಶ ಪಾಟೀಲ್, ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ, ಡಿಎಚ್ ಒ ಡಾ.ವಿ.ಜಿ.ರೆಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೃಷ್ಣಾರೆಡ್ಡಿ, ಆರೋಗ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಹಾಯವಾಣಿ ಆರಂಭ
ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜಿಲ್ಲಾ ಕೇಂದ್ರ ಹಾಗೂ ಎಲ್ಲ ತಹಸಿಲ್ ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಸಹಾಯವಾಣಿ ಕೇಂದ್ರಗಳ ವಿವರ ಇಂತಿದೆ. ಜಿಲ್ಲಾಧಿಕಾರಿ ಕಚೇರಿ:08482-229688. ಬಸವಕಲ್ಯಾಣ ತಹಸೀಲ್ದಾರ್ ಕಚೇರಿ:08481-250338, 9663963839, ಹುಮನಾಬಾದ್ ತಹಸಿಲ್ ಕಚೇರಿ: 08483-270051, 9164171007, ಬೀದರ್ ದಕ್ಷಿಣ:08482-226459, 8867665484, ಬೀದರ ಉತ್ತರ: 08482-226459, 9916734776, ಭಾಲ್ಕಿ: 08484-262218, 9164932279, ಔರಾದ್ ತಹಸಿಲ್ ಕಚೇರಿ:08485-280024, 9448205670. ಮತದಾರರ ಪಟ್ಟಿಯಲ್ಲಿ ಹೊಸ ಮತದಾರರ ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ ಹೀಗೆ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಯಾವುದೇ ರೀತಿಯ ಮಾಹಿತಿ ಪಡೆಯಲು ಮತ್ತು ಗೊಂದಲ ನಿವಾರಿಸಿಕೊಳ್ಳಲು ಈ ಸಹಾಯವಾಣಿ ಕೇಂದ್ರಗಳಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ತಿಳಿಸಿದ್ದಾರೆ.
ರಾಜಕೀಯ ಪಕ್ಷ ಮುಖಂಡರ ಸಭೆ
ಜಿಲ್ಲಾ ಚುನಾವಣೆ ಪಟ್ಟಿ ವೀಕ್ಷಕ ವಿನ್ಸೆಂಟ್ ಡಿಸೋಜಾ ಅಧ್ಯಕ್ಷತೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪ್ರತಿನಿಧಿಗಳ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಡಿಸೋಜಾ, ರಾಜಕೀಯ ಪಕ್ಷದ ಮುಖಂಡರು ಬೂತ್ ಮಟ್ಟದ ಏಜೆಂಟ್ಗಳನ್ನು ಮುಂಚಿತವಾಗಿ ನೇಮಿಸಿ, ಈ ಬಗ್ಗೆ ವರದಿ ಸಲ್ಲಿಸಬೇಕು ಎಂದರು. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಇರುವ ಆಕ್ಷೇಪಣೆಗಳ ಬಗ್ಗೆ ಮುಖಂಡರಿಂದ ವಿವರಣೆ ಪಡೆದರು.